SUDDIKSHANA KANNADA NEWS/ DAVANAGERE/ DATE:15-07-2024
ದಾವಣಗೆರೆ: 32ನೇ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿಗಾಗಿ ಒತ್ತುವರಿ ತೆರವುಗೊಳಿಸಲು ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ, ಮತ್ತೊಂದೆಡೆ ಖಾಸಗಿ ಜಾಗದಲ್ಲಿನ ಸೆಟ್ ಬ್ಯಾಕ್ ಒಳಗೆ ಕಟ್ಟಿಕೊಂಡಿರುವ ಶೌಚಾಲಯ, ಸ್ನಾನ ಗೃಹಗಳನ್ನು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯದ ಮೇರೆಗೆ ಪಾಲಿಕೆ ಸದಸ್ಯರ ಗಮನಕ್ಕೂ ತರದೆ ಪಾಲಿಕೆ ಸಿಬ್ಬಂದಿ ಮೇಲೆ ಒತ್ತಡ ಹಾಕಿ ಬಡವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯೆ ಉಮಾ ಪ್ರಕಾಶ್ ಆರೋಪಿಸಿದ್ದಾರೆ.
32ನೇ ವಾರ್ಡಿನ ಆಂಜನೇಯ ದೇವಸ್ಥಾನದ ವಿಶಾಲ ರಸ್ತೆಯ ಎರಡು ಬದಿಗಳಿಗೆ ಫೇವರ್ ಅಳವಡಿಸುವ ಕಾರ್ಯ ಪಾಲಿಕೆ ಸದಸ್ಯೆ, ಮಾಜಿ ಮಹಾಪೌರರಾದ ಉಮಾ ಪ್ರಕಾಶ್ ಅವರ ಪ್ರಯತ್ನದಿಂದ ಒಂದು ಭಾಗ ಮುಗಿದಿದೆ. ಮತ್ತೊಂದು ಭಾಗದಲ್ಲಿ ಸುಮಾರು 8 ರಿಂದ 10 ಅಡಿ ರಸ್ತೆ ಒತ್ತುವರಿ ಮಾಡಿ ಕಬ್ಬಿಣದ ಗೂಟಗಳನ್ನು ಹಾಕಿ ತಗಡಿನ ಸೀಟ್ ಗಳನ್ನ ಹಾಕಿ ಕಾರ್ ಪಾರ್ಕಿಂಗ್ ಮಾಡಿಕೊಂಡಿರುತ್ತಾರೆ. ಮಹಾನಗರ ಪಾಲಿಕೆ ಸಿಬ್ಬಂದಿ ಸದರಿ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಮುಂದಾದಾಗ ಕಾಂಗ್ರೆಸ್ ಕಾರ್ಯಕರ್ತರು ಅವರ ಕಾರ್ಯಕ್ಕೆ ಅಡ್ಡಿಪಡಿಸಿ ಪಾಲಿಸಿಬ್ಬಂದಿಗೆ ನಿಂದಿಸಿ ತೆರವು ಗೊಳಿಸುವ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿದ್ದಾರೆ.
ಅಲ್ಲದೆ ಸಚಿವರು ಗೊತ್ತು, ಎಂಪಿಗಳು ಗೊತ್ತು, ಎಂದು ವಾರ್ಡಿನ ಮಹಿಳಾ ಇಂಜಿನಿಯರ್ ಗೆ ಬೈದದ್ದಲ್ಲದೆ ಸಚಿವರ ಪಿಎ ಕಡೆಯಿಂದ ಫೋನ್ ಮಾಡಿ ತೆರವು ಗೊಳಿಸುವ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ. ಮತ್ತೊಂದು ಕಡೆ ಅದೇ ರಸ್ತೆಯ ಆಂಜನೇಯ ದೇವಸ್ಥಾನದ ಮುಂಭಾಗದ ಓಣಿಗಳಲ್ಲಿ ಬಡಜನರು ತಮ್ಮ 15 * 22 ಅಡಿಯ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿದ್ದು ಹಿಂಭಾಗ ಎರಡು ಅಡಿ ಸೆಟ್ ಬ್ಯಾಕ್ ಬಿಟ್ಟುಕೊಂಡಿದ್ದು ಅದರಲ್ಲಿ ಶೌಚಾಲಯ ಮತ್ತು ಸ್ನಾನ ಗೃಹಗಳನ್ನು ಕಟ್ಟಿಕೊಂಡಿರುತ್ತಾರೆ. ಬಡವರ ಕಟ್ಟಿಕೊಂಡಿರುವ ಶೌಚಾಲಯಗಳಿಂದ ತೊಂದರೆಯಾಗಿದ್ದರೆ ನೋಟಿಸ್ ನೀಡಿ ಸರಿಪಡಿಸುವಂತೆ ಹೇಳಿ ಅವಕಾಶ ಕೊಡಬಹುದಾಗಿತ್ತು.
ಆದರೆ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯದ ಮೇರೆಗೆ ಮಹಾನಗರ ಪಾಲಿಕೆ ಸಿಬ್ಬಂದಿಗಳು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರಾದ ಉಮಾ ಪ್ರಕಾಶ್ ರವರ ಗಮನಕ್ಕೂ ತರದೆ ಸೆಟ್ ಬ್ಯಾಕ್ ನಲ್ಲಿನ ಬಡವರ ಶೌಚಾಲಯಗಳನ್ನು ಹೊಡೆದು ಹಾಕಿರುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಾಜ್ ಎಂಬ ನೊಂದ ನಿವಾಸಿ ಮಹಾನಗರ ಮಹಾನಗರ ಪಾಲಿಕೆಯ ಸಿಬ್ಬಂದಿಗಳನ್ನು ಪ್ರಶ್ನಿಸಿದರೆ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯದ ಮೇರೆಗೆ ಮೇಲಾಧಿಕಾರಿಗಳು ನಮ್ಮನ್ನು ಕಳಿಸಿದ್ದಾರೆ ಆದ್ದರಿಂದ ತೆರವುಗೊಳಿಸುತ್ತಿದ್ದೇವೆ ಎಂದು ಹೇಳಿರುತ್ತಾರೆ ಎಂದಿದ್ದಾರೆ.
ಕೆಲವು ಕಾಂಗ್ರೆಸ್ ಕಾರ್ಯಕರ್ತರು 32ನೇ ವಾರ್ಡಿನಲ್ಲಿ ದೌರ್ಜನ್ಯದಿಂದ ವರ್ತಿಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಗಮನಹರಿಸಿ ತಮ್ಮ ಕಾರ್ಯಕರ್ತರಿಂದ ಸಾರ್ವಜನಿಕರಿಗೆ, ಬಡವರಿಗೆ ತೊಂದರೆಯಾಗದಂತೆ ತಿಳಿ ಹೇಳಲು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪಾಲಿಕೆ ಸದಸ್ಯರಾದ ಮಾಜಿ ಮಹಾಪೌರರಾದ ಉಮಪ್ರಕಾಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಆಂಜನೇಯ ದೇವಸ್ಥಾನದ ರಥ ಬೀದಿಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ರಸ್ತೆ ಬದಿಗೆ ಫೇವರ್ ಅಳವಡಿಸುವ ಜಾಗದಲ್ಲಿ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿ ಮಾಡುತ್ತಿರುವುದು ನಿಜ. ಈ ಬಗ್ಗೆ ನಾನು ಪಾಲಿಕೆ ಆಯುಕ್ತರ ಗಮನಕ್ಕೆ ತಂದಿರುವ ವಿಷಯವನ್ನು ಸಚಿವರ ವಾಟ್ಸಪ್ ನಂಬರ್ ಗೆ ಕಳುಹಿಸಿದ್ದೇನೆ. ಸಚಿವರ ಪಿಎ ನಾಗರಾಜ್ ರವರಿಗೂ ಸಹ ಮಾತನಾಡಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯಕ್ಕೆ ಮಣಿಯಬೇಡಿ ಎಂದು ದೂರವಾಣಿ ಮೂಲಕ ಮಾತನಾಡಿರುತ್ತೇನೆ. ಸಚಿವರು ಅಭಿವೃದ್ಧಿಗೆ ಅಡ್ಡಿಪಡಿಸುವ ಕಾರ್ಯಕರ್ತರ ಮಾತಿಗೆ ಬೆಲೆ ಕೊಡುವುದಿಲ್ಲ ತಾವು ಈ ಬಗ್ಗೆ ಸಚಿವರ ಗಮನಕ್ಕೆ ತರಬೇಕೆಂದು ತಿಳಿಸಿರುತ್ತೇನೆ ಎಂದು ಉಮಾ ಪ್ರಕಾಶ್ ತಿಳಿಸಿದ್ದಾರೆ.
ಅಲ್ಲದೇ ಅವರ ವಾಟ್ಸಪ್ ನಂಬರ್ ಗೂ ಸಹ ನಾನು ಕಮಿಷನರ್ ಗೆ ಮನವಿ ಮಾಡಿರುವುದನ್ನು ಮೆಸೇಜ್ ಮಾಡಿರುತ್ತೇನೆ. ಕೆಲವರು ಸ್ವಯಿಚ್ಛೆಯಿಂದ ರಸ್ತೆ ಅಭಿವೃದ್ಧಿಗಾಗಿ ತಾವು ಮಾಡಿರುವ ಒತ್ತುವರಿ ಯನ್ನು ತೆರವುಗೊಳಿಸಿದ್ದಾರೆ. ಕೆಲವರು ರಸ್ತೆಯಲ್ಲಿಯೇ ನೀರಿನ ಸಂಪುಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಅಂತ ಸಂಪುಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮತ್ತೆ ಕೆಲವರು ತಮಗೂ ರಸ್ತೆಯಲ್ಲಿ ಸಂಪು ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಈಗ ನಿರ್ಮಿಸಿಕೊಂಡಿರುವ ಸಂಪುಗಳನ್ನು ಸಹ ತೆರವುಗೊಳಿಸುವಂತೆ ಮತ್ತು ಯಾವುದೇ ರೀತಿಯ ರಸ್ತೆ ಒತ್ತುವರಿಯಾಗದಂತೆ ಕ್ರಮ ಕೈಗೊಳ್ಳಲು ಆಯುಕ್ತರಲ್ಲಿ ಮನವಿ ಮಾಡಿರುತ್ತೇನೆ. ಅಲ್ಲದೆ ವಾರ್ಡಿನ ವಿವಿಧೆಡೆ ಹೊಸ ಕಟ್ಟಡ ಕಟ್ಟುವವರು ರಸ್ತೆಗೆ ಚಾಚಿ ರಾಂಪುಗಳನ್ನು ನಿರ್ಮಿಸಿರುವುದನ್ನು ತೆರವುಗೊಳಿಸುವಂತೆ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಆದೇಶ ನೀಡಲು ಕೋರಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.