SUDDIKSHANA KANNADA NEWS/ DAVANAGERE/ DATE:22-09-2024
ದಾವಣಗೆರೆ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದಲೇ ನಾವು ಮತ್ತು ನೀವು. ಇಲ್ಲದಿದ್ದರೆ ನಾವಿಲ್ಲ. ಕಾರ್ಯಕರ್ತರ ವಿಶ್ವಾಸ ಮುಖ್ಯ. ನನ್ನನ್ನು ನಾಲ್ಕು ಬಾರಿ ಶಾಸಕನಾಗಿ ಗೆಲ್ಲಿಸಿದ್ದಾರೆ. ಯಾವುದೇ ಚ್ಯುತಿ ಬಾರದಂತೆ, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರದ ಬಾಪೂಜಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರ ಪರಿಶ್ರಮದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರ ಶ್ರಮ ಗುರುತಿಸಬೇಕಿದೆ. ಪ್ರತಿಯೊಂದು ಪಂಚಾಯಿತಿಯಲ್ಲಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷವನ್ನು ಹೆಚ್ಚಾಗಿ ಬಲಿಷ್ಠವಾಗಿಸಲು ಶ್ರಮಿಸೋಣ. ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆ ಚುನಾವಣೆ ಬರುತ್ತದೆ. ಆಗ ನಾವೆಲ್ಲರೂ ಸೇರಿ ಒಟ್ಟಾಗಿ ಗೆಲ್ಲಲು ಪ್ರಯತ್ನಿಸೋಣ ಎಂದು ಕರೆ ನೀಡಿದರು.
ಈ ಹಿಂದೆ ಸಚಿವ ಆಗಿದ್ದಾಗ ಸಾಕಷ್ಟು ಜಿಲ್ಲೆಯ ಅಭಿವೃದ್ಧಿಗೆ ಗಮನ ಕೊಟ್ಟಿದ್ದೆ. ನಗರಾಭಿವೃದ್ಧಿ ಇಲಾಖೆಯಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ವೇಗಗತಿಯಲ್ಲಿ ಸಾಗಿತ್ತು. ಆದ್ರೆ, ಈ ಬಾರಿ ಸಚಿವನಾಗಿ ಒಂದು ವರ್ಷ ಮೂರು ತಿಂಗಳಾದರೂ ವೇಗಗತಿಯಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ಮಾತು ಕೇಳಿ ಬರುತ್ತಿರುವುದು ಗಮನಕ್ಕೆ ಬಂದಿದೆ. ನಾವು ಈ ಹಿಂದೆ ಮಾಡಿದ್ದ ಕೆಲಸಗಳು ಇಂದು ಮಾತನಾಡುತ್ತಿದೆ. ಇಲ್ಲದಿದ್ದರೆ ಮಳೆ ಬಂದರೆ ಸಾಕು ಪ್ರವಾಹ ಬರುತಿತ್ತು. ಮನೆಯೊಳಗೆ ನೀರು ನುಗ್ಗುತಿತ್ತು. ಹಾನಿಯಾಗುತಿತ್ತು. ಆದ್ರೆ. ಪರಿಸ್ಥಿತಿ ಆ ರೀತಿಯಲ್ಲಿ ಇಲ್ಲ ಎಂದು ಹೇಳಿದರು.
ಕೆಲವು ಜಿಲ್ಲೆಗಳಿಗೆ ಹೋಗಿ ನೋಡಿದರೆ ಇಂದು ಮೊಣಕಾಲಿನವರೆಗೆ ಗುಂಡಿಗಳು ರಸ್ತೆಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ನೀರು, ಚರಂಡಿ ವ್ಯವಸ್ಥೆ ಸಮರ್ಪಕವಾಗಿದೆ. ಪ್ರವಾಹ ಬಂದರೂ ನಗರದಲ್ಲಿ ನೀರು ನುಗ್ಗಿ ನಷ್ಟವಾಗಿಲ್ಲ, ಎಲ್ಲಾ ಪ್ರತಿಯೊಂದು ರಸ್ತೆಯನ್ನು ಕಾಂಕ್ರಿಟ್ ಮಾಡಿದ್ದೇವೆ. ಗುಣಮಟ್ಟದ ಕೆಲಸ ಮಾಡಿದ್ದೆವು. ರಾಜು ರೆಡ್ಡಿ, ಕರಿಬಸಪ್ಪರನ್ನು ನೆನಪು ಮಾಡಿಕೊಳ್ಳಬೇಕು. ರಾಜು ರೆಡ್ಡಿ ಹಣ ಬರುವವರೆಗೆ ಕಾಯದೇ ಗುಣಮಟ್ಟದ ಕೆಲಸ ಮಾಡಿದ್ದರು. ಇಂಥವರಿಂದಲೇ ಗುಣಮಟ್ಟದ ಕೆಲಸ ಆಗಿದೆ. ಇದನ್ನು ನೆನಪು ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ದಾವಣಗೆರೆ ನಗರ, ಜಿಲ್ಲೆ ಅಭಿವೃದ್ಧಿ ಪಥದತ್ತ ಹೋಗಬೇಕಿದೆ. ರೈತರಿಗೆ ಸಾಕಷ್ಟು ಅಭಿನಂದನೆ ಸಲ್ಲಿಸಬೇಕು. ರೈತರು ಕೆಲಸ ಬಿಟ್ಟು ಇಲ್ಲಿಗೆ ಬಂದಿದ್ದಾರೆ. ಆನಗೋಡಿನಲ್ಲಿ ರೈತರ ಹುತಾತ್ಮರಾಗಿದ್ದರು. ಹುತಾತ್ಮರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಸಾಣೇಹಳ್ಳಿ ಶ್ರೀಗಳು ಬಂದಿದ್ದರು. ಹಿಂದೆ ಮೂರ್ನಾಲ್ಕು ಬಾರಿ ಬಂದಿದ್ದೇನೆ. ಪ್ರತಿ ಬಾರಿಯೂ ರಾಜಕಾರಣಿಗಳು ಬರುತ್ತೀರಾ. ಹೋಗುತ್ತೀರಾ ಎಂದ್ರು. ಕೆಲಸನೇ ಆಗಿಲ್ಲ ಎಂದು ಸಾಣೇಹಳ್ಳಿ ಶ್ರೀಗಳೇ ಹೇಳಿದ್ದರು. ಹುತಾತ್ಮರ ಕೇಂದ್ರ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಅನುದಾನ ಬೇಕು ಎಂದರು. ಸದ್ಯಕ್ಕೆ 60 ಲಕ್ಷ ರೂಪಾಯಿ ಬಿಡುಗಡೆ ಮಾಡುವಂತೆ ಹೇಳಿದ್ದೇನೆ. ಸದ್ಯದಲ್ಲಿಯೇ ಆಗುತ್ತದೆ. ಇನ್ನೂ ಸಂಸದರಿಗೂ ಹೇಳಿದ್ದೇನೆ. ಸಂಸದರ ಅನುದಾನದಿಂದ ಹಣ ನೀಡುವಂತೆ ಎಂದು ತಿಳಿಸಿದರು.
ನಾವೇ ಎಲ್ಲವನ್ನೂ ಮಾಡಿಬಿಟ್ಟಿದ್ದೇವೆ ಎಂದು ಬಿಜೆಪಿಯವರು ಕೂಗಾಡುತ್ತಾರೆ. ಕುರುಬರು, ಮುಸಲ್ಮಾನರಿಗೆ ಬೋಣಿಗೆ ಪ್ರಾರಂಭ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಹಳೇ ಕಾಲದಂತೆ ಮಾಡುತ್ತೇವೆ. ಪ್ರತಿ ಕೆಲಸವೂ ಕಳಪೆಯಾಗದಂತೆ ನೋಡಿಕೊಳ್ಳಬೇಕು. ಕಳಪೆಯಾಗಿದ್ದರಿಂದಲೇ ಬಿಜೆಪಿ ಸೋತರು ಎಂದರು.
ನೀರಾವರಿ ಸಮಗ್ರ ಯೋಜನೆ ಕುರಿತಂತೆ ಸಭೆ ನಡೆಸಿದ್ದೇವೆ. ಸಚಿವ ಡಿ. ಕೆ. ಶಿವಕುಮಾರ್, ಶಾಸಕ ಬಸವಂತಪ್ಪ ಹಾಗೂ ನಾನು ಈಗಾಗಲೇ ಚರ್ಚೆ ನಡೆಸಿದ್ದೇವೆ. ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕಿದೆ. ಕೆರೆಗಳು ತುಂಬಿದರೆ ಮೂರು ಬರಗಾಲ ಬಂದರೂ ರೈತರು ಸುಧಾರಿಸಿಕೊಳ್ಳುತ್ತಾರೆ. ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟಿರುವುದು ಸಂತಸ ತಂದಿದೆ. ಮನೆತನದ ಮೇಲೆ ವಿಶ್ವಾಸ ಇಟ್ಟು ಶಾಸಕನಾಗಿ ಗೆಲ್ಲಿಸಿಕಳುಹಿಸಿಕೊಟ್ಟಿದ್ದೀರಾ. ಲೋಕಸಭೆ ಚುನಾವಣೆಯಲ್ಲಿ ಹಗಲಿರುಳು ಶಕ್ತಿಮೀರಿ ಕೆಲಸ ಮಾಡಿ ಪ್ರಭಾ ಗೆಲ್ಲಿಸಿ ಲೋಕಸಭೆಗೆ ಜನತೆ ಕಳುಹಿಸಿದ್ದಾರೆ. ವಿಶ್ವಾಸಕ್ಕೆ ತಕ್ಕಂತೆ ಮುನ್ನಡೆಯುತ್ತೇವೆ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಕೆ. ಎಸ್. ಬಸವಂತಪ್ಪ, ದೇವೇಂದ್ರಪ್ಪ, ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಮತ್ತಿತರರು ಹಾಜರಿದ್ದರು.