SUDDIKSHANA KANNADA NEWS/ DAVANAGERE/ DATE:03-06-2024
ದಾವಣಗೆರೆ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಕೊಚ್ಚಿ ಹೋಗಿವೆ. ತರಕಾರಿ ಬೆಳೆ ಹಾನಿಯಾಗಿವೆ. ಇಷ್ಟೆಲ್ಲ ತೊಂದರೆ ಆಗಿದ್ದರೂ
ಸಂಬAಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಮಂಡಲೂರು, ಹುಣಸೆಕಟ್ಟೆ, ಕಾಟೇಹಳ್ಳಿ, ಚಿನ್ನಸಮುದ್ರ, ಲಕ್ಕಮುತ್ತೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಡೆರಾತ್ರಿ ಸುರಿದ ಧಾರಾಕಾರ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಅಣಜಿ ಹಳ್ಳ ರಭಸವಾಗಿ ಹರಿದು ಮಂಡಲೂರು-ಗೊಲ್ಲರಹಟ್ಟಿ ಸಂಪರ್ಕ ರಸ್ತೆ, ಮಂಡಲೂರು-ಲಕ್ಕ್ಕೆಮುತ್ತೇನಹಳ್ಳಿ ರಸ್ತೆ ಹಾಗೂ ಮಂಡಲೂರು- ಕಾಟೇಹಳ್ಳಿ ತಾಂಡಾ, ಕದರಪ್ಪನಹಟ್ಟಿ ರಸ್ತೆಗಳ ಸಂಪರ್ಕ ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಅಲ್ಲದೇ ಹುಣಸೆಕಟ್ಟೆ ಗ್ರಾಮದ ಶೇಖರಪ್ಪ ತನ್ನ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಟೊಮೆಟೊ, ಮೆಣಸಿನಕಾಯಿ ನೀರಿನಲ್ಲಿ ಕೋಚಿ ಹೋಗಿವೆ. ಅಡಿಕೆ ತೋಟಗಳಿಗೂ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಮಳೆಯಿಂದ ಇಷ್ಟೆಲ್ಲ ರಸ್ತೆಗಳು ಮತ್ತು ಬೆಳೆ ಹಾನಿಯಾಗಿದ್ದರೂ ಒಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ. ಶಾಸಕರು ಬಂದು ಪರಿಶೀಲನೆ ನಡೆಸಿದ್ದರೂ ಕೂಡ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಗ್ರಾಮಸ್ಥರಿಗೆ, ರೈತರಿಗೆ ಇಷ್ಟು ತೊಂದರೆ ಆಗಿದ್ದರೂ ಅವರ ಸಮಸ್ಯೆಗಳನ್ನು ಆಲಿಸುವ ಸೌಜನ್ಯವಿಲ್ಲ. ಕೂಡಲೇ ಸಂಬAಧಪಟ್ಟ ಮೇಲಧಿಕಾರಿಗಳು ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ-48ರ ಹುಣಸೆಕಟ್ಟೆ ಗ್ರಾಮದ ಬಳಿ ಅವೈಜ್ಞಾನಿಕ ಸೇತುವೆ ನಿರ್ಮಾಣದಿಂದ ಮಳೆ ಬಂದಾಗ ಗುಡ್ಡದಿಂದ ಹರಿದು ಬರುವ ನೀರು ಹುಣಸೆಕಟ್ಟೆ ಗ್ರಾಮಕ್ಕೆ ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಿದೆ. ಹೆದ್ದಾರಿ ಸೇತುವೆ ಬಳಿ ಮಳೆ ನೀರು ಹರಿದು ಹೋಗಲು ಸಣ್ಣ ಸಣ್ಣ ಸಿಮೇಂಟ್ ಪೈಪ್ ಅಳವಡಿಸಿದ್ದರಿಂದ ಹೂಳು ತುಂಬಿ ನೀರು ಸರಾಗವಾಗಿ ಹರಿಯದೆ ಗುಡ್ಡದಿಂದ ಬರುವ ನೀರು ಗ್ರಾಮಕ್ಕೆ ನುಗ್ಗುತ್ತಿದೆ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿ ಸರಿಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವು, ರಮೇಶ್, ಕುಮಾರ್, ಗಿರೀಶ್, ನಾಗೇಂದ್ರಪ್ಪ, ಕಲ್ಲಿಂಗಪ್ಪ, ಕಂಟಪ್ಪ, ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ರಸ್ತೆ ಕಾಮಗಾರಿಗೆ 1.50 ಕೋಟಿ ರೂ. ಮಂಜೂರು
ಮಂಡಲೂರು-ಲಕ್ಕೆಮುತ್ತೇನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ 1.50 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿವೆ. ಕೂಡಲೇ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸರ್ಕಾರದ ಮೇಲೆ ಒತ್ತಡ ಹಾಕಿ ಹಾನಿಗೊಳಗಾದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು.