SUDDIKSHANA KANNADA NEWS/ DAVANAGERE/ DATE:04-06-2024
ದಾವಣಗೆರೆ: ಜಿಲ್ಲೆಯ ಜನತೆ ವಿಶ್ವಾಸವಿಟ್ಟು ಮತ ನೀಡಿ ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಮುಂದಿನ ಐದು ವರ್ಷಗಳಲ್ಲಿ ಕೆಲಸ ಮಾಡುತ್ತೇನೆ. ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ನೂತನ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಮಾಧ್ಯಮವದರ ಜೊತೆ ಮಾತನಾಡಿದ ಅವರು, ಮತ ನೀಡಿದ ಎಲ್ಲಾ ಮತದಾರರಿಗೆ ಕೃತಜ್ಞತೆ, ಅಭಿನಂದನೆ ಸಲ್ಲಿಸುತ್ತೇನೆ. ಈ ಕ್ಷೇತ್ರದಲ್ಲಿ ಬದಲಾವಣೆ ಬೇಕೆಂದು ಜನರು ಬಯಸಿದ್ದರು. ಅದರಂತೆ ತೀರ್ಪು ಪ್ರಕಟವಾಗಿದೆ
ಎಂದು ಹೇಳಿದರು.
ಕಳೆದೊಂದು ತಿಂಗಳಿನಿಂದ ಪ್ರಚಾರ ಮಾಡಿದ್ದೆವು. ಇದನ್ನು ಜನರು ಅರ್ಥ ಮಾಡಿಕೊಂಡು ಈ ಬಾರಿ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಕಳೆದ 25 ವರ್ಷದಿಂದ ದಾವಣಗೆರೆ ಕ್ಷೇತ್ರದಲ್ಲಿ ಏನೆಲ್ಲಾ ಆಗುತ್ತೆ ಎಂದು ಜನರು ಕನಸು ಕಂಡಿದ್ದಾರೋ ಅದು ನಿಜವಾಗುತ್ತೆ ಎಂದುಕೊಂಡು ಮತ ಹಾಕಿದ್ದಾರೆ ಎಂದು ನನಗೆ ಅನಿಸುತ್ತಿದೆ. ಇದು ಸುಳ್ಳಾಗಲು ಬಿಡದೇ ಜನತೆಯ ಆಶೋತ್ತರಗಳಿಗೆ ತಕ್ಕಂತೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಹಾಗೂ ಕಾಂಗ್ರೆಸ್ ನೀಡಿದ್ದ ಭರವಸೆಗಳು ಈ ಬಾರಿ ಕೈ ಹಿಡಿದಿವೆ. ಸ್ಥಳೀಯ ಶಾಸಕರು, ಕಾರ್ಯಕರ್ತರು, ಮುಖಂಡರು ಹಗಲಿರುಳು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ಜಯ ಗಳಿಸಿದ್ದೇನೆ. ಸಂಸದರಾಗಿ ಕೈಗಾರಿಕೆ, ಶಾಶ್ವತ ನೀರಾವರಿ ಯೋಜನೆಗಳು, ನಿರುದ್ಯೋಗ ಸಮಸ್ಯೆ ನಿವಾರಣೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಈ ಬಾರಿ ಶಾಸಕರ ಬಲ, ರಾಜ್ಯ ಸರ್ಕಾರದ ಬಲದಿಂದ ಕಾಂಗ್ರೆಸ್ ಗೆ ಗೆಲುವು ಸಿಕ್ಕಿದೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ವಿವರಿಸಿದರು.
ಪತಿ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಚುನಾವಣೆ ವೇಳೆ ಕೆಲಸ ಮಾಡಿದ್ದಾರೆ. ಅವರ ಕಾರ್ಯತಂತ್ರವೂ ನಮಗೆ ಸಹಾಯ ಮಾಡಿದೆ. ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಮೊದಲು ಪತಿ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಮೊದಲು ವಿಶ್ ಮಾಡಿದೆ, ಅವರೂ ಸಹ ವಿಶ್ ಮಾಡಿದರು ಎಂದು ತಿಳಿಸಿದರು.