SUDDIKSHANA KANNADA NEWS/ DAVANAGERE/ DATE:03-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಕದನ ಕುತೂಹಲ ಇನ್ನೂ ಹಾಗೆಯೇ ಇದೆ. ಬಿಜೆಪಿ ವರಿಷ್ಠರು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಆದ್ರೆ, ಕರ್ನಾಟಕದವರಿಗೆ ಯಾರಿಗೂ ಟಿಕೆಟ್ ಘೋಷಿಸಿಲ್ಲ. ಈ ಬೆಳವಣಿಗೆ ನಡುವೆ ದಾವಣಗೆರೆಯಲ್ಲಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಕೊಟ್ಟಿರುವ ಈ ಒಂದು ಹೇಳಿಕೆ ಕುತೂಹಲ ಕೆರಳುವಂತೆ ಮಾಡಿದೆ.
ಮದುವೆಯಾಗಿ ತುಂಬಾ ವರ್ಷ ಆಗಿರುತ್ತದೆ. ಕೂಡಿಕೊಂಡು ಬಾಳಿರುತ್ತಾರೆ. ಗಂಡ ಹೆಂಡತಿ ಇಷ್ಟು ವರ್ಷ ಕೂಡಿಕೊಂಡು ಇರ್ತಾರೆ, ಆಮೇಲೆ ಬೇರೆಯವರನ್ನು ನೋಡಿಕೊಳ್ಳಲು ಆಗುತ್ತದೆಯಾ ಎಂಬ ಪ್ರಶ್ನೆ ಹಾಕುವ ಮೂಲಕ ಈ ಬಾರಿ ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ಎರಡನೇ ಪಟ್ಟಿ ಯಾವಾಗ ಬಿಡುಗಡೆ ಆಗುತ್ತದೆ ಎಂಬುದು ಎಂಪಿ ಆದ ನನಗೆ ಗೊತ್ತಾಗುತ್ತಾ? ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ಬೆಂಗಳೂರು, ದೆಹಲಿಯಲ್ಲಿ ಇರುವವರಿಗೆ ಗೊತ್ತಾಗುವುದಿಲ್ಲ. ನನಗೆ ಗೊತ್ತಾಗುತ್ತದೆಯಾ ಎಂದು ಮಾಧ್ಯಮದವರನ್ನೇ ಸಿದ್ದೇಶ್ವರ ಅವರು ಪ್ರಶ್ನೆ ಮಾಡಿದರು.
ಇಂದು ರಾಜ್ಯದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ರಾಜ್ಯ ಕಾರ್ಯದರ್ಶಿಗಳಾದ ಅಂಬಿಕಾ ಹುಲಿ ನಾಯಕ್ ಅವರು ದಾವಣಗೆರೆ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬ ಕುರಿತಂತೆ ಸಭೆ ನಡೆಸಿದ್ದಾರೆ. ಎಂಟೂ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ಪಕ್ಷದ ವರಿಷ್ಠರಿಗೆ ಕಳುಹಿಸಿಕೊಡುತ್ತಾರೆ. ಅವರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.
ಟಿಕೆಟ್ ನನಗೆ ಸಿಗುತ್ತದೆಯಾ ಎಂಬುದಕ್ಕೆ ಸರಿಯಾಗಿ ಉತ್ತರಿಸದ ಸಿದ್ದೇಶ್ವರ ಅವರು, 2ನೇ ಪಟ್ಟಿ ಟಿವಿಯಲ್ಲಿ ಬಂದ ಮೇಲೆ ಹೇಳ್ತೇನೆ. ಈಗಲೇ ನನಗೇನೂ ಗೊತ್ತಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿಯೂ ಅಭ್ಯರ್ಥಿಗಳ ಹೆಸರು ಘೋಷಿಸಿಲ್ಲ. ಬಿಜೆಪಿ – ಜೆಡಿಎಸ್ ಮೈತ್ರಿ ಆಗಿ ತುಂಬಾ ದಿನ ಆಗಿದೆ. ಈ ವಿಚಾರದಿಂದಲೇ ತಡವಾಯ್ತಾ ಎಂಬುದನ್ನು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರಿಗೆ ಗೊತ್ತು ಎಂದು ಹೇಳಿದರು.
ಈ ಬಾರಿಯೂ ತಮಗೆ ಟಿಕೆಟ್ ಸಿಗುತ್ತದೆಯಾ ಎಂಬ ಪ್ರಶ್ನೆಗೆ ನೋಡೋಣ, ಕಾದು ನೋಡೋಣ. ವೇಯ್ಟ್ ಅಂಡ್ ಸೀ ಎಂದು ಹೇಳಿದರಲ್ಲದೇ, ಪ್ರತ್ಯೇಕವಾಗಿ ನನ್ನ ವಿರುದ್ಧ ಸಭೆ ನಡೆಸಿರುವ ಕುರಿತಂತೆ ನನಗೆ ಮಾಹಿತಿ ಇಲ್ಲ. ನಾನಂತೂ ಯಾರಿಗೂ ಏನೂ ಹೇಳಿಲ್ಲ. ಸಭೆ ಬನ್ನಿ ಎಂದು ನಾನು ಕರೆದಿಲ್ಲ. ಬೇರೆಯವರು ಕರೆದರೆ ಸಭೆಗೆ ಹೋಗಬೇಡಿ ಎಂದೂ ಹೇಳಿಲ್ಲ. ರಾಜ್ಯ, ರಾಷ್ಟ್ರ ನಾಯತರು ನೋಡಿಕೊಳ್ಳುತ್ತಾರೆ. ನಾನು ಶಿಸ್ತಿನ ಸಿಪಾಯಿ, ಕಾರ್ಯಕರ್ತ. ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನಾನಂತೂ ಯಾರಿಗೂ ಟಿಕೆಟ್ ನೀಡಿ ಎಂದು ಕೇಳಿಲ್ಲ. ಇಂಥವರಿಗೆ ನೀಡಿ ಎಂದು ವರಿಷ್ಠರು ಕೇಳಿದರೆ ಅಭಿಪ್ರಾಯ ಹೇಳುತ್ತೇನೆ. ನನಗೆ ಟಿಕೆಟ್ ಘೋಷಣೆಯಾದ ಬಳಿಕ ಹೇಳುತ್ತೇನೆ. ಏನು ಗೊಂದಲ ಇಲ್ಲ. ಕಾರ್ಯಕರ್ತರು ಚೆನ್ನಾಗಿಯೇ ಇದ್ದಾರೆ. ಬಿಜೆಪಿಗೆ ಬಹುಮತ ಸಿಕ್ಕೇ ಸಿಗುತ್ತದೆ. ಯಾರೇ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಎರಡರಿಂದ ಎರಡೂವರೆ ಲಕ್ಷ ಮತಗಳ ಅಂತರದಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ನನಗೆ ಯಾವುದೇ ಗೊಂದಲ ಇಲ್ಲ. ರಾಜ್ಯ ನಾಯಕರು, ರಾಷ್ಟ್ರನಾಯಕರ ಜೊತೆ ಮಾತನಾಡಿದ್ದೇನೆ. ಎಲ್ಲವೂ ಸರಿ ಹೋಗುತ್ತದೆ. ಕಾದು ನೋಡಿ. ಈಗಲೇ ಏನನ್ನೂ ಹೇಳಲು ಆಗದು ಎಂದು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಹೇಳಿದರು.