SUDDIKSHANA KANNADA NEWS/ DAVANAGERE/ DATE:02-03-2024
ದಾವಣಗೆರೆ: ಮಧ್ಯ ಕರ್ನಾಟಕ ಭಾಗದ ಜನಸಾಮಾನ್ಯರ ಜೀವದ ಆರೈಕೆ ಮಾಡುತ್ತಿರುವ ದಾವಣಗೆರೆಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತೊಂದು ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ.
ಏನಿದು ಘಟನೆ?
ನಾಯಕನಹಟ್ಟಿ ಬಳಿಯ ಗ್ರಾಮವೊಂದರಲ್ಲಿ ಇಬ್ಬರು ಶಾಲಾ ಬಾಲಕರ ನಡುವಿನ ಕ್ಲುಲ್ಲಕ ಜಗಳವು ಚಾಕು ಇರಿತದಿಂದ ಕೊನೆಗೊಂಡಿತ್ತು. ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗೆ ಆತನ ಸಹಪಾಠಿಯೊಬ್ಬ ಆಟದ ವೇಳೆ ಮಾತಿಗೆ ಮಾತು ಬೆಳದ ಕಾರಣ ಚಾಕುವಿನಿಂದ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಜೀವನ್ಮರಣ ಹೋರಾಟದಲ್ಲಿದ್ದ ವಿದ್ಯಾರ್ಥಿಯನ್ನು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೂ ಕೂಡ ವಿದ್ಯಾರ್ಥಿಯ ಅಳಿವು ಉಳಿವಿನ ಬಗ್ಗೆ ಅಲ್ಲಿನ ವೈದ್ಯರು ಯಾವುದೇ ಖಾತ್ರಿ ನೀಡಿರಲಿಲ್ಲ. ಒಂದು ದಿನದ ನಂತರ ಪರಿಸ್ಥಿತಿ ಬಿಗಡಾಯಿಸಿದ ಕಾರಣ, ಗಾಯಗೊಂಡ ವಿದ್ಯಾರ್ಥಿಯನ್ನು ಅಂಬ್ಯುಲೆನ್ಸ್ ಮೂಲಕ ದಾವಣಗೆರೆಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶುಕ್ರವಾರ ತಡರಾತ್ರಿ ದಾಖಲಿಸಲಾಗಿತ್ತು.
ವೈದ್ಯರ ಭರವಸೆ:
ತಮ್ಮ ಮಗ ಬದುಕಬಹುದು ಎಂಬ ಭರವಸೆಯೇ ಕಳೆದುಕೊಳ್ಳುತ್ತಿದ್ದ ಪೋಷಕರಿಗೆ, ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್ ಅವರು ಧೈರ್ಯ ತುಂಬಿ, ಕೂಡಲೇ ಶಸ್ತ್ರ ಚಿಕಿತ್ಸೆಗೆ ಏರ್ಪಾಡು ಮಾಡಿದ್ದರು. ಡಾ. ಎಸ್. ಶ್ರೀನಿವಾಸ್,
ಡಾ. ದೀಪಕ್ ಅವರನ್ನೊಳಗೊಂಡ ವೈದ್ಯರ ತಂಡ ಸತತ ಮೂರು ತಾಸುಗಳ ಶ್ರಮದಿಂದಾಗಿ ವಿದ್ಯಾರ್ಥಿಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಸದ್ಯ ಪ್ರಾಣಾಪಾಯದಿಂದ ವಿದ್ಯಾರ್ಥಿಯು ಪಾರಾಗಿದ್ದಾನೆ ಎಂದು ಆಸ್ಪತ್ರೆಯ ಮೂಲಗಳಿಂದ
ತಿಳಿದು ಬಂದಿದೆ.
ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿದ ಡಾ. ಎಸ್. ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿ ಆರೈಕೆ ಆಸ್ಪತ್ರೆಗೆ ಬರುವಷ್ಟರಲ್ಲೇ ಒಂದು ಲೀಟರ್ ನಷ್ಟು ರಕ್ತ ಕಳೆದುಕೊಂಡು ಚಿಂತಾಜನಕವಾಗಿದ್ದು, ಚಾಕು ಇರಿತದಿಂದ ಜಠರಾಗೆ ತೀವ್ರ ಹಾನಿಯಾಗಿತ್ತು.
ಹೆಚ್ಚು ಸಮಯವಿಲ್ಲದ ಕಾರಣ ವಿದ್ಯಾರ್ಥಿಗೆ ಶುಕ್ರವಾರ ತಡರಾತ್ರಿಯೇ ಶಸ್ತ್ರ ಚಿಕಿತ್ಸೆ ಮಾಡಿದೆವು. ರಕ್ತ ಹೆಪ್ಪುಗಟ್ಟಿದ್ದರ ಜತೆಗೆ ರಕ್ತದೊತ್ತಡ ಕಡಿಮೆಯಿದ್ದು, ಎದೆ ಬಡಿತ ಅತ್ಯಂತ ತೀವ್ರವಾಗಿತ್ತು. ಇದರಿಂದಾಗಿ ಒಂದಷ್ಟು ಸವಾಲುಗಳು
ಎದುರಾದರೂ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಹೇಳಿದರು.
ಅಭಿನಂದನೆ ಸಲ್ಲಿಸಿ ಡಾ. ಟಿ. ಜಿ. ರವಿಕುಮಾರ್
ಶುಕ್ರವಾರ ರಾತ್ರಿ ವಿದ್ಯಾರ್ಥಿಯನ್ನು ಆರೈಕೆ ಆಸ್ಪತ್ರೆಗೆ ದಾಖಲಿಸಿದಾಗ ಪೋಷಕರಲ್ಲಿ ಭಯವಿತ್ತು. ದೇವರು ಮತ್ತು ವೈದ್ಯರಲ್ಲಿ ಭರವಸೆ ಇರಿಸಿಕೊಳ್ಳಿ ಎಂದು ಅವರಿಗೆ ಧೈರ್ಯ ತುಂಬಲಾಯಿತು. ಸಂಕೀರ್ಣ ಮತ್ತು ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿ ಮಾಡಿದ ಆರೈಕೆ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಆರೈಕೆ ಕುಟುಂಬದ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದು ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ. ತಿಳಿಸಿದ್ದಾರೆ.