ದಾವಣಗೆರೆ: ದಾವಣಗೆರೆ ವಿವಿಯಿಂದ ಕೊಡಮಾಡಲ್ಪಡುವ ಡಾಕ್ಟೊರೇಟ್ ಗೌರವಕ್ಕೆ ದಾವಣಗೆರೆಯ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಸಿ. ಹೆಚ್. ಮುರಿಗೇಂದ್ರಪ್ಪ ಮತ್ತು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಸಮಾಜ ಸೇವಕರಾದ
ಎಂ. ರಾಮಪ್ಪರು ಭಾಜನರಾಗಿದ್ದಾರೆ.
ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ:
ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪನವರು, ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ ಇವರು 1955 ರಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕುಂದೂರು ಗ್ರಾಮದಲ್ಲಿ ಜನಿಸಿದ್ದು ಇವರು ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಗ್ರಾಮಾಂತರ ಪ್ರದೇಶದಲ್ಲಿ, ಸ್ನಾತಕ ಪದವಿಯನ್ನು ಮೈಸೂರಿನಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡದಲ್ಲಿ ಪೂರ್ಣಗೊಳಿಸಿದ್ದಾರೆ.
ದಾವಣಗೆರೆಯ ಎ.ವಿ.ಕೆ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ 1983 ರಲ್ಲಿ ಸೇವೆಯನ್ನು ಪ್ರಾರಂಭಿಸಿ, 2010ರಲ್ಲಿ ಪ್ರಾಧ್ಯಾಪಕರಾಗಿ, 2015ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ. ಇವರ ವೃತ್ತಿ ಜೀವನದ ಅವಧಿಯಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಹಾಗೂ ಕಾಲೇಜು ಅಧ್ಯಾಪಕರ ಒಕ್ಕೂಟದ ಅಧ್ಯಕ್ಷರಾಗಿ, ಅಧ್ಯಾಪಕರುಗಳ ಸೇವೆಗೆ ಸಂಬಂಧಿಸಿದ ಅನೇಕ ರೀತಿಯ ಸೇವಾ ಸೌಲಭ್ಯಗಳನ್ನು ಸರ್ಕಾರದಿಂದ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಕುವೆಂಪು ವಿಶ್ವವಿದ್ಯಾನಿಲಯದ ಚುನಾಯಿತ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಮಹಾವಿದ್ಯಾಲಯಗಳಲ್ಲಿ – ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದವರಿಗೆ ಆವರಿಸಿದ್ದ ಶೈಕ್ಷಣಿಕ ಮತ್ತು ಪರೀಕ್ಷಾಂಗಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾನಿಲಯ ಸ್ಥಾಪನೆಯಾದ ನಂತರ ದಾವಣಗೆರೆಯಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳನ್ನು ಪ್ರಾರಂಭಿಸುವುದರ ಬಗ್ಗೆ ಮೂಂಚೂಣಿ ಹೋರಾಟಗಾರರಾಗಿ ಶ್ರಮಿಸಿದ್ದಾರೆ. ದಾವಣಗೆರೆಯಲ್ಲಿ ನೂತನ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸುವ ಸಲುವಾಗಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಠಾಧಿಪತಿಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಅತ್ಯಂತ ಹಿರಿಯ ಶಿಕ್ಷಣಾಸಕ್ತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, 2009ರಲ್ಲಿ ವಿಶ್ವವಿದ್ಯಾನಿಲಯದ ಸ್ಥಾಪನೆಯ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ ಇವರು ಪ್ರಾಧ್ಯಾಪಕ ವೃತ್ತಿಯೊಂದಿಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಪ್ರಾಧ್ಯಾಪಕರಿಗೆ ಹಾಗೂ ಗ್ರಾಮೀಣ ಭಾಗದದಲ್ಲಿ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸಲ್ಲಿಸಿರುವ ಸಮಾಜಮುಖಿ ಸೇವೆಯನ್ನು ಗುರುತಿಸಿ, ೨೦೨೬ರ ಜನವರಿ ೩೦ರಂದು ನಡೆಯುವ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ “ಡಿ.ಲಿಟ್ – ಗೌರವ ಡಾಕ್ಟರೇಟ್” ಪದವಿ ಪ್ರದಾನ ಮಾಡಲಾಗುತ್ತಿದೆ.
ಎಂ. ರಾಮಪ್ಪ, ಸಮಾಜ ಸೇವಕರು, ಚಳ್ಳಕೆರೆ, ಚಿತ್ರದುರ್ಗ:
ಎಂ. ರಾಮಪ್ಪ ಇವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನೇರಲಗುಂಟೆ ಎಂಬ ಗ್ರಾಮದಲ್ಲಿ 1961ರ ಜೂನ್ 1 ರಂದು ಜನಿಸಿರುತ್ತಾರೆ. ಇವರು ತಮ್ಮ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದು, ವಿದ್ಯಾರ್ಥಿ ಜೀವನದಲ್ಲಿಯೇ ಸಾಮಾಜಿಕ ಸೇವಾ ಮನೋಭಾವಕ್ಕಾಗಿ ಅವರ ಶಿಕ್ಷಕರಿಂದ ಮತ್ತು ಊರಿನ ಪ್ರಮುಖರಿಂದ ಮೆಚ್ಚುಗೆ ಗಳಿಸಿರುತ್ತಾರೆ.
ರಾಮಪ್ಪ ನವರು 1984ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದಿರುತ್ತಾರೆ. ಸದರಿಯವರಿಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಆಸಕ್ತಿಯಿಂದಾಗಿ ಇವರು 1985ರಲ್ಲಿ ಚಳ್ಳಕೆರೆಯ ಪ್ರೌಢಶಾಲೆಯಲ್ಲಿ ತಮ್ಮ ಬೋಧನಾ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ತದನಂತರ 1986ರಲ್ಲಿ ಮೈಸೂರಿನ ಮಾತೃ ಮಂಡಳಿ ಶಿಕ್ಷಣ ಸಂಸ್ಥೆಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ 28 ವರ್ಷಗಳ ವರೆಗೆ ಸೇವೆಯನ್ನು ಸಲ್ಲಿಸಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶ್ಲಾಘನೀಯ ಸಾಧನೆಗೈದಿದ್ದಾರೆ.
ಇವರು ಸಾರ್ವಜನಿಕ ಕ್ಷೇತ್ರದಲ್ಲಿ ಸದಾ ಜನಪರ ಚಿಂತನೆ ಹೊಂದಿದವರಾಗಿದ್ದು, ನಾಗರೀಕ ಕಲ್ಯಾಣ, ಶಿಕ್ಷಣದ ವಿಸ್ತರಣೆ ಯುವಜನರ ಸಬಲೀಕರಣ ಹಾಗೂ ಗ್ರಾಮೀಣಾಭಿವೃದ್ಧಿ ಕಾರ್ಯಚಟುವಟಿಕೆಗಳಲ್ಲಿ ವ್ಯಾಪಕ ಮತ್ತು ಪರಿಣಾಮಕಾರಿಯಾದಂತಹ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆ ಜೊತೆಗೆ ಪರಿಸರಾಭಿವೃದ್ಧಿ ಮತ್ತು ನಿಸರ್ಗದ ಸಂರಕ್ಷಣೆಯು ಮಾನವನ ಅಭಿವೃದ್ಧಿಗೆ ಪೂರಕವಾಗಿದೆಯೆಂಬುದು ರಾಮಪ್ಪನವರ ಪರಿಕಲ್ಪನೆಯಾಗಿದೆ.
ಸಮಾಜದಲ್ಲಿ ಬದಲಾವಣೆಯನ್ನು ತರಬೇಕೆಂಬ ಉದ್ದೇಶದಿಂದ ಅವರು ಕೈಗೊಂಡ ಪ್ರತಿಯೊಂದು ಕಾರ್ಯವು ಪ್ರಾಮಾಣಿಕತೆ, ಸ್ಪಷ್ಟ ದೃಷ್ಟಿಕೋನ ಮತ್ತು ಶ್ರಮದ ಚಿಹ್ನೆಯಾಗಿ ಅವರ ಬದ್ಧತೆಯನ್ನು ಪ್ರದರ್ಶಿಸಿದೆ ಮತ್ತು ನಿಜವಾದ ಜನ ಶಿಕ್ಷಕರನ್ನಾಗಿಸಿದೆ.
ಶಿಕ್ಷಣದಿಂದ ಸೇವೆಗೆ ಮತ್ತು ಸೇವೆಯಿಂದ ಸಮಾಜಕ್ಕೆ ಎಂಬ ಪರಿಕಲ್ಪನೆಯಿಂದ ಶ್ರೀ ರಾಮಪ್ಪನವರು ಶಿಕ್ಷಣ ಮತ್ತು ಸಮಾಜಮುಖಿಯಾಗಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ದಾವಣಗೆರೆ ವಿಶ್ವವಿದ್ಯಾನಿಲಯದಿಂದ “ಡಿ.ಲಿಟ್ – ಗೌರವ ಡಾಕ್ಟರೇಟ್” ಪದವಿಯನ್ನು ಪ್ರದಾನ ಮಾಡಲಾಗುತ್ತಿದೆ.





Leave a comment