SUDDIKSHANA KANNADA NEWS/ DAVANAGERE/ DATE:08-08-2024
ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕೆಂಪನಹಳ್ಳಿ ಗ್ರಾಪಂ ಮತ್ತು ದೊಡ್ಡಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಶಾಸಕ ಬಸವರಾಜು ವಿ ಶಿವಗಂಗಾ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದರು.
ಈ ವೇಳೆ ಮಾತನಾಡಿದ ಅವರು, ಮಳೆಯಿಂದಾಗಿ ಹಲವು ಗ್ರಾಮಗಳಲ್ಲಿ ಮನೆಗಳು ಹಾನಿಗೊಳಗಾಗಿವೆ. ಸಂತ್ರಸ್ತರಿಗೆ ಪರಿಹಾರ, ಹೊಸ ಮನೆ ಮಂಜೂರು ಸೇರಿದಂತೆ ಮನೆ ಇಲ್ಲದವರ ಹೆಸರು ಪಟ್ಟಿ ತಯಾರಿಸುವಂತೆ ಆಯಾ ಗ್ರಾಪಂಗಳ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಕ್ಷೇತ್ರಾದ್ಯಂತ ಸಾಕಷ್ಟು ನಿವೇಶನಗಳ ಬೇಡಿಕೆ ಕೇಳಿ ಬರುತ್ತಿದ್ದು ಮುಂದಿನ ದಿನಗಳಲ್ಲಿ ಪರಿಹಾರ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಗಳಲ್ಲಿ ಹಾಳಾಗಿರುವ ಬಾಕ್ಸ್ ಚರಂಡಿಗಳ ನಿರ್ಮಾಣ, ಸಿಸಿ ರಸ್ತೆಅಭಿವೃದ್ಧಿ, ಶಾಲಾ ಕಾಂಪೌ೦ಡ್ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸುವಂತೆ ಸೂಚಿಸಿದರು.
ಕೆಂಪನಹಳ್ಳಿ, ದೊಡ್ಡಮಲ್ಲಾಪುರದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಸಾಮಾಜಿಕ ಭದ್ರತೆಗಳಾದ ಗೃಹಲಕ್ಷ್ಮೀ ಯೋಜನೆ, ವಿಧವಾ ಹಾಗೂ ವೃದ್ಧಾಪ್ಯ ವೇತನಗಳು ತಾಂತ್ರಿಕ ತೊಂದರೆಯಿಂದಾಗಿ ಸಮಸ್ಯೆಯಾಗಿದ್ದು ಎಲ್ಲಾ ಸಮಸ್ಯೆಗಳನ್ನು ಪರಿಹಾರಿಸುವುದಾಗಿ ತಿಳಿಸಿದರು. ಹಣ ಖಾತೆಗೆ ಬರದೇ ಇರುವ ಫಲಾನುಭವಿಗಳು ಕೂಡಲೇ ಇಕೆವೈಸಿ ಮಾಡಿಸುವಂತೆ ಹೇಳಿದರು.
ಜಮೀನು ವಿವಾದಗಳನ್ನು ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು. ಸಂತೆಬೆನ್ನೂರು ಬೆಸ್ಕಾಂ ಶಾಖಾಧಿಕಾರಿ ಮೋಹನ್, ಪಿಆರ್ಇಡಿ ಇಲಾಖೆಯ ಎಇ, ಎಂಜಿನಿಯರ್ ವಿದ್ಯಾಭೂಷಣ್, ಕೆಆರ್ಐಡಿ ಇಲಾಖೆ ಮಹೇಶ್, ನಿರ್ಮಿತಿ ಕೇಂದ್ರ ಗಿರೀಶ್, ಗ್ರಾಮಲೆಕ್ಕಾಧಿಕಾರಿ ಭಾರತಿ, ಕೆಂಪನಹಳ್ಳಿ ಗ್ರಾಪಂ ಅಧ್ಯಕ್ಷ ಟಿ ವೀರಪ್ಪ, ಆಲೂರು ಗ್ರಾಪಂ ಅಧ್ಯಕ್ಷ ಸೈಮುಲ್ಲಸಾಬ್ ಆಲೂರು, ವೈಎಲ್ ಲಾವಣ್ಯ, ಪಿಡಿಒ ರಂಗಸ್ವಾಮಿ, ಗ್ರಾಪಂ ಸದಸ್ಯರು ಮತ್ತು ವೆಂಕಟೇಶ್ವರ ಕ್ಯಾಂಪು, ಈರಗನಹಳ್ಳಿ, ದೊಡ್ಡಮಲ್ಲಾಪುರ, ಆಲೂರು ಗ್ರಾಮಸ್ಥರು, ಮುಖಂಡರು ಇದ್ದರು.