SUDDIKSHANA KANNADA NEWS/ DAVANAGERE/ DATE:02-06-2023
ದಾವಣಗೆರೆ(DAVANAGERE): ಜಗಳೂರು (JAGALURU) ಶಾಸಕರಾಗಿ ಆಯ್ಕೆಯಾಗಿರುವ ದೇವೇಂದ್ರಪ್ಪರು ವಿಶಿಷ್ಟವಾಗಿ ಕಾರ್ಯ ಮಾಡುವ ಮೂಲಕ ಶಾಸಕರಾಗಿ ಕಾರ್ಯ ಆರಂಭಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 864 ಮತಗಳ ಅಂತರದಿಂದ ಜಯಭೇರಿ ಬಾರಿಸುವ ಮೂಲಕ ಮೊದಲ (FIRST)ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ದೇವೇಂದ್ರಪ್ಪರು ಮೂಲತಃ ಜಗಳೂರಿನವರು.
ಕಡುಬಡತನದ ನಡುವೆ ಬೆಳೆದ ದೇವೇಂದ್ರಪ್ಪರು ಶಾಲೆಯಲ್ಲಿ ಜವಾನರಾಗಿ ಕಾರ್ಯನಿರ್ವಹಿಸಿದ್ದರು. ಮಾತ್ರವಲ್ಲ, ಇಂದಿಗೂ ಅದೇ ಅಭಿಮಾನ, ಪ್ರೀತಿ ವಿಶ್ವಾಸ ಈ ಶಾಲೆಯ ಮೇಲಿದೆ. ಅಂದು ಮಾಡುತ್ತಿದ್ದ ಕೆಲಸಗಳನ್ನು ಇಂದಿಗೂ ಮರೆತಿಲ್ಲ. ಶಾಸಕರಾಗಿ ಆಯ್ಕೆಯಾದ ಬಳಿಕ ಜಗಳೂರಿನ ಅಮರಭಾರತಿ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದರು.
ಶಾಲೆಯಲ್ಲಿ ಕಸ ಗುಡಿಸಿ ಶಾಲೆ ಆರಂಭಕ್ಕೆ ವಿನೂತನವಾಗಿ ಚಾಲನೆ ನೀಡಿದ ಅವರು, ಈ ಶಾಲೆಯಲ್ಲಿ ಅಂದು ಮಾಡುತ್ತಿದ್ದ ಕಸ ಗುಡಿಸುವುದು, ಶಾಲೆಯ ಗಂಟೆ ಬಾರಿಸುವುದು, ಟೇಬಲ್ ಒರೆಸುವುದು, ಅಳವಡಿಸಿರುವ ಮಹನೀಯರ ಫೋಟೋಗೆ ನಮಸ್ಕಾರ ಮಾಡುವುದನ್ನು ಇಂದಿಗೂ ಮರೆತಿಲ್ಲ. ಶಾಸಕರಾದ ಬಳಿಕ ಶಾಲೆಗೆ ಆಗಮಿಸಿದ ದೇವೇಂದ್ರಪ್ಪರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಭಾವುಕರಾದ ಶಾಸಕರು:
ಈ ವೇಳೆ ಮಾತನಾಡಿದ ಅವರು, ವಿದ್ಯಾರತ್ನ ದಿ. ಡಾ ಟಿ.ತಿಪ್ಪೇಸ್ವಾಮಿ ಅವರು ಜೀವನ ನೀಡಿದ್ದನ್ನು ಮರೆತರೆ ನಿಜಕ್ಕೂ ಆತ್ಮವಂಚನೆ ಮಾಡಿಕೊಂಡಂತೆ ಎಂದು ಹೇಳುವ ಮೂಲಕ ಭಾವುಕರಾದರು.
ನನ್ನ ಮಕ್ಕಳಿಗೂ ಫ್ರೀ ಎಜುಕೇಶನ್:
ನನಗೆ ಜನ್ಮ ನೀಡಿದ ಮಾಚಿಕೆರೆ ಬಸಪ್ಪ. ಆದರೆ ಕಿತ್ತು ತಿನ್ನುವ ಬಡತನದಲ್ಲಿ ಜನಿಸಿದ ನನಗೆ ಡಿ ಗ್ರೂಪ್ (D GROUP) ನೌಕರಿ ಒದಗಿಸಿದರು. ಅಂದು ಕೇವಲ 380 ರೂಪಾಯಿ ವೇತನದೊಂದಿಗೆ ಜೀವನ ಸಾಗುತಿತ್ತು. ಅಲ್ಲದೇ, ನನ್ನ ಮಕ್ಕಳಿಗೆ ಅಮರಭಾರತಿ ವಿದ್ಯಾಕೇಂದ್ರ(AMARA BHARATHI VIDYA KENDRA)ದಲ್ಲಿ ಉಚಿತ ಶಿಕ್ಷಣದ ಭಿಕ್ಷೆ ಕೊಟ್ಟ ಕಾರಣ ಇಂದು ನನ್ನ ಮಗ ಐ.ಎ.ಎಸ್ ಉತ್ತೀರ್ಣನಾದ ಫಲವಾಗಿ ನಾನು ಶಾಸಕನಾಗಿರುವೆ. ಇದಕ್ಕೆ ಕಾರಣ ವಿದ್ಯಾರತ್ನ ದಿ.ಟಿ .ತಿಪ್ಪೇಸ್ವಾಮಿ ಎಂದು ತಿಳಿಸಿದರು.
ಅಮರಭಾರತಿ ವಿದ್ಯಾಕೇಂದ್ರ ಕಾರ್ಯದರ್ಶಿ ಟಿ.ಮಧು ಮಾತ ನಾಡಿ,ನಮ್ಮ ಸಂಸ್ಥೆಯಲ್ಲಿ ಕೆಳ ದರ್ಜೆ ನೌಕರನಾಗಿ ನಿವೃತ್ತಿ ಹೊಂದಿದ ಒಬ್ಬ ಸಾಮಾನ್ಯ ವ್ಯಕ್ತಿ ಮಗನನ್ನು ಉನ್ನತ ಅಧಿಕಾರಿಯಾಗಿಸಿರುವುದಲ್ಲದೇ ತಾವೊಬ್ಬ ಶಾಸಕನಾಗಿ ಆಯ್ಕೆಯಾಗಿ ನಮ್ಮ ಸಂಸ್ಥೆ ಅಂಗಳದಲ್ಲಿ ಆಗಮಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ಮುಖ್ಯಾಧಿ ಕಾರಿ ಲೋಕ್ಯಾನಾಯ್ಕ ಅಮರ ಭಾರತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಶ್ವೇತಾ ಮಧು, ಕೆಚ್ಚೇನಹಳ್ಳಿ ಶಿವಣ್ಣ,ಸಿ. ತಿಪ್ಪೇಸ್ವಾಮಿ,ಎನ್ ಟಿ ಯರ್ರಿಸ್ವಾಮಿ, ಸುಭಾಷ್ ಚಂದ್ರ ಬೋಸ್ , ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ ಎ.ಪಿ.ಪಾಲಯ್ಯ, ಸಿ. ಲಕ್ಷ್ಮಣ್, ಕೃಷ್ಣಪ್ಪ,ಮಹೇಶ್, ಕಿಲಾರಿ ಸಣ್ಣ ಸುರಯ್ಯ .ಪ್ರಭಾಕರ್ ಲಕ್ಕೊಳ್,ಷಂಷುದ್ದೀನ್ ಮತ್ತಿತರರು ಹಾಜರಿದ್ದರು.