SUDDIKSHANA KANNADA NEWS/ DAVANAGERE/ DATE:13-10-2024
ದಾವಣಗೆರೆ: ಸಿಎಂ ಸಿದ್ದರಾಮಯ್ಯರು ಮಾತೆತ್ತಿದರೆ ಕುರಿ ಕಾಯುವವನು ಎರಡು ಬಾರಿ ಮುಖ್ಯಮಂತ್ರಿಯಾಗಬಾರದಾ ಎಂಬ ಹೇಳಿಕೆ ನೀಡುತ್ತಾರೆ. ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದು ಬಿಜೆಪಿ – ಜೆಡಿಎಸ್ ಗೆ ಅರಗಿಸಿಕೊಳ್ಳಲಾಗದು ಎನ್ನುವ ಸಿದ್ದರಾಮಯ್ಯರು ಈ ಹಿಂದೆ ಸಿಎಂ ಆಗಿದ್ದಾಗ ಚಿಕ್ಕಮಗಳೂರಿನಲ್ಲಿ ಡಿವೈಎಸ್ಪಿ ಆಗಿದ್ದವರು ಆತ್ಮಹತ್ಯೆ ಮಾಡಿಕೊಂಡರು. ಕುರುಬ ಸಮಾಜದವರು. ಏನು ಮಾಡಿದರು ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಕಿಡಿಕಾರಿದರು.
ನಗರದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವಾಗಲೂ ನಾನು ಕುರಿ ಕಾಯೋನು. ನಾನು ಕುರಿ ಕಾಯೋನು ಎನ್ನುವ ಸಿಎಂ ಸಿದ್ದರಾಮಯ್ಯರ ತೋಟದಲ್ಲಿ ಎಷ್ಟು ಕುರಿಗಳ ಸಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನನ್ನ ತೋಟದಲ್ಲಿ 500 ಕುರಿಗಳಿವೆ. ಕುರಿ ಕಾಯುವವನು ಸಿಎಂ ಆಗುವುದು ಇಷ್ಟವಿಲ್ಲ ಎಂದು ಎಷ್ಟು ಬಾರಿ ಹೇಳಿಕೊಂಡು ಓಡಾಡುತ್ತೀರಿ ಎಂದು ಪ್ರಶ್ನಿಸಿದರು.
ಈ ದೇಶದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನವು ಕುರಿಕಾಯುವವನಿಗೂ ಹಾಗೂ ಟಾಟಾಬಿರ್ಲಾಗೂ ಕೊಟ್ಟಿರುವುದು ಒಂದೇ ಶಕ್ತಿ ಎಂದು ವಾಗ್ದಾಳಿ ನಡೆಸಿದರು.
ಯಾರು ಏನು ಬೇಕಾದರೂ ಆಗಬಹುದು. ಒಳ್ಳೆಯ ಕೆಲಸ ಮಾಡಿದರೆ ನಾವ್ಯಾಕೆ ಸುಖಾಸುಮ್ಮನೆ ಬೈಯ್ಯುತ್ತೇವೆ. ಹಾಗೇನಾದರೂ ನಾವು ಮಾತನಾಡಿದರೆ ಜನರು ನಮ್ಮನ್ನು ಹುಚ್ಚರು ಎನ್ನುತ್ತಾರೆ. ನೀವು ಮಾಡಿರುವ ತಪ್ಪು ಬಟಾಬಯಲಾಗಿದೆ. ಕೋರ್ಟ್ ನಲ್ಲಿ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಆದರೂ ನಾನೇನೂ ತಪ್ಪು ಮಾಡಿಲ್ಲ ಎಂಬ ದುರಂಹಕಾರದ ಮಾತು ಸಿದ್ದರಾಮಯ್ಯರಿಂದ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿನ ಸರ್ಕಾರದಿಂದ ನಾಡಿನ ಜನತೆಗೆ ಒಳಿತಾಗಲ್ಲ. ಅಧಿಕಾರಕ್ಕೆ ಬಂದ ಬಳಿಕ ಸರಿಯಾಗಿ ಗುಂಡಿ ಮುಚ್ಚಲು ಆಗುತ್ತಿಲ್ಲ ಇವರ ಯೋಗ್ಯತೆಗೆ? ಅಕಾಲಿಕ ಮಳೆಯಾಗಿ ಬೆಳೆ ನಾಶವಾಗಿದೆ. ಕೇಳುವವರೇ ದಿಕ್ಕಿಲ್ಲದಂತಾಗಿದೆ. ರಾಜ್ಯದಲ್ಲಿ ಸಿಎಂ ಖುರ್ಚಿಗೆ ನಡೆಯುತ್ತಿರುವ ಪೈಪೋಟಿ, ಬೆಳವಣಿಗೆಗಳೇ ಮಾಧ್ಯಮಗಳಲ್ಲಿ ಬರುತ್ತಿವೆ. ಕೈಗಾರಿಕೆ ಸ್ಥಾಪನೆ ಮಾಡಲು ರಾಜ್ಯಕ್ಕೆ ಬರುತ್ತಿಲ್ಲ, ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.