Home ದಾವಣಗೆರೆ ದೇಶದಲ್ಲಿರುವುದು ನಾಯಕತ್ವದ ಕ್ರೈಸಿಸ್, ಇಂಧನದ್ದಲ್ಲ: ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
ದಾವಣಗೆರೆನವದೆಹಲಿಬೆಂಗಳೂರು

ದೇಶದಲ್ಲಿರುವುದು ನಾಯಕತ್ವದ ಕ್ರೈಸಿಸ್, ಇಂಧನದ್ದಲ್ಲ: ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ಜನತೆಗೆ ಬೆಲೆ ಏರಿಕೆ ಎಂಬ ಗಾಯ ಮಾಡಿದ ಮೋದಿ ಸರ್ಕಾರ, ಆ ಗಾಯದ ಮೇಲೆ ಅದೇ ಬೆಲೆ ಏರಿಕೆಯ ಬರೆಯನ್ನು ಎಳೆಯುತ್ತಿದೆ. ಕೆಲ ದಿನಗಳ ಹಿಂದೆ ದೇಶದಲ್ಲಿ ಕಚ್ಚಾ ತೈಲದ ಸಂಗ್ರಹ ಸಾಕಷ್ಟಿದೆ ಎಂದಿದ್ದ ಕೇಂದ್ರ ಸರ್ಕಾರ, ಈಗ ಇಂಧನ ತೈಲಗಳ ಬಳಕೆ ಕಡಿಮೆ ಮಾಡಿ ಎನ್ನುತ್ತಿದೆ. ದಿನಕ್ಕೊಮ್ಮೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಕಳೆದ 13 ವರ್ಷಗಳಲ್ಲಿ ಭಾರತಕ್ಕೆ ಮತ್ತು ಭಾರತೀಯರಿಗೆ ಒದಗಿದ ಮೋದಿ ಆಳ್ವಿಕೆಯ ದುರ್ದಿನಗಳಂತಹ ಪರಿಸ್ಥಿತಿಯನ್ನು ಈ ದೇಶ ಹಿಂದೆಂದೂ ಕಂಡಿರಲಿಲ್ಲ. ಈಗಾಗಲೇ ಸಂಕಷ್ಟದಲ್ಲಿರುವ ಜನತೆಗೆ ಬೆಲೆ ಏರಿಕೆ ಎಂಬ ಬರೆಯನ್ನು ಮತ್ತೊಮ್ಮೆ ಎಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿಯವರು ಕೇವಲ ಸ್ಲೋಗನ್ ಸರ್ಕಾರ ನಡೆಸಿದ್ದಾರೆಯೇ ಹೊರತು ಜನಪರ ಸರ್ಕಾರ ನಡೆಸಲು ಸಾಧ್ಯವಾಗಿಲ್ಲ, ಅಚ್ಚೆ ದಿನ್, ವಿಶ್ವಗುರು, ಆತ್ಮ ನಿರ್ಭರ ಎಂಬ ಸ್ಲೋಗನ್ ಗಳು ವಾಸ್ತವವನ್ನಾಗಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಚುನಾವಣೆ ಸಮಯದಲ್ಲಿ “ವಾರ್ ರುಕ್ವಾ ದಿಯಾ” ಎಂಬ ಜಾಹಿರಾತು ನೀಡಿದ ಮೋದಿಯವರಿಗೆ ಮಧ್ಯಪ್ರಾಚ್ಯದ ಬಿಕ್ಕಟ್ಟಿನ ನಡುವೆ ಭಾರತದ ಹಿತ ಕಾಯ್ದುಕೊಳ್ಳುವ ಶಕ್ತಿ ಇಲ್ಲದಾಗಿದೆ. ಮೋದಿಯವರು ವಿಶ್ವಗುರು ಆಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅವರ ಹೈಕಮಾಂಡ್ ಮೋಹನ್ ಭಾಗವತ್ ಅವರೇ ಹೇಳಿದ್ದಾರೆ ಎಂದು ಕುಟುಕಿದ್ದಾರೆ.

“ವಿಶ್ವಗುರು”ವಾಗಲು ಸಾಧ್ಯವಾಗದ ಪ್ರಧಾನಿ ಈಗ ದೇಶವಾಸಿಗಳಿಗೆ ಆತ್ಮನಿರ್ಭರ ಬದುಕು ನಡೆಸಿ ಎಂಬ ಸಲಹೆ ನೀಡುತ್ತಿದ್ದಾರೆ! ದೇಶದಲ್ಲಿ ಕ್ರೈಸಿಸ್ ಇರುವುದು ಸಮರ್ಥ ನಾಯಕತ್ವದ್ದೇ ಹೊರತು ಇಂಧನ ತೈಲದ್ದಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರದ ಬೆಲೆ ಏರಿಕೆಯ ಬಗ್ಗೆ ತುಟಿ ಬಿಚ್ಚದೇ ರಾಜ್ಯ ಸರ್ಕಾರಕ್ಕೆ ಸೆಸ್ ಕಡಿಮೆ ಮಾಡಿ ಎಂಬ ಬಿಟ್ಟಿ ಉಪದೇಶ ನೀಡುವ ಬಿಜೆಪಿ ನಾಯಕರು ಉತ್ತರಿಸಲಿ, ಬಿಜೆಪಿ ಆಡಳಿತದ ಯಾವ ರಾಜ್ಯದಲ್ಲಿ ಸೆಸ್ ಕಡಿಮೆ ಮಾಡಲಾಗಿದೆ? ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ತಾನದಂತಹ ಬಿಜೆಪಿ ಆಳ್ವಿಕೆಯ ರಾಜ್ಯಗಳಿಗೆ ರಾಷ್ಟ್ರ ಹಿತ ಮುಖ್ಯವಾಗಿಲ್ಲವೇ? ದೇಶದ ಹಿತ ಕಾಯುವ ಕೆಲಸ ಕೇವಲ ಕರ್ನಾಟಕದ ಜವಾಬ್ದಾರಿಯೇ? ಎಂದು ಪ್ರಶ್ನಿಸಿದ್ದಾರೆ.

ತೆರಿಗೆ ಪಾವತಿಯಲ್ಲಿ, ಐಟಿ,ಬಿಟಿ ರಫ್ತಿನಲ್ಲಿ, GST ಸಂಗ್ರಹದಲ್ಲಿ ಸೇರಿದಂತೆ ಹಲವು ವಿಷಯಗಳಲ್ಲಿ ದೇಶಕ್ಕೆ ಕೊಡುಗೆ ನೀಡುವುದರಲ್ಲಿ ಕರ್ನಾಟಕವೇ ಮುಂಚೂಣಿ ರಾಜ್ಯವಾಗಿದೆ. ದೇಶ ಕಟ್ಟುವಲ್ಲಿ ಕನ್ನಡಿಗರ ಕೊಡುಗೆ ಈಗಾಗಲೇ ಸಾಕಷ್ಟಿದೆ, ಇನ್ನೂ ಸಹ ಕನ್ನಡಿಗರೇ ಕೇಂದ್ರ ಸರ್ಕಾರದ ವೈಫಲ್ಯದ ಹೊರೆ ಹೊರಬೇಕೇ? ಎಂದು ಪ್ರಿಯಾಂಕ್ ಖರ್ಗೆ ಎಕ್ಸ್ ಪೋಸ್ಟ್ ನಲ್ಲಿ ಕೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles