ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

EXCLUSIVE: ಯಡಿಯೂರಪ್ಪ ಭೇಟಿ ಮಾಡಿದ್ಯಾಕೆ ದಾವಣಗೆರೆ ಬಿಜೆಪಿ ನಾಯಕರು: ಏನೆಲ್ಲಾ ಚರ್ಚೆಯಾಯ್ತು ಗೊತ್ತಾ…? ಟಿಕೆಟ್ ವಿಚಾರವಾಗಿ ಬಿಎಸ್ ವೈ ಏನ್ ಹೇಳಿದ್ರು…?

On: February 28, 2024 11:31 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:29-02-2024

ದಾವಣಗೆರೆ: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಟಿಕೆಟ್ ಘೋಷಿಸಲಿದೆ. ದಾವಣಗೆರೆಯಲ್ಲಿಯೂ ಈ ಬಾರಿ ಹೊಸ ಮುಖಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇದೆ. ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಈಗ ನಾನೂ ಆಕಾಂಕ್ಷಿ ಎಂದಿದ್ದಾರೆ. ಜೊತೆಗೆ ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್, ಎ. ಕೆ. ಫೌಂಡೇಶನ್ ಅಧ್ಯಕ್ಷ ಕೆ. ಬಿ. ಕೊಟ್ರೇಶ್ ಅವರೂ ಸಹ ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಬಹಿರಂಗವಾಗಿ ಘೋಷಿಸಿದ್ದಾರೆ. ಹಾಗಾಗಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಗರಿಗೆದರಿದೆ.

ಸ್ಥಳೀಯರಿಗೆ ಲೋಕಸಭಾ ಟಿಕೆಟ್ ನೀಡಬೇಕು. ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ಅವರ ಕುಟುಂಬಕ್ಕೆ ಈಗಾಗಲೇ ಏಳು ಬಾರಿ ಟಿಕೆಟ್ ನೀಡಲಾಗಿದೆ. ಕುಟುಂಬ ರಾಜಕಾರಣಕ್ಕೆ ಒತ್ತು ನೀಡುವುದು ಬೇಡ, ಸ್ಥಳೀಯರೊಬ್ಬರಿಗೆ ಟಿಕೆಟ್ ನೀಡುವಂತೆ ಬಹಿರಂಗವಾಗಿಯೇ ರೇಣುಕಾಚಾರ್ಯ ಒತ್ತಾಯ ಮಾಡಿದ್ದರು. ಈಗಲೂ ನಾನು ಆಕಾಂಕ್ಷಿ ಎಂದು ಹೋದ ಕಡೆ ಬಂದ ಕಡೆ ಹೇಳತೊಡಗಿದ್ದಾರೆ. ಸದ್ಯಕ್ಕೆ ತಣ್ಣಗಾಗಿರುವ ರೇಣುಕಾಚಾರ್ಯ, ಪಕ್ಷದ ವೇದಿಕೆಯಲ್ಲಿ, ನಾಲ್ಕು ಗೋಡೆಗಳ ಮಧ್ಯೆ ಮಾತನಾಡುವುದಾಗಿ ಹೇಳುತ್ತಿದ್ದಾರೆ.

ಈ ಬೆಳವಣಿಗೆ ನಡುವೆ ಬೆಂಗಳೂರಿನ ದವಳಗಿರಿ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ದಾವಣಗೆರೆ ಜಿಲ್ಲೆಯ ಬಿಜೆಪಿ ನಾಯಕರು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ದಾವಣಗೆರೆ ಜಿಲ್ಲೆಯ ಮುಖಂಡರಾದ ಜಗಳೂರಿನ ಮಾಜಿ ಶಾಸಕ ಗುರುಸಿದ್ದನಗೌಡ, ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ, ಚನ್ನಗಿರಿ ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ರವಿಕುಮಾರ್, ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಎಂ. ನಾಗಪ್ಪ, ಮರಿಸ್ವಾಮಿ ಅವರು ಭೇಟಿ ಮಾಡಿದರು. ಈ ವೇಳೆ ಯಡಿಯೂರಪ್ಪ ಅವರಿಗೆ ಜನುಮದಿನದ ಶುಭ ಕೋರಿದರು.

ಶುಭ ಕೋರಲು ಬೆಂಗಳೂರಿಗೆ ತೆರಳಿದ್ದ ಈ ನಿಯೋಗವು ಈ ಬಾರಿ ಸ್ಥಳೀಯರಿಗೆ ಲೋಕಸಭೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದೆ. ಟಿಕೆಟ್ ನೀಡುವುದಾದರೆ ಸರ್ವೆ ನಡೆಸಿ, ಪಾರದರ್ಶಕವಾಗಿ ನಡೆಸಿ. ಯಾರ ಪರವಾಗಿ ಬರುತ್ತದೆಯೋ ಅವರಿಗೆ ಟಿಕೆಟ್ ನೀಡಿ. ನಾವು ದುಡಿಯುತ್ತೇವೆ. ಸಿದ್ದೇಶ್ವರ ಅವರಿಗೆ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ಈಗಾಗಲೇ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರ ತಂದೆ ದಿವಂಗತ ಮಲ್ಲಿಕಾರ್ಜುನಪ್ಪರು ಎಂಪಿ ಆಗಿದ್ದವರು. ಕುಟುಂಬ ರಾಜಕಾರಣಕ್ಕೆ ಒತ್ತು ನೀಡುವುದರ ಬದಲು ಹೊಸಬರಿಗೆ ಅವಕಾಶ ನೀಡಿ. ನಾವೆಲ್ಲರೂ ಕಷ್ಟಪಟ್ಟು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಯಡಿಯೂರಪ್ಪರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪರ ಆಪ್ತ ವಲಯದಲ್ಲಿ ಸಿದ್ದೇಶ್ವರ ಅವರು ಗುರುತಿಸಿಕೊಂಡಿದ್ದು, ದಾವಣಗೆರೆಗೆ ಬಂದಾಗಲೂ ಯಡಿಯೂರಪ್ಪ ಅವರು, ಸಿದ್ದೇಶ್ವರ ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ. ಅವರ ಶಕ್ತಿ ದಾವಣಗೆರೆಗೆ ಮಾತ್ರವಲ್ಲ, ರಾಜ್ಯಕ್ಕೆ ಗೊತ್ತು ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ಮಾತ್ರವಲ್ಲ, ಯಾರಿಗೆ ಟಿಕೆಟ್ ನೀಡಿದರೂ ಲೋಕಸಭಾ ಸದಸ್ಯರನ್ನಾಗಿ ಆರಿಸಿ ಕಳುಹಿಸಬೇಕು ಎಂದು ಕರೆ ಕೊಟ್ಟಿದ್ದರು. ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಕಷ್ಟವಾಗಬಹುದು. ಹೈಕಮಾಂಡ್ ಗಮನಕ್ಕೆ ತನ್ನಿ ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಿದ್ದೇಶ್ವರ ಅವರೂ ಸಹ ನಾನು ಟಿಕೆಟ್ ಆಕಾಂಕ್ಷಿ. ಟಿಕೆಟ್ ಘೋಷಿಸುವವರೆಗೂ ನಾನೇ ಅಭ್ಯರ್ಥಿ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ತನು, ಮನ, ಧನದಿಂದ ಕೆಲಸ ಮಾಡುತ್ತೇನೆ ಎಂದು ಈಗಾಗಲೇ ಹೇಳಿದ್ದಾರೆ. ಮತ್ತೊಂದು ಬೆಳವಣಿಗೆಯೊಂದರಲ್ಲಿ ಒಂದು ವೇಳೆ ನನಗೆ ಟಿಕೆಟ್ ನೀಡದಿದ್ದರೆ ಪುತ್ರ ಅನಿತ್ ಇಲ್ಲವೇ ಸಹೋದರ ಲಿಂಗರಾಜ್ ಅವರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ದೆಹಲಿಯ ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.

ದಾವಣಗೆರೆ ಜಿಲ್ಲೆಯಾದಾಗಿನಿಂದ ಇಲ್ಲಿಯವರೆಗೆ ಬಿಜೆಪಿ ಸೋತಿಲ್ಲ. ಹಾಗಾಗಿ ಮಧ್ಯಕರ್ನಾಟಕದ ಹೆಬ್ಬಾಗಿಲು ಕಮಲ ಪಡೆ ಭದ್ರಕೋಟೆ ಎನಿಸಿಕೊಂಡಿದೆ. ಈ ಬಾರಿ ಉಳಿಸಿಕೊಳ್ಳಲೇಬೇಕೆಂಬ ಹಠ ರಾಜ್ಯ ಘಟಕದ ನಾಯಕರು ಹಾಗೂ ಹೈಕಮಾಂಡ್ ಹೊಂದಿದೆ. ಹಾಗಾಗಿ, ಈ ಬಾರಿ ಗೊಂದಲವಾಗಿರುವುದು ತಲೆನೋವು ತಂದಿದೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸುತ್ತೇವೆ ಎಂದು ಎಲ್ಲರೂ ಹೇಳುತ್ತಲೇ ಇದ್ದಾರೆ. ಈ ನಡುವೆ ರೇಣುಕಾಚಾರ್ಯ ಅವರು ಬಿಜೆಪಿಯು ವ್ಯಕ್ತಿ ನಿಷ್ಠೆ ಪಕ್ಷವಲ್ಲ, ಕಾರ್ಯಕರ್ತರ
ಪಕ್ಷ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ರೇಣುಕಾಚಾರ್ಯ ಜನುಮದಿನ ಹಾಗೂ ಯಡಿಯೂರಪ್ಪರ ಜನುಮ ದಿನದ ನೆಪದಲ್ಲಿ ಮತ್ತೆ ಟಿಕೆಟ್ ವಿಚಾರ ಮುನ್ನೆಲೆಗೆ ಬಂದಿದೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಸಸ್ಪೆನ್ಸ್ ಆಗಿದೆ.

ನಿಮ್ಮ ಅಭಿಪ್ರಾಯವನ್ನು ದೆಹಲಿಯ ವರಿಷ್ಠರಿಗೆ ತಿಳಿಸೋಣ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸಿ ಎಂದು ಬಿ. ಎಸ್. ಯಡಿಯೂರಪ್ಪ ಅವರು ಬಿಜೆಪಿ ನಾಯಕರಿಗೆ ಹೇಳಿ ಕಳುಹಿಸಿದರು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment