SUDDIKSHANA KANNADA NEWS/ DAVANAGERE/ DATE:12-08-2024
ದಾವಣಗೆರೆ: ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದ್ದ ಸ್ನಾತಕ ಬಿ.ಕಾಂ (ಎನ್ಇಪಿ) ಪದವಿಯ ಇ-ಕಾಮರ್ಸ್ ವಿಷಯದ ಪರೀಕ್ಷೆಯನ್ನು ಆಗಸ್ಟ್ 24ರಂದು ಬೆಳಿಗ್ಗೆ 10ರಿಂದ 12 ಗಂಟೆವರೆಗೆ ನಡೆಸಲಾಗುವುದು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ನಿಗದಿತ ದಿನಾಂಕದಂದು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಕಾಲೇಜು ಪ್ರಾಚಾರ್ಯರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ದಾವಣಗೆರೆ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಆಗಸ್ಟ್ 6 ರಂದು ನಿಗದಿಯಾಗಿದ್ದ ಬಿಕಾಂ ಅಂತಿಮ ವರ್ಷದ ಇ-ಕಾಮರ್ಸ್ (ಅಂತಿಮ ವರ್ಷದ ಎಲೆಕ್ಟಿವ್ ಪೇಪರ್) ವಿಷಯದ ಪರೀಕ್ಷೆ ಸಂದರ್ಭ ಪ್ರಶ್ನೆ ಪತ್ರಿಕೆ ಜತೆಗೆ ಉತ್ತರ ಪತ್ರಿಕೆಯನ್ನು ನೀಡಿ ಬಿಕಾಂ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಶಾಕ್ ಆಗಿದ್ದು, ಸದ್ಯಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿತ್ತು.
ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಒಳಗೊಂಡಿರುವ ದಾವಣಗೆರೆ ವಿವಿ ವ್ಯಾಪ್ತಿಯಲ್ಲಿ80ಕ್ಕೂ ಹೆಚ್ಚು ಪದವಿ ಕಾಲೇಜುಗಳಿದ್ದು, ಈ ಪೈಕಿ ಮಂಗಳವಾರ 15 ಪರೀಕ್ಷಾ ಕೇಂದ್ರಗಳಲ್ಲಿ ಉತ್ತರವಿದ್ದ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು. ಈ ಕಾರಣದಿಂದ ಪರೀಕ್ಷೆ ಮುಂದೂಡಿಕೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರ ಆಕ್ರೋಶಕ್ಕೂ ಕಾರಣವಾಗಿತ್ತು.