Home ದಾವಣಗೆರೆ “ಬಿತ್ತನೆ ಮಾಡಿ ಒಂದೂವರೆ ತಿಂಗಳಾದ್ರೂ ಹರಿಯದ ಭದ್ರಾ ನೀರು: ಕುಕ್ಕುವಾಡದಲ್ಲಿ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡ ರೈತರು!”
ದಾವಣಗೆರೆಬೆಂಗಳೂರು

“ಬಿತ್ತನೆ ಮಾಡಿ ಒಂದೂವರೆ ತಿಂಗಳಾದ್ರೂ ಹರಿಯದ ಭದ್ರಾ ನೀರು: ಕುಕ್ಕುವಾಡದಲ್ಲಿ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡ ರೈತರು!”

Share
ಭದ್ರಾ
Share

ದಾವಣಗೆರೆ: ತಾಲ್ಲೂಕಿನ ಕುಕ್ಕುವಾಡದಲ್ಲಿ ಭದ್ರಾ ನೀರು ಸಮರ್ಪಕವಾಗಿ ಹರಿಯದ ಹಿನ್ನೆಲೆಯಲ್ಲಿ ರೈತರು ನೀರಾವರಿ ಇಲಾಖೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಒಂದೂವರೆ ತಿಂಗಳಾದರೂ ನೀರು ಬಾರದಿರುವುದು ಮತ್ತು ಅಕ್ರಮ ಪೈಪ್‌ಗಳ ಮೂಲಕ ನೀರು ಕದಿಯುತ್ತಿರುವುದಕ್ಕೆ ರೈತ ಮುಖಂಡ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಭದ್ರಾ ನೀರು ಹರಿಸಲು ಪ್ರಾರಂಭಿಸಿ ಒಂದೂವರೆ ತಿಂಗಳಾದ್ರೂ ಕಾಲುವೆಗಳಲ್ಲಿ ಹರಿದು ಬಂದಿಲ್ಲ ಎಂದು ರೈತರು ಆಕ್ರೋಶಿತರಾಗಿ ನೀರಾವರಿ ಇಲಾಖೆ ಇಂಜಿನಿಯರ್ ಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ಕುಕ್ಕುವಾಡ ಗ್ರಾಮದಲ್ಲಿ ನಡೆಯಿತು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್ ರವರ ಅಧ್ಯಕ್ಷತೆಯಲ್ಲಿ ಕುಕ್ಕುವಾಡ ಗ್ರಾಮದಲ್ಲಿರುವ ಕಬ್ಬು ಬೆಳೆಗಾರರ ಸಂಘದ ಕಚೇರಿಯಲ್ಲಿ ಸೇರಿದ್ದ ರೈತರು ಸಾಲಸೋಲ ಮಾಡಿ ಭತ್ತದ ಬೀಜ ಚೆಲ್ಲಿ ಒಂದೂವರೆ ತಿಂಗಳಾಯಿತು. ರೊಳೆ ಹೊಡೆದು ನಾಟಿ ಮಾಡಲು ಕಾಲುವೆಗಳಲ್ಲಿ ನೀರಿಲ್ಲ. ಹೀಗಾದ್ರೆ ಮುಂದೆ ನಮ್ಮ ಗತಿ ಏನು ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ಮಾತನಾಡಿ, ನಮ್ಮ ಜೋನ್ ನಲ್ಲಿ ನಿತ್ಯ 180 ಕ್ಯೂಸೆಕ್ ನೀರು ಹರಿಯಬೇಕು. ಬಹಳ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ನೀರು ನಿರ್ವಹಣೆ ಮಾಡಬೇಕಾದ ಸೌಡಿಗಳಿಗೆ ತಿಂಗಳಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಹೀಗಾಗಿ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದರು.

ಮಾಜಿ ಪ್ರಧಾನ ಕುಕ್ಕುವಾಡದ ಡಿ. ಮಲ್ಲೇಶಪ್ಪ ನವರು ಮಾತನಾಡಿ ನೀರಾವರಿ ಇಂಜಿನಿಯರ್ ಗಳು ನೀರನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಏನಾದ್ರೂ ಕೇಳಿದ್ರೆ ನಾವು ರೈತರ ಮಕ್ಕಳೆಂದು ಹೇಳಿಕೊಂಡು ರೈತರ ಬಾಯಿಗೆ ಮಣ್ಣು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯ ಪ್ರಮುಖಾಂಶಗಳು ಮತ್ತು ರೈತರ ಆಕ್ರೋಶ

  • ನೀರಿನ ಅಭಾವ: ಭದ್ರಾ ನೀರು ಹರಿಸಲು ಪ್ರಾರಂಭಿಸಿ ದೀರ್ಘಕಾಲ ಕಳೆದರೂ ಕಾಲುವೆಗಳಲ್ಲಿ ನೀರು ಹರಿಯುತ್ತಿಲ್ಲ. ಇದರಿಂದಾಗಿ ಭತ್ತದ ನಾಟಿ ಮಾಡಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

  • ಅಸಮರ್ಪಕ ನಿರ್ವಹಣೆ: ನಿಗದಿತ ಪ್ರಮಾಣದ ನೀರು (ದಿನಕ್ಕೆ 180 ಕ್ಯೂಸೆಕ್) ಹರಿಯುತ್ತಿಲ್ಲ ಮತ್ತು ನೀರು ನಿರ್ವಹಣೆ ಮಾಡುವ ಸಿಬ್ಬಂದಿಗೆ (ಸೌಡಿಗಳಿಗೆ) ವೇತನ ನೀಡದ ಕಾರಣ ಕೆಲಸ ಕುಂಠಿತವಾಗಿದೆ ಎಂಬ ದೂರು ಕೇಳಿಬಂದಿದೆ.

  • ಅಕ್ರಮ ನೀರು ಬಳಕೆ: ಕೆಲವರು ಅಕ್ರಮವಾಗಿ ಪೈಪ್ ಅಳವಡಿಸಿ ನೀರು ಕದಿಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ರೈತರ ಗಂಭೀರ ಆರೋಪ.

  • ಎಚ್ಚರಿಕೆ: ರೈತ ಮುಖಂಡ ತೇಜಸ್ವಿ ಪಟೇಲ್ ಅವರು ನೀರು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ಎನ್ ಮಂಜುನಾಥ್ ರವರು ಮಾತನಾಡಿ ಕೆಲವರು ಅಕ್ರಮವಾಗಿ ಪೈಪ್ ಅಳವಡಿಸಿಕೊಂಡು ನೀರು ಕದಿಯುತ್ತಿದ್ದರು ನೀರಾವರಿ ಅಧಿಕಾರಿಗಳು ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನೆ ಇದ್ದಾರೆ ಎಂದು ಆರೋಪಿಸಿದರು.

ರೈತ ಮುಖಂಡರಾದ ಗೋಣಿವಾಡ ಮಂಜುನಾಥ, ಕುಕ್ಕುವಾಡದ ಡಿಸಿ ದಿನೇಶ್ ಮತ್ತು ಡಿಬಿ ಶಂಕರ್ ರವರು ಮಾತನಾಡಿ ನಮಗೆ ನೀರು ಕೊಡಿ ಇಲ್ಲದಿದ್ದರೆ ಕಚೇರಿ ಬಿಟ್ಟು ತೊಲಗಿ ಎಂದು ಆಗ್ರಹಿಸಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ತೇಜಸ್ವಿ ಪಟೇಲ್ ಅವರು ಮಾತನಾಡಿ ನಮ್ಮ ರೈತರು ನೀರಿಗಾಗಿ ವಿನಮ್ರವಾಗಿ ವಿನಂತಿಸುತ್ತಾರೆ. ನೀವು ಸಮರ್ಪಕವಾಗಿ ನೀರು ನಿರ್ವಹಣೆ ಮಾಡಿ ಕೊನೆ ಭಾಗಕ್ಕೆ ತಲುಪುವಂತೆ ಕ್ರಮ ಕೈಗೊಳ್ಳಬೇಕುಯ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದು ಖಚಿತ ಎಂದು ಎಚ್ಚರಿಸಿದರು.

ಭದ್ರಾ ನೀರನ್ನು ಸಮರ್ಪಕವಾಗಿ ಹರಿಸುವಂತೆ ಒತ್ತಾಯಿಸಿ ದಾವಣಗೆರೆ ತಾಲ್ಲೂಕು ಕುಕ್ಕುವಾಡ ಗ್ರಾಮದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಮತ್ತು ರೈತರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ರೈತ ಮುಖಂಡರಾದ ತೇಜಸ್ವಿ ಪಟೇಲ್, ಕೊಳೇನಹಳ್ಳಿ
ಬಿ ಎಂ ಸತೀಶ್, ಕುಕ್ಕುವಾಡದ ಡಿ ಮಲ್ಲೇಶಪ್ಪ, ಕೆ ಎನ್ ಮಂಜುನಾಥ್, ಮತ್ತಿ ಹನುಮಂತಪ್ಪ, ಕಾರಿಗನೂರು ಮಂಜುನಾಥ ಪಟೇಲ್, ಗಂಗಾಧರಪ್ಪ, ಕುಕ್ಕುವಾಡದ ಡಿಸಿ ದಿನೇಶ್, ಡಿ ಬಿ ಶಂಕರ್, ಜಿಬಿ ಜಗದೀಶ್, ಎ.ರಾಜು, ಎಸ್.ಅಂಜನಪ್ಪ, ರೈತಸಂಘ ಬಸವರಾಜು,
ಗೋಣಿವಾಡ ಮಂಜುನಾಥ, ಹೂವಿನಮಡು ನಾಗರಾಜ್, ಶಶಿಕುಮಾರ್, ರವಿಕುಮಾರ್, ತುರ್ಚಗಟ್ಟ ಶ್ರೀನಿವಾಸ, ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಚನ್ನಬಸಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಮೇಶ್, ಸಹಾಯಕ ಇಂಜಿನಿಯರ್ ತಿಪ್ಪೇಸ್ವಾಮಿ, ಮಧು, ಸೆಕ್ಷನ್ ಆಫೀಸರ್ ರಘುವೀರ ಮುಂತಾದವರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *