SUDDIKSHANA KANNADA NEWS/ DAVANAGERE/ DATE:26-01-2025
ದಾವಣಗೆರೆ: ಮಹಾನಗರಪಾಲಿಕೆಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಮಂಜೂರಾದ ರೂ. 200 ಕೋಟಿ ಅನುದಾನಕ್ಕೆ ರೂಪಿಸಲಾದ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಟೆಂಡರ್ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 76 ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು ನಗರದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣ ಮಾಡಲು ಸ್ವಚ್ಛ ಭಾರತ ಮಿಷನ್ 2.0 ಯೋಜನೆಯಡಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಟೆಂಡರ್ ಕರೆಯಲಾಗಿದ ಎಂದು ಹೇಳಿದರು.
ಜನರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ರೂ. 35 ಕೋಟಿ ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಚಿಕಿತ್ಸಾ ಘಟಕವನ್ನು ಹಾಗೂ ರೂ. 13 ಕೋಟಿ ವೆಚ್ಚದಲ್ಲಿ ಅಪಘಾತ ಮತ್ತು ಟ್ರಾಮಾ ಕೇರ್ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.
ಈ ಬಾರಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯ ತುಂಬಿರುವುದರಿಂದ ರೈತಾಪಿ ವರ್ಗದಲ್ಲಿ ಹರ್ಷ ಮನೆಮಾಡಿದೆ. ರೈತರು ಬೇಸಿಗೆ ಬೆಳೆಯ ಸಿದ್ಧತೆಯಲ್ಲಿ
ತೊಡಗಿದ್ದಾರೆ. ಇದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಇಂದು ನಾವು 76ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಲು ಶ್ರಮಿಸಿದ ಎಲ್ಲಾ ಮಹನೀಯರನ್ನು
ಸ್ಮರಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಭಾರತವು ವಿವಿಧ ಧರ್ಮ, ಜಾತಿ, ಭಾಷೆ ಮತ್ತು ಸಂಸ್ಕೃತಿ ಹೊಂದಿದ್ದು ಸಂವಿಧಾನದಿಂದಾಗಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದರು.
ಮಹಾತ್ಮಾ ಗಾಂಧೀಜಿಯವರು ಸೇರಿದಂತೆ ಇನ್ನೂ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ 1947 ರ ಆಗಸ್ಟ್ 15 ರಂದು ನಮ್ಮ ದೇಶ ಸ್ವಾತಂತ್ರ್ಯವಾಯಿತು. ನಂತರ ಡಾ.ಬಿ.ಆರ್.ಅಂಬೇಡ್ಕರ್‍ರವರ ಅವಿರತ ಪರಿಶ್ರಮದ ಫಲವಾಗಿ ರಾಷ್ಟ್ರದ ಜನತೆಗೆ ಒಪ್ಪಿಗೆ ಆಗುವಂತಹ ಸಂವಿಧಾನವನ್ನು ರಚಿಸಿಕೊಳ್ಳುವ ಮೂಲಕ 1949 ರ ನವೆಂಬರ್26 ರಂದು ಸಂವಿಧಾನವನ್ನು ಅಂಗೀಕರಿಸಿ, 1950 ರ ಜನವರಿ 26 ರಂದು ಜಾರಿಗೆ ತರಲಾಯಿತು. ಈ ದಿನವನ್ನು ನಾವು ಪ್ರತಿ ವರ್ಷ ಗಣರಾಜ್ಯೋತ್ಸವ ದಿನವನ್ನಾಗಿ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ. ಸಂವಿಧಾನ ಜಾರಿಯಾದ ಈ ದಿನಕ್ಕೆ ಅಷ್ಟೊಂದು ಮಹತ್ವ ಏಕೆಂದರೆ, ದೇಶದ ಮೂಲಭೂತ ಕಾನೂನಾದ ಸಂವಿಧಾನದ ಮೂಲಕ ಪ್ರತಿ ಪ್ರಜೆಗೂ ಸಮಾನತೆ, ಸ್ವಾತಂತ್ರ್ಯ,ಶೋಷಣೆಯ ವಿರುದ್ಧದ, ಧಾರ್ಮಿಕ ಸ್ವಾತಂತ್ರ್ಯದ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳನ್ನು ಪ್ರತಿ ಪ್ರಜೆಗೂ ನೀಡಲಾಗಿದೆ ಎಂದು ಹೇಳಿದರು.
ಸಂವಿಧಾನವೇ’ ನಮ್ಮ ರಾಷ್ಟ್ರದ ಸರ್ವೋಚ್ಚ ಕಾನೂನು, ಅದಕ್ಕೆ ಎಲ್ಲರೂ ಗೌರವಿಸಬೇಕು ಮತ್ತು ಅದರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರ ಸದಾಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.