Home ದಾವಣಗೆರೆ ಕ್ರಾಂತಿಕಾರಿ ಪುರುಷರ ಪುಸ್ತಕ ಹೆಚ್ಚಾಗಿ ಓದಿ ಆದರ್ಶ ಮೈಗೂಡಿಸಿಕೊಳ್ಳಿ: ಜಿ. ಬಿ. ವಿನಯ್ ಕುಮಾರ್ ಕರೆ
ದಾವಣಗೆರೆಬೆಂಗಳೂರು

ಕ್ರಾಂತಿಕಾರಿ ಪುರುಷರ ಪುಸ್ತಕ ಹೆಚ್ಚಾಗಿ ಓದಿ ಆದರ್ಶ ಮೈಗೂಡಿಸಿಕೊಳ್ಳಿ: ಜಿ. ಬಿ. ವಿನಯ್ ಕುಮಾರ್ ಕರೆ

Share
ಕ್ರಾಂತಿಕಾರಿ
Share

ದಾವಣಗೆರೆ: 12 ನೇ ಶತಮಾನದಲ್ಲಿ ಸಮಾನತೆಗೆ ಕ್ರಾಂತಿಕಾರಿ ಮುನ್ನುಡಿ ಬರೆದ ಬಸವಣ್ಣನವರಂಥ ಮಹನೀಯರು ಮತ್ತು ಕ್ರಾಂತಿಕಾರಿಗಳ ಜೀವನಗಾಥೆ ಕುರಿತಾದ ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ಆಗ ಮಾತ್ರ ನಮ್ಮಲ್ಲಿನ ಹಲವು ಪ್ರಶ್ನೆಗಳು ಮತ್ತು ಕುತೂಹಲಗಳಿಗೆ ಉತ್ತರ ಸಿಗುತ್ತದೆ. ಪುಸ್ತಕದಲ್ಲಿ ಸಿಗುವ ಮಾಹಿತಿ ಇನ್ನೆಲ್ಲಿಯೂ ಸಿಗಲಾರದು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.

ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ದಾವಣಗೆರೆ ತಾಲೂಕು ಘಟಕದ ಆಶ್ರಯದಲ್ಲಿ ತಾಲೂಕಿನ ಗೋಪನಾಳು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಶರಣ ಅಲ್ಲಮಪ್ರಭು ಜಯಂತಿ ಹಾಗೂ ದತ್ತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪುಸ್ತಕ ಓದಿನ ಮಹತ್ವ ಮತ್ತು ಆದರ್ಶಗಳು

ವಿನಯ್ ಕುಮಾರ್ ಅವರು ಇಂದಿನ ಯುವ ಪೀಳಿಗೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವುದನ್ನು ಗಮನಿಸಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಕರೆ ನೀಡಿದರು.

  • ಕ್ರಾಂತಿಕಾರಿಗಳ ಓದು: ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರಂತಹ ಶರಣರ ಮತ್ತು ಕ್ರಾಂತಿಕಾರಿ ಪುರುಷರ ಜೀವನಗಾಥೆಗಳನ್ನು ಓದಬೇಕು.

  • ಪ್ರಶ್ನೆಗಳಿಗೆ ಉತ್ತರ: 12ನೇ ಶತಮಾನದ ಕಲ್ಯಾಣ ಕ್ರಾಂತಿ ಮತ್ತು ಸಮಾನತೆಯ ಹೋರಾಟದ ಕುರಿತಾದ ಕುತೂಹಲಗಳಿಗೆ ಪುಸ್ತಕಗಳಲ್ಲಿ ಮಾತ್ರ ಸಮರ್ಪಕ ಉತ್ತರ ಸಿಗುತ್ತದೆ.

  • ವ್ಯಕ್ತಿತ್ವ ವಿಕಸನ: ಕೇವಲ ಪಠ್ಯಪುಸ್ತಕವಲ್ಲದೆ ಕಥೆ, ಕಾದಂಬರಿ ಮತ್ತು ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಓದಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಐಎಎಸ್ (IAS) ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗೆ ವಿನಯ್ ಕುಮಾರ್ ಅವರು ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ:

  1. ನಿರಂತರ ಅಧ್ಯಯನ: ಐಎಎಸ್ ಮಾಡುವುದು ಸುಲಭವಲ್ಲ; ಅದಕ್ಕೆ 3 ರಿಂದ 4 ವರ್ಷಗಳ ಕಠಿಣ ಪರಿಶ್ರಮ, ಕಲಿಕೆ ಮತ್ತು ತಪಸ್ಸಿನಂತಹ ಅಧ್ಯಯನ ಅಗತ್ಯ.

  2. ಪತ್ರಿಕೋದ್ಯಮದ ಬಳಕೆ: ಪ್ರೌಢಶಾಲಾ ಹಂತದಿಂದಲೇ ಪ್ರತಿನಿತ್ಯ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದು ದೇಶ-ವಿದೇಶಗಳ ವಿದ್ಯಮಾನಗಳ ಬಗ್ಗೆ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

  3. ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಿಯುಸಿ ನಂತರ ದೇಶದ ಅತ್ಯುನ್ನತ ವಿದ್ಯಾಸಂಸ್ಥೆಗಳನ್ನು ಸೇರಲು ಪ್ರಯತ್ನಿಸಬೇಕು.

ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿ

ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಹಿರಿಯರ ಪಾತ್ರ ದೊಡ್ಡದಿದೆ ಎಂಬುದು ವಿನಯ್ ಕುಮಾರ್ ಅವರ ಪ್ರತಿಪಾದನೆ.

“ಕಷ್ಟ ಅನುಭವಿಸಿ ಅಧಿಕಾರಕ್ಕೆ ಬಂದವರು ಬಡವರ ಬಗ್ಗೆ ಕಾಳಜಿ ವಹಿಸುತ್ತಾರೆ. ಆದ್ದರಿಂದ ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸುವ ಜವಾಬ್ದಾರಿ ಹೊರಬೇಕು.” 

ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಮೊಬೈಲ್, ಇಂಟರ್ ನೆಟ್, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಯುವಪೀಳಿಗೆ ಮುಳುಗಿ ಹೋಗಿದೆ. ಇತಿಹಾಸ ಕುರಿತಾದ ಎಷ್ಟೋ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರೆಯುತ್ತದೆ. ಪ್ರತಿಯೊಬ್ಬರೂ ಸಾಹಿತ್ಯ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬಸವಣ್ಣನವರ ಜೀವನಚರಿತ್ರೆ ಪುಸ್ತಕಗಳನ್ನು ಓದಿ. ಆಗ ಕಲ್ಯಾಣ ಕ್ರಾಂತಿ ಏಕೆ ಆಯಿತು. ಬಳಿಕ ಕರ್ನಾಟಕದಲ್ಲಿ ಆದದ್ದೇನು ಎಂಬ ಬಗ್ಗೆ ಮಾಹಿತಿ ದೊರೆಯಲಿದೆ. 12 ನೇ ಶತಮಾನದಲ್ಲಿ ಸಮಾನತೆಗೆ ಹೋರಾಡಿದ ಬಸವಣ್ಣನವರಂಥವರು ಮತ್ತೆ ಯಾಕೆ ಬರಲಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುವುದು ಪುಸ್ತಕ ಓದಿ ತಿಳಿದುಕೊಂಡಾಗ ಮಾತ್ರ ಎಂದು ಅಭಿಪ್ರಾಯಪಟ್ಟರು.

ಮಾಹಿತಿ, ಜ್ಞಾನ ಸುಮ್ಮನೆ ಸಿಗುವುದಿಲ್ಲ. ಪಠ್ಯೇತರ ಪುಸ್ತಕಗಳನ್ನು ಓದಬೇಕು. ಕಥೆ, ಕಾದಂಬರಿ, ಸಾಮಾನ್ಯ ಜ್ಞಾನ, ಮಹನೀಯರು, ಕ್ರಾಂತಿಕಾರಿ ಪುರುಷರು, ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಸಮಾಜದ ಏಳಿಗೆ, ಸಮಾನತೆ,
ಅನಿಷ್ಟ ಪದ್ಧತಿಗಳ ವಿರುದ್ಧ ಸಮರ ಸಾರಿದವರು. ಸಮಾಜದ ಬದಲಾವಣೆಗೆ ಜೀವನವನ್ನೇ ಮುಡುಪಾಗಿಟ್ಟವರು. ಇಂಥವರ ಪುಸ್ತಕಗಳನ್ನು ಹೆಚ್ಚಾಗಿ ಓದುವ ಜೊತೆಗೆ ಆದರ್ಶ ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಐಎಎಸ್ ಸುಲಭವಾಗಿ ಮಾಡಲು ಆಗದು. ಸಾಕಷ್ಟು ಪರಿಶ್ರಮ, ಕಲಿಕೆ, ತಪಸ್ಸು, ಅಧ್ಯಯನ ಸೇರಿದಂತೆ ಕನಿಷ್ಠ ಮೂರರಿಂದ ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಲೇಬೇಕು. ಪ್ರೌಢಶಿಕ್ಷಣದಿಂದಲೇ ಪ್ರತಿನಿತ್ಯ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳನ್ನು ಹೆಚ್ಚಾಗಿ ಓದುವುದರಿಂದ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತಿಳಿಯುತ್ತದೆ. ಹಲವು ವಿಚಾರಗಳು ನಿತ್ಯವೂ ಪ್ರಕಟವಾಗುತ್ತಿರುತ್ತವೆ. ನಿತ್ಯವೂ ಪತ್ರಿಕೆಗಳನ್ನು ಆಸಕ್ತಿಯಿಂದ ಓದಿದರೆ ಜ್ಞಾನ ಹೆಚ್ಚಾಗುವ ಜೊತೆಗೆ ಆತ್ಮವಿಶ್ವಾಸವೂ ಜಾಸ್ತಿಯಾಗುತ್ತದೆ ಎಂದು ತಿಳಿಸಿದರು.

ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯುನ್ನತ ಮತ್ತು ಉತ್ಕೃಷ್ಟ ಶಿಕ್ಷಣ ಸಿಗದು. ಹಾಗೆಂದ ಮಾತ್ರಕ್ಕೆ ಸುಮ್ಮನೆ ಕುಳಿತುಕೊಳ್ಳಬೇಡಿ. ಕನಿಷ್ಠ ಪಿಯುಸಿ ಮುಗಿದ ಬಳಿಕವಾದರೂ ದೇಶದ ಅತ್ಯುನ್ನತ ವಿದ್ಯಾಸಂಸ್ಥೆಗಳಿಗೆ ಸೇರಿ. ಕಷ್ಟವಾಗಬಹುದು. ಆದರೂ ಪೋಷಕರು ಮಕ್ಕಳ ಕಲಿಕೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು. ಉತ್ತಮ ಶಿಕ್ಷಣ ಕೊಡಿಸಿದರೆ ಭವಿಷ್ಯದಲ್ಲಿ ಅತ್ಯುನ್ನತ ಹುದ್ದೆಗೆ ಹೋಗುತ್ತಾರೆ. ಮನೆಗೂ, ದೇಶಕ್ಕೂ ಆಸ್ತಿಯಾಗುತ್ತಾರೆ. ಕಷ್ಟ ಅನುಭವಿಸಿದವರು ಅಧಿಕಾರಕ್ಕೆ ಬಂದರೆ ಬಡವರ ಬಗ್ಗೆ ಕಾಳಜಿ ವಹಿಸುತ್ತಾರೆ. ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಹಾಗಾಗಿ, ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರದ್ದು ಎಂದು ಹೇಳಿದರು.

ದಾವಣಗೆರೆ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಬಿ. ರುದ್ರಗೌಡ ಗೋಪನಾಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರಯ್ಯ ಬಿ. ಎಂ. ಹೆಮ್ಮನಬೇತೂರು ಅಲ್ಲಮಪ್ರಭುಗಳ ಕುರಿತಂತೆ ಮಾತನಾಡಿದರು. ವೇದಿಕೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ಟಿ. ನಾಗರಾಜ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಬಿ. ಪರಮೇಶ್ವರಪ್ಪ, ಉಪಾಧ್ಯಕ್ಷ ಟಿ. ಎಂ. ಶಿವಮೂರ್ತಯ್ಯ, ಕೆ. ಸಿ. ನಾಗರಾಜ್ ಅತ್ತಿಗೆರೆ, ಕಲವಿವೀರ್ ಕಳ್ಳೀಮನಿ, ಬಿ. ಜಿ. ಮರುಳಸಿದ್ದಯ್ಯ ಬಸವನಾಳು, ಕರೂರು ಹನುಮಂತಪ್ಪ, ಗೋಪನಾಳು ಸರ್ಕಾರಿ ಪ್ರೌಢ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಜಿ. ಎಸ್. ಅಂಜನಪ್ಪ, ಪ್ರಗತಿಪರ ಚಿಂತಕ ಹೆಚ್. ಈಶ್ವರಪ್ಪ ಗೋಪನಾಳು ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *