SUDDIKSHANA KANNADA NEWS/ DAVANAGERE/ DATE:12-02-2024
ದಾವಣಗೆರೆ: ನಗರದ ಹದಡಿ ರಸ್ತೆಯಲ್ಲಿರುವ ದಾವಣಗೆರೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘಕ್ಕೆ ಮೂರು ಅವಧಿಗೆ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಮಾರ್ಚ್ 15ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ವೈ ಕುಂಬಳೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೂ ಚುನಾವಣೆ ಮತದಾನ ಜರುಗಲಿದೆ. ಜಿಲ್ಲೆಯಾದ್ಯಂತ ಸುಮಾರು 4800 ಜನರು ಅಜೀವ ಸದಸ್ಯರಿದ್ದು ಸಂಘದ ಸದಸ್ಯತ್ವ ಗುರುತಿನ ಚೀಟಿ ಕಡ್ಡಾಯ ಇರುವವರು ಫೆಬ್ರವರಿ 20 ರೊಳಗಾಗಿ ಗುರುತಿನ ಚೀಟಿ ಪಡೆದುಕೊಂಡು ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇದೆ ಎಂದರು.
21 ನಿರ್ದೇಶಕರ ಆಡಳಿತ ಮಂಡಳಿಯ ಸದಸ್ಯರುಗಳ ಆಯ್ಕೆಗಾಗಿ ಇದೇ ಫೆಬ್ರವರಿ 22 ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ಕೊಡಲಾಗಿದ್ದು, ಮಾ.1ರವರೆಗೂ ನಾಮಪತ್ರ ಸಲ್ಲಿಸಬಹುದು. ಮಾ.2 ನಾಮಪತ್ರ ಪರಿಶೀಲನೆ, ಮಾ.3 ನಾಮಪತ್ರ ಹಿಂಪಡೆಯಲು ಕೊನೆ ದಿನ, ಅಂದೇ ಸ್ಪರ್ಧೆಯಲ್ಲಿ ಇರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ. ಮಾ 4ಕ್ಕೆ ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆ ಮಾಡಿ ಮಾ. 5ಕ್ಕೆ ಕಣದಲ್ಲಿ ಇರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಮಾರ್ಚ್ ತಿಂಗಳ15 ರಂದು ಮತದಾನ ನಡೆದು ಅಂದೇ ಎಣಿಕೆ ಕಾರ್ಯ ನಡೆಯಲಿದೆ ಎಂದು ವಿರುಪಾಕ್ಷಪ್ಪ ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಹೆಚ್. ಪ್ರಕಾಶ್ ಮಳಲ್ಕೆರೆ, ನಿರ್ದೇಶಕರಾದ ಎಸ್. ಎಸ್. ಗಿರೀಶ್, ಬಿ. ಲಿಂಗರಾಜ್, ಮುದಹದಡಿ ದಿಳ್ಳೆಪ್ಪ, ಸಿದ್ಧಪ್ಪ ಅಡಣಿ, ಚಿಕ್ಕಣ್ಣ ಜಡಗನಹಳ್ಳಿ, ಶಶಿಧರ್ ಹೆಚ್ ವೈ , ಪುರಂದರ್ ಲೋಕಿಕೆರೆ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.