SUDDIKSHANA KANNADA NEWS/ DAVANAGERE/ DATE:13-10-2024
ದಾವಣಗೆರೆ: ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ವಾಪಸ್ ಪಡೆದಿರುವುದು ಚರ್ಚೆಯಾಗುತ್ತಿದೆ. ಗಲಭೆ ಮಾಡಿ ಅಶಾಂತಿ ಉಂಟು ಮಾಡುವವರ ಮೊಕದ್ದಮೆ ವಾಪಸ್ ಪಡೆಯುತ್ತಿರುವುದು ಗಲಭೆಕೋರರಿಗೆ ರಾಜ್ಯ ಸರ್ಕಾರವು ರಕ್ಷಣೆ ಕೊಟ್ಟಂತಾಗಿದೆ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸರ್ಕಾರದಲ್ಲಿ ತೆಗೆದುಕೊಳ್ಳುವ ನಿರ್ಧಾರ ನೋಡಿದಾಗ ದ್ವೇಷದ ರಾಜಕಾರಣ ಕಂಡು ಬರುತ್ತಿದೆ. ಮತ್ತೊಂದೆಡೆ ಸಮಾಜ ಉತ್ತಮ ಮಾರ್ಗದಲ್ಲಿ ನಡೆಯುವ ಅವಶ್ಯಕತೆ ಬೇಕಿಲ್ಲ. ದಸರಾ ಹಬ್ಬದ ಸಂದರ್ಭದಲ್ಲಿ ಹೇಳಿಕೆಗಳು, ಜಾಹೀರಾತು ಗಮನಿಸಿದ್ದೇನೆ. ಜಾಹೀರಾತಿನಲ್ಲಿ ಕೀಳುಮಟ್ಟದ ರಾಜಕೀಯ ಮಾಡಲಾಗುತ್ತಿದೆ. ಚಾಮುಂಡೇಶ್ವರಿ ಅನುಗ್ರಹ ನಾಡಿನ ಜನರಿಗೆ ಸಿಗಬೇಕು. ಆದ್ರೆ, ಕೀಳುಮಟ್ಟದ ಜಾಹೀರಾತಿಗೆ 17 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಯಾವುದಾದರೂ ಒಂದು ಮಾದರಿ ಗ್ರಾಮ ಪಂಚಾಯಿತಿ ಮಾಡಬಹುದಿತ್ತು ಎಂದು ಹೇಳಿದರು.
ಸರ್ಕಾರದ ದುಡ್ಡನ್ನು ಹಿಂಬಾಲಕರು ಜಾಹೀರಾತು ಹೆಸರಿನಲ್ಲಿ ನಾಡಿನ ಜನರ ತೆರಿಗೆ ಹಣ ಲೂಟಿಯಾಗುತ್ತಿರುವುದು ಹಲವು ನಿದರ್ಶನ ನೀಡಬಹುದು. ರಾಜ್ಯದ ಅಭಿವೃದ್ಧಿಗಿಂತ ಹೆಚ್ಚಾಗಿ, ನಾಡಿನ ತೆರಿಗೆ ಹಣ ಲೂಟಿ ಹೊಡೆಯುವುದರಲ್ಲಿ ಆನಂದವಾಗಿ ಈ ಸರ್ಕಾರ ಮುಂದುವರಿದಿದೆ ಎಂದು ಆರೋಪಿಸಿದರು.
ಈ ವೇಳೆ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಮಾಜಿ ಶಾಸಕ ಶಿವಶಂಕರ್, ಶಾಸಕ ಬಿ. ಪಿ. ಹರೀಶ್ ಹಾಜರಿದ್ದರು.