
ನವದೆಹಲಿ: ಬ್ಯಾಂಕ್ ನೀಡಿದ್ದ 15 ವರ್ಷಗಳ ಅವಧಿಯ 25 ಲಕ್ಷ ರೂ. ಶಿಕ್ಷಣ ಸಾಲವನ್ನು ಕೇವಲ 5 ವರ್ಷಗಳಲ್ಲಿ ಸಂಪೂರ್ಣವಾಗಿ ತೀರಿಸುವ ಮೂಲಕ ಮೈಕ್ರೋಸಾಫ್ಟ್ ಉದ್ಯೋಗಿ, ಮಹಿಳೆ ಡಿಂಪಲ್ ಪೋರ್ವಾಲ್ ಅವರು ಅನೇಕರಿಗೆ ಮಾದರಿಯಾಗಿದ್ದಾರೆ. ತಮ್ಮ ಅಚ್ಚುಕಟ್ಟಾದ ಹಣಕಾಸು ಶಿಸ್ತು ಮತ್ತು ಮುಂಗಡ ಪಾವತಿ ತಂತ್ರಗಳಿಂದಾಗಿ ಅವರು ಬರೋಬ್ಬರಿ 10 ಲಕ್ಷ ರೂ.ಗಳಷ್ಟು ಬಡ್ಡಿ ಹಣವನ್ನು ಉಳಿತಾಯ ಮಾಡಿದ್ದಾರೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
https://www.instagram.com/reel/DfSC-WMS2Cv/?utm_source=ig_embed&ig_rid=ACXSx1TxO05aQHNQGRugfML
ಐಐಎಂ ಕೋಝಿಕ್ಕೋಡ್ ಪದವೀಧರೆಯಾಗಿರುವ ಡಿಂಪಲ್ ಪೋರ್ವಾಲ್, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಸಾಲ ತೀರಿಸಿದ ಹಾದಿಯನ್ನು ವಿವರಿಸಿದ್ದಾರೆ. ಒಂಟಿ ತಾಯಿಯ ಏಕೈಕ ಪುತ್ರಿಯಾಗಿರುವ ಇವರು, ಎಂಬಿಎ ವ್ಯಾಸಂಗಕ್ಕಾಗಿ ಉತ್ತಮ ವೇತನದ ಉದ್ಯೋಗವನ್ನು ಬಿಡಬೇಕಾಯಿತು. ಸಾಲ ಮಂಜೂರಾದ ದಿನ ಕುಟುಂಬದ ಆರ್ಥಿಕ ಜವಾಬ್ದಾರಿ ನೆನೆದು ನಿದ್ದೆಯೇ ಬರಲಿಲ್ಲ ಎಂದು ಅವರು ಸ್ಮರಿಸಿದ್ದಾರೆ. ಆದರೆ, ಮೊದಲ ಸಂಬಳ ಕೈಸೇರುವ ಮೊದಲೇ ಅವರು ಸಾಲ ತೀರಿಸುವ ಸ್ಪಷ್ಟ ಯೋಜನೆಯನ್ನು ರೂಪಿಸಿಕೊಂಡಿದ್ದರು.
ಪ್ರತಿ ವರ್ಷ ಹೆಚ್ಚುವರಿ ಇಎಂಐ (EMI): ತಿಂಗಳಿಗೆ ಸುಮಾರು 22,000 ರೂ. ಇಎಂಐ ಕಟ್ಟುವುದರ ಜೊತೆಗೆ, ಪ್ರತಿ ಮೂರು ತಿಂಗಳಿಗೊಮ್ಮೆ (ವರ್ಷಕ್ಕೆ 4 ಹೆಚ್ಚುವರಿ ಇಎಂಐ) ಹೆಚ್ಚುವರಿ ಹಣವನ್ನು ಪಾವತಿಸಿದರು.
ಬೋನಸ್ ಮತ್ತು ಷೇರುಗಳ ಬಳಕೆ: ಕಂಪನಿಯಿಂದ ಸಿಗುತ್ತಿದ್ದ ವಾರ್ಷಿಕ ಬೋನಸ್ ಹಾಗೂ ಮೈಕ್ರೋಸಾಫ್ಟ್ ಸ್ಟಾಕ್ ಅವಾರ್ಡ್‌ಗಳ ಬಹುಪಾಲು ಹಣವನ್ನು ನೇರವಾಗಿ ಸಾಲದ ಅಸಲು ಕಡಿಮೆ ಮಾಡಲು ಬಳಸಿದರು.
ವೇತನ ಹೆಚ್ಚಳದೊಂದಿಗೆ ಇಎಂಐ ಏರಿಕೆ: ಪ್ರತಿ ಬಾರಿ ತಮ್ಮ ಸಂಬಳ ಶೇ. 10ರಷ್ಟು ಹೆಚ್ಚಾದಾಗ, ತಮ್ಮ ಇಎಂಐ ಮೊತ್ತವನ್ನೂ ಶೇ. 10ರಷ್ಟು ಹೆಚ್ಚಿಸಿಕೊಂಡರು. ಜೊತೆಗೆ ಒಂದೇ ಒಂದು ಕಂತನ್ನೂ ತಪ್ಪಿಸದೆ ಉತ್ತಮ ಕ್ರೆಡಿಟ್ ಸ್ಕೋರ್ ಕಾಯ್ದುಕೊಂಡರು.
ಮೂಲ ಯೋಜನೆಯ ಪ್ರಕಾರ 15 ವರ್ಷಗಳಲ್ಲಿ ಸುಮಾರು 15 ಲಕ್ಷ ರೂ. ಬಡ್ಡಿ ಕಟ್ಟಬೇಕಾಗಿತ್ತು. ಆದರೆ ಈ ಶಿಸ್ತುಬದ್ಧ ಕ್ರಮಗಳಿಂದ ಕೇವಲ 4.6 ಲಕ್ಷ ರೂ. ಬಡ್ಡಿ ಪಾವತಿಸಿ, 5 ವರ್ಷಗಳಲ್ಲೇ ಸಂಪೂರ್ಣ ಸಾಲದಿಂದ ಮುಕ್ತರಾಗಿದ್ದಾರೆ. ಇವರ ಈ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.




