SUDDIKSHANA KANNADA NEWS/ DAVANAGERE/ DATE:16-02-2024
ಬೆಂಗಳೂರು: ತೋಟಗಾರಿಕೆ ಇಲಾಖೆಗೆ ಸಿದ್ದರಾಮಯ್ಯ ಏನೆಲ್ಲಾ ಕೊಡುಗೆ ನೀಡಿದ್ದಾರೆ ನೋಡಿ.
ತೋಟಗಾರಿಕೆಗೆ ಸಂಬಂಧಿಸಿದ ತಾಂತ್ರಿಕ ಸಲಹೆ, ಮಾರುಕಟ್ಟೆ ಸಂಪರ್ಕ, ಬೇಸಾಯ ಪರಿಕರಗಳು ಮತ್ತು ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಆಯ್ದ ಜಿಲ್ಲೆಗಳಲ್ಲಿ ಕಿಸಾನ್ ಮಾಲ್ಗಳನ್ನು ಸ್ಥಾಪಿಸಲಾಗುವುದು.
ರಾಜ್ಯದಲ್ಲಿ 40,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿರುವ ಪುಷ್ಪ ಬೆಳೆಗಳ ಮಾರಾಟ ಮತ್ತು ರಫ್ತನ್ನು ಉತ್ತೇಜಿಸಲು ಬೆಂಗಳೂರಿನಲ್ಲಿ ಸುಸಜ್ಜಿತವಾದ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು.
ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಮತ್ತು ರಫ್ತಿನ ಪ್ರಮಾಣ ಹೆಚ್ಚಿಸಲು ಕೊಯ್ಲೋತರ ನಿರ್ವಹಣಾ ಕೇಂದ್ರ (Packhouse) ಹಾಗೂ ಮೌಲ್ಯವರ್ಧನ ಸಂಸ್ಕರಣಾ ಘಟಕಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ
ಸ್ಥಾಪಿಸಲಾಗುವುದು.
ರಾಜ್ಯದಲ್ಲಿ ಅಡಿಕೆ ಬೆಳೆಯಲ್ಲಿ ಕಂಡು ಬರುವ ಮಾರಕ ರೋಗಗಳನ್ನು ನಿಯಂತ್ರಿಸಲು ಪೂರಕವಾದ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣೆ ಚಟುವಟಿಕೆಗಳನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ
ಕೈಗೊಳ್ಳಲಾಗುವುದು.
ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚು ಇಂಗಾಲವನ್ನು ಹಿಡಿದಿಟ್ಟುಕೊಳ್ಳುವ ಬೆಳೆಗಳನ್ನು ಗುರುತಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ Carbon Credit ರೂಪದಲ್ಲಿ ಮಾರಾಟ ಮಾಡುವ ಮೂಲಕ ರೈತರು ಹೆಚ್ಚಿನ ಆದಾಯ ಗಳಿಸಲು ಅನುಕೂಲವಾಗುವಂತೆ ಉತ್ತೇಜನ ನೀಡಲಾಗುವುದು.
ರಾಜ್ಯದಲ್ಲಿ ಸಾಂಬಾರು ಪದಾರ್ಥ ಬೆಳೆಗಳನ್ನು ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಹಾಗೂ ಬೆಳೆಗಳ ರಫ್ತನ್ನು ಉತ್ತೇಜಿಸಲು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ನ್ನು (Spice Park) ಸಾರ್ವಜನಿಕ
ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು.
ತೋಟಗಾರಿಕೆ ಬೆಳೆಗಳಿಗೆ ವಿಜಯಪುರ ಜಿಲ್ಲೆಯು ಹೆಸರುವಾಸಿಯಾಗಿದೆ. ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಳಿಗೆ ಇನ್ನಷ್ಟು ಉತ್ತೇಜನ ನೀಡಲು ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜನ್ನು
ಸ್ಥಾಪಿಸಲಾಗುವುದು.
ರೇಷ್ಮೆ
ಏಷ್ಯಾದಲ್ಲಿಯೇ ಅತಿ ಹೆಚ್ಚು ರೇಷ್ಮೆಗೂಡು ಮಾರಾಟ ವಹಿವಾಟು ನಡೆಸುವ ರಾಮನಗರ ಮತ್ತು ಶಿಡ್ಲಘಟ್ಟದಲ್ಲಿರುವ ರೇಷ್ಮೆ ಮಾರುಕಟ್ಟೆಗಳನ್ನು ಮೊದಲನೇ ಹಂತದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ಮಾರುಕಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ 250 ಕೋಟಿ ರೂ. ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಗಳನ್ನು
ಕೈಗೆತ್ತಿಕೊಳ್ಳಲಾಗುವುದು.
ರೇಷ್ಮೆ ನೂಲು ಬಿಚ್ಚಾಣಿಕೆದಾರರು ಉತ್ಪಾದಿಸಿದ ಕಚ್ಚಾ ರೇಷ್ಮೆಗೆ ಪ್ರೋತ್ಸಾಹಧನವನ್ನು ನೀಡಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ವಾರ್ಷಿಕ 12 ಕೋಟಿ ರೂ. ಒದಗಿಸಲಾಗುವುದು.
ಬೈವೋಲ್ಟೀನ್ ರೇಷ್ಮೆಗೂಡುಗಳಿಗೆ ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಕಿಲೋಗೆ 10 ರೂ.ನಿಂದ 30 ರೂ.ಗೆ ಹೆಚ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಿಸಿದ್ದಾರೆ.