ದಾವಣಗೆರೆ: ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವ ಹುನ್ನಾರ ಮಾಡಿದ್ದು, ಈ ಯೋಜನೆ ವಿರುದ್ಧ ಪೋಷಕರು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸಬೇಕು. ಶಿಕ್ಷಣ ವಿರೋಧಿ ನೀತಿಗಳ ವಿರುದ್ದ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದರು.
ಜಿಲ್ಲೆಯ ಹರಿಹರ ತಾಲೂಕಿನ ಕುಣಿಬೆಳಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಏರ್ಪಡಿಸಿದ್ದ ವೃತ್ತಿ ಅವಕಾಶಗಳ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರದ ಜನವಿರೋಧಿ, ಶಿಕ್ಷಣ ವಿರೋಧಿ ನೀತಿಗಳ ವಿರುದ್ದ ಪೋಷಕರು ಹೋರಾಡುವ ಜೊತೆಗೆ ಪ್ರಶ್ನಿಸಬೇಕು. ಸಂಘಟಿತರಾಗಿ ಪ್ರತಿಭಟಿಸಿದಾಗ ಮಾತ್ರ ಸರ್ಕಾರದ ನೀತಿಗಳು ಬದಲಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮುಖ್ಯಾಂಶಗಳು:
ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಮತ್ತು ವಿರೋಧ
ಯೋಜನೆಯ ಆತಂಕ: ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ವಿನಯ್ ಕುಮಾರ್ ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಪರಿಣಾಮ: 5 ಕಿ.ಮೀ ವ್ಯಾಪ್ತಿಯ ಶಾಲೆಗಳನ್ನು ಒಂದೇ ಕಡೆ ಸೇರಿಸುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲೆಯಿಂದ ದೂರವಾಗುವ ಮತ್ತು ಶಿಕ್ಷಣ ಪಡೆಯಲು ತೊಂದರೆಯಾಗುವ ಸಾಧ್ಯತೆಯಿದೆ.
ಪರ್ಯಾಯ ಮಾರ್ಗ: ಹೊಸ ದೊಡ್ಡ ಶಾಲೆಗಳನ್ನು ತೆರೆಯುವ ಬದಲು, ಈಗಿರುವ ಶಾಲೆಗಳನ್ನೇ ಆಧುನಿಕ ಮೂಲಸೌಕರ್ಯ (ಡಿಜಿಟಲ್ ಬೋರ್ಡ್, ಗ್ರಂಥಾಲಯ) ನೀಡಿ ಅಭಿವೃದ್ಧಿಪಡಿಸಬೇಕು ಎಂಬುದು ಅವರ ಆಗ್ರಹ.
ವಿನಯ್ ಕುಮಾರ್ ಪ್ರಮುಖ ಸಲಹೆಗಳು
| ವಿಷಯ | ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕಿವಿಮಾತು |
| ಓದುವ ಹವ್ಯಾಸ | ಚಿಕ್ಕ ವಯಸ್ಸಿನಲ್ಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ IAS, KAS ನಂತಹ ಪರೀಕ್ಷೆಗಳಿಗೆ ಸಿದ್ಧರಾಗುವುದು ಸುಲಭ. |
| ಗುಣಮಟ್ಟದ ಶಿಕ್ಷಣ | ಸರ್ಕಾರಿ ಶಾಲೆಗಳ ಮಕ್ಕಳು ವಿಜ್ಞಾನಿಗಳು, ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳಾಗುವಂತೆ ನೈತಿಕ ಶಿಕ್ಷಣ ನೀಡಬೇಕು. |
| ಸರ್ವತೋಮುಖ ಬೆಳವಣಿಗೆ | ಕೇವಲ ಓದಿಗೆ ಸೀಮಿತವಾಗದೆ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. |
ಸರ್ಕಾರಿ ಶಾಲೆಗಳ ವಿಲೀನೀಕರಣ ಎಂಬ ಹೆಸರಿನಲ್ಲಿ ಸರ್ಕಾರವು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮುಚ್ಚುವ ಹುನ್ನಾರ ನಡೆಸಿರುವುದಕ್ಕೆ ನನ್ನ ವಿರೋಧ ಇದೆ. ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಕನಿಷ್ಠ ಏಳು ಶಾಲೆಗಳನ್ನು ಸೇರಿಸಿ ಒಂದು ಮ್ಯಾಗ್ನೆಟ್ ಶಾಲೆಗೆ ವಿಲೀನ ಮಾಡುವ ನೀತಿಯು ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡಲಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಒಂದೂವರೆಯಿಂದ ಎರಡು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಲಾಗುತ್ತದೆ. ನರ್ಸರಿಯಿಂದ ಪಿಯುಸಿವರೆಗೆ ಒಂದೇ ಶಾಲೆ ಇರುತ್ತದೆ. ಇದೇ ಶಾಲೆಗೆ ನೀವು ಕಳುಹಿಸಬೇಕು. ಈಗಿರುವ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಯೋಜನೆಯಿಂದ ರಾಜ್ಯದಲ್ಲಿ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತದೆ. ಇದಕ್ಕೆ ನಾವು ಆಸ್ಪದ ಕೊಡಬಾರದು. ಈಗಿರುವ ಸರ್ಕಾರಿ ಶಾಲೆಗಳನ್ನೇ ಅಭಿವೃದ್ಧಿಪಡಿಸಬೇಕು. ಪುಸ್ತಕ, ಗ್ರಂಥಾಲಯ, ಡಿಜಿಟಲ್ ಬೋರ್ಡ್, ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳು ಹೆಚ್ಚಾಗಿ ನಡೆಯುವಂತಾಗಬೇಕು. ಸರ್ಕಾರಿ ಶಾಲೆಗಳ ಮಕ್ಕಳೂ ಉನ್ನತ ವ್ಯಕ್ತಿಗಳಾಗಬೇಕು. ಅತ್ಯುತ್ತಮಶಿಕ್ಷಣ ಇವರಿಗೂ ಸಿಗುವಂತಾಗಬೇಕು. ವಿಜ್ಞಾನಿಗಳು, ಐಎಎಸ್, ಕೆಎಎಸ್, ರಾಜಕಾರಣಿಗಳು ಸೇರಿದಂತೆ ಅತ್ಯುನ್ನತ ಹುದ್ದೆಗೆ ಹೋಗುವಂಥ ಗುಣಮಟ್ಟದ ಹಾಗೂ ನೈತಿಕ ಶಿಕ್ಷಣ ನೀಡಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಬೇಕು. ಸ್ವಯಂಪ್ರೇರಿತರಾಗಿ ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನ ಸಂಪಾದನೆ ಮಾಡಲು ಸುಲಭವಾಗುತ್ತದೆ. ಇಂಥ ವಿದ್ಯಾರ್ಥಿಗಳನ್ನು ಐಎಎಸ್ ಮತ್ತು ಕೆಎಎಸ್ ನಂಥ ಉನ್ನತ ಹುದ್ದೆಗೇರಲು ತರಬೇತಿ ನೀಡಲು ಕಷ್ಟವಾಗದು. ಸಾಹಿತ್ಯ, ಸಂಸ್ಕೃತಿ, ನಾಡಿನ ಸಾಧಕರ ಜೀವನಗಾಥೆಯಂಥ ಪುಸ್ತಕ ಓದಲು ಶುರು ಮಾಡಿದರೆ ಅಭಿರುಚಿ ಬದಲಾಗುತ್ತಾ ಹೋಗುತ್ತದೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿಯ ಭಂಡಾರವೂ ನಿಮ್ಮದಾಗುತ್ತದೆ. ಆಗ ಆಲೋಚನಾ ಶಕ್ತಿಯೂ ಬೆಳೆಯುತ್ತದೆ. ಪೋಷಕರು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು.
ಯಾವ ದೇಶಕ್ಕೂ ಹೋದರೂ ಅಸಮಾನತೆ ಎದ್ದು ಕಾಣುತ್ತದೆ. ಆಗರ್ಭ ಶ್ರೀಮಂತರು ಹಾಗೂ ಬಡವರು ಎಂಬ ಎರಡೂ ವರ್ಗದವರೂ ಇರುತ್ತಾರೆ. ಪ್ರತಿನಿತ್ಯ ಪುಸ್ತಕ ಓದುವ ಗೀಳು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು
ಸಾಧ್ಯವಾಗುತ್ತದೆ. ಪುಸ್ತಕಗಳ ಹುಳುಗಳಾಗದೇ ಪಠ್ಯೇತರ ಚಟುವಟಿಕೆಗಳು, ಕ್ರೀಡೆಗಳಲ್ಲಿ ಪಾಲ್ಗೊಂಡಾಗ ಆತ್ಮಸ್ಥೈರ್ಯವೂ ವೃದ್ಧಿಯಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಹಾಗೂ ಕುಣಿಬೆಳಕೆರೆ ಗ್ರಾಮಸ್ಥರು ಹಾಜರಿದ್ದರು.
- Education Policy Protest
- G B Vinay Kumar
- Government School Merger
- Harihara Kunibelakere
- Insights IAS
- Karnataka Public School
- KPS Magnet Scheme
- Rural Education India.
- Save Government Schools
- ಇನ್ ಸೈಟ್ಸ್ ಐಎಎಸ್
- ಕರ್ನಾಟಕ ಪಬ್ಲಿಕ್ ಸ್ಕೂಲ್
- ಕುಣಿಬೆಳಕೆರೆ ಹರಿಹರ
- ಕೆಪಿಎಸ್ ಮ್ಯಾಗ್ನೆಟ್ ಯೋಜನೆ
- ಜಿ. ಬಿ. ವಿನಯ್ ಕುಮಾರ್
- ಶಾಲಾ ಶಿಕ್ಷಣ ಇಲಾಖೆ.
- ಶಿಕ್ಷಣ ವಿರೋಧಿ ನೀತಿ
- ಸರ್ಕಾರಿ ಶಾಲೆಗಳ ವಿಲೀನ
- ಸ್ವಾಭಿಮಾನಿ ಬಳಗ





Leave a comment