SUDDIKSHANA KANNADA NEWS/ DAVANAGERE/ DATE:13-03-2024
ದಾವಣಗೆರೆ: ಈಗಷ್ಟೇ ಟಿಕೆಟ್ ಘೋಷಣೆಯಾಗಿದೆ. ನನಗೆ ಆರೋಗ್ಯ ಸರಿ ಇಲ್ಲದ ಕಾರಣ ನನ್ನ ಮನೆತನದವರಿಗೆ ಟಿಕೆಟ್ ನೀಡುವಂತೆ ಕೇಳಿದ್ದೆ. ಹಾಗಾಗಿ, ನನ್ನ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಖುಷಿಯಾಗಿದೆ ಎಂದು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ.
ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ,
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.
ನನಗೆ ಟಿಕೆಟ್ ನೀಡಲಿಲ್ಲ ಎಂಬ ಬೇಸರವಿಲ್ಲ. ಸಂತೋಷ ಆಗಿದೆ. ಸರ್ವೆ, ವಯಸ್ಸು, ಆರೋಗ್ಯ ಸೇರಿದಂತೆ ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ನಾನೇ ಟಿಕೆಟ್ ಬೇಡ ಎಂದಿದ್ದೆ. ಈಗ ಮತ್ತೆ ನಮ್ಮ ಮನೆತನದವರಿಗೆ
ಟಿಕೆಟ್ ನೀಡಿದ್ದು, ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.
ಬಂಧು, ಮಿತ್ರರೂ ಆದ ಬಸವರಾಜ್ ಬೊಮ್ಮಾಯಿ ಅವರಿಗೂ ವಿಶೇಷವಾದ ಧನ್ಯವಾದ ಅರ್ಪಿಸುತ್ತೇನೆ. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯರೂ ಸೇರಿದಂತೆ ಭಿನ್ನಮತ ಮಾಡಿದವರನ್ನು ಕರೆದು ಮಾತನಾಡುತ್ತೇನೆ. ಇಲ್ಲವೇ ನಾನೇ ಅವರ ಜೊತೆ ಮಾತುಕತೆ ನಡೆಸುತ್ತೇನೆ. ಕಳೆದ 20 ವರ್ಷಗಳಿಂದಲೂ ನನ್ನ ಪರವಾಗಿ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ನಾನು ಅವರ ಚುನಾವಣೆಯಲ್ಲಿ ದುಡಿದಿದ್ದೇನೆ. ಎಲ್ಲರೂ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ. ಎಲ್ಲವೂ ಸರಿ ಹೋಗಲಿದೆ. ಈ ಬಾರಿಯೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.