Home ದಾವಣಗೆರೆ ನೀಟ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು: ಶಾಸಕ ಸಮರ್ಥ್ ಶಾಮನೂರು ಅಭಿಮತ
ದಾವಣಗೆರೆನವದೆಹಲಿಬೆಂಗಳೂರು

ನೀಟ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು: ಶಾಸಕ ಸಮರ್ಥ್ ಶಾಮನೂರು ಅಭಿಮತ

Share
ಸಮರ್ಥ್ ಶಾಮನೂರು
Share

ದಾವಣಗೆರೆ: ಸ್ಪರ್ಧಾತ್ಮಕ ಮತ್ತು ನೀಟ್ ಪರೀಕ್ಷೆಗೆ ಅಮೂಲಾಗ್ರ ಬದಲಾವಣೆ ಆಗಬೇಕು. ಪರೀಕ್ಷೆ ಪತ್ರಿಕೆ ಸೋರಿಕೆ ಆಗದಂತೆ ತಡೆಗಟ್ಟುವ ಕುರಿತಂತೆ ಗಂಭೀರ ಚಿಂತನೆ ಮತ್ತು ಕ್ರಮಗಳು ಆಗಬೇಕಾದ ಅಗತ್ಯತೆ ಇದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಪ್ರತಿಪಾದಿಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಸುಮಾರು 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರೂ ಕೇಂದ್ರ ಸರ್ಕಾರವು ಯಾವುದೇ ನಿರ್ಧಾರ ಪ್ರಕಟಿಸದೇ ಅನ್ಯಾಯ ಮಾಡುತ್ತಿರುವ ಕುರಿತಂತೆ ನಗರದ ಮಿಲ್ಲತ್ ಕಾಲೇಜಿನ ಸಭಾಂಗಣದಲ್ಲಿ “ಛಾತ್ರೋ ಕೀ ಗುಂಜ್” ಹೆಸರಿನಡಿ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಿಂಟಿಂಗ್ ಪ್ರೆಸ್‌ಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದನ್ನು ತಡೆಯಲು ಜೆಇಇ ಪರೀಕ್ಷೆ ಮಾದರಿಯಲ್ಲಿ ನೀಟ್ ಪರೀಕ್ಷೆಯನ್ನು ಸಹ ಕಂಪ್ಯೂಟರ್ ಆಧಾರಿತವಾಗಿ ನಡೆಸಬೇಕು. ಪೇಪರ್ ಲೀಕ್ ಅಕ್ರಮದಿಂದಾಗಿ ದೇಶಾದ್ಯಂತ 21ಕ್ಕೂ ಹೆಚ್ಚು
ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿದೆ. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು. ಪತ್ರಿಕೆ ಸೋರಿಕೆ ದಂಧೆಯಲ್ಲಿ ಭಾಗಿ ಹಾಗೂ ಅಕ್ರಮವೆಸಗುವ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ದೇಶದಲ್ಲಿ ಶೇಕಡಾ 65ರಷ್ಟು ಯುವಜನತೆ ಇದ್ದು, ಕೇಂದ್ರ ಸರ್ಕಾರಕ್ಕೆ ವಿದ್ಯಾರ್ಥಿಗಳ ಸಂಕಷ್ಟಗಳನ್ನು ಕೇಳುವ ವ್ಯವಧಾನ ಇಲ್ಲ. ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ್, ರಾಜಸ್ತಾನ ಸೇರಿದಂತೆ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ನೀಟ್ ಪತ್ರಿಕೆ ಸೋರಿಕೆಯಾದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ್ಯಾರು ಒಂದೇ ರಾಜ್ಯದವರಲ್ಲ, ಒಂದೇ ಧರ್ಮದವರೂ ಅಲ್ಲ. ಕಾಕ್ರೋಚ್ ಜನತಾ ಪಕ್ಷ ನಡೆಸುತ್ತಿರುವ ಹೋರಾಟವು ಯಶಸ್ವಿಯಾಗುವವರೆಗೂ ನಾವೆಲ್ಲರೂ ಕೈಜೋಡಿಸೋಣ. ಯಾವುದೇ ಕಾರಣಕ್ಕೂ ಹಿಂದೆ ಸರಿಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

“ವಿದ್ಯಾರ್ಥಿಗಳು ಹಾಗೂ ಪೋಷಕರು ಅನ್ಯಾಯದ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತಬೇಕು. ನಿಮ್ಮ ಈ ಹೋರಾಟದ ಕೂಗು ದೆಹಲಿಯ ಕೇಂದ್ರ ಸರ್ಕಾರಕ್ಕೆ ತಲುಪುವವರೆಗೆ ಹಿಂದೆ ಸರಿಯಬಾರದು” ಎಂದು ಶಾಸಕರು ಕರೆ ನೀಡಿದರು.

ಕಾರ್ಯಕ್ರಮದ ಆಯೋಜಕರೂ ಆದ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರೂ ಕೇವಲ 2 ಲಕ್ಷ ಉದ್ಯೋಗಳನ್ನೂ ನೀಡಿಲ್ಲ. ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳು ಮತ್ತು ಪೋಷಕರ ಕನಸಿಗೆ ತಣ್ಣೀರೆರಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹತ್ತು ವರ್ಷಗಳಲ್ಲಿ 90 ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಇದಕ್ಕೆ ಪ್ರಮುಖ ಕಾರಣ ಆಡಳಿತ ವೈಫಲ್ಯ. ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ ಸೋರಿಕೆಯು ಮೋಸವಲ್ಲ, ಇದೊಂದು ಸಂಘಟಿತ ಅಪರಾಧ. ಹಣಕ್ಕಾಗಿ ಪತ್ರಿಕೆ ಮಾರಾಟ ಮಾಡಿ ವಿದ್ಯಾರ್ಥಿಗಳ ಭವಿಷ್ಯವನ್ನೇ ಕತ್ತಲಲ್ಲಿ ದೂಡಿದೆ. ಕೂಡಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಬೆರಳೆಣಿಕೆಯಷ್ಟು ನಾಯಕರ ಕಪಿಮುಷ್ಟಿಯಲ್ಲಿ ಅಧಿಕಾರ ಇದೆ. ಸರ್ವಾಧಿಕಾರ ಆಡಳಿತ ಬೇಕಿಲ್ಲ, ನಮಗೆ ಬೇಕಿರುವುದು ಪ್ರಜಾಪ್ರಭುತ್ವ ರಾಷ್ಟ್ರದ ಆಡಳಿತ. ಕೇಂದ್ರ ಸರ್ಕಾರದ ವಿರುದ್ಧ ಯಾರೂ ಪ್ರಶ್ನೆ ಮಾಡಬಾರದು ಎಂಬ ಧೋರಣೆಯಲ್ಲಿ ಅಧಿಕಾರ ನಡೆಸುತ್ತಿರುವುದು ದೇಶದ ದುರಂತ ಎಂದು ಹೇಳಿದರು.

ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಭವಿಷ್ಯ ಮತ್ತು ಪೋಷಕರ ಕನಸಿಗೆ ಪೂರಕವಾಗಿ ಹೋರಾಟ ನಡೆಸುತ್ತಿದ್ದಾರೆ. ದೇಶದ 200 ನಗರಗಳಲ್ಲಿ ಸಂವಾದ ಕಾರ್ಯಕ್ರಮ ನಡೆಯುತ್ತಿದೆ. ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು, ವಿದ್ಯಾರ್ಥಿಗಳಿಗೆ ಹಲ್ಲೆ, ಗಾಳಿಯಲ್ಲಿ ಗುಂಡು, ಲಾಠಿ ಚಾರ್ಜ್ ನಡೆಸಿರುವುದು ತಲೆತಗ್ಗಿಸುವ ವಿಚಾರ. ಸಂಸತ್ ಒಳಗೆ ಮತ್ತು ಹೊರಗೆ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಹೋರಾಟಕ್ಕೆ ದೇಶದ ಯುವಜನತೆ ಬೆಂಬಲಿಸಬೇಕು. ಕೇಂದ್ರದ ವಿದ್ಯಾರ್ಥಿ ವಿರೋಧಿ ಧೋರಣೆ ವಿರುದ್ಧ ಹೋರಾಡಲೇಬೇಕು ಎಂದು ಅವರು ಕರೆ ನೀಡಿದರು.

ಮಿಲ್ಲತ್ ಸಂಸ್ಥೆಯ ಆಡಳಿತಾಧಿಕಾರಿ ಸೈಯದ್ ಅಲಿ, ಸೈಯದ್ ಜುಫಿಶಾನ್ ಅಲಿ, ಕುಶ್ತರಿ ಬೇಗಂ, ಸೈಯದ್ ಜೀಶನ್, ಅಸಿಯಾ ಫರ್ವೀನ್, ಆರೀಫ್ ಅಲಿ, ಫಜ್ಲೂರ್ ರೆಹಮಾನ್, ಸೈಯದ್ ತಾಜ್, ಶಿಕ್ಷಕರಾದ ಸಿದ್ಧಪ್ಪ, ಸಂತೋಷ್, ನದೀಮ್, ವರುಣ್, ರತನ್, ಬಿಲಾಲ್, ಆರ್. ಬಿ. ಝಡ್. ಬಾಷಾ, ಸೈಯದ್ ಇರ್ಷಾನ್ ಜಿಲಾನಿ ಮತ್ತಿತರರು ಹಾಜರಿದ್ದರು. ನೂರಾರು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

Share

Leave a comment

Leave a Reply

Your email address will not be published. Required fields are marked *