
ದಾವಣಗೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಆರ್.ಮೆಹರೋಜ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಲೋಪದೋಷಗಳ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಪಾಧ್ಯಕ್ಷರು, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೆಎಸ್ ಆರ್ ಟಿಸಿ ಡಿಸಿಗೆ ನೋಟಿಸ್, ಸಾರಿಗೆ ಅಧಿಕಾರಿಗಳಿಗೆ ತಾಕೀತು: ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 17.48 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ₹523.28 ಕೋಟಿ ಮೌಲ್ಯದ ಟಿಕೆಟ್ ವಿತರಿಸಲಾಗಿದೆ. ಆದರೆ, ಹೊನ್ನಾಳಿ, ಚನ್ನಗಿರಿ ಮತ್ತು ನ್ಯಾಮತಿ ತಾಲೂಕುಗಳ ಗ್ರಾಮೀಣ ಭಾಗಗಳಿಗೆ ಶಾಲಾ-ಕಾಲೇಜು ಮತ್ತು ಕಚೇರಿ ಸಮಯದಲ್ಲಿ ಬಸ್ಗಳ ತೀವ್ರ ಕೊರತೆಯಿರುವ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಗೆ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಗೈರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮೆಹರೋಜ್ ಖಾನ್, ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲು ಸೂಚಿಸಿದರು. ಅಲ್ಲದೆ, ಒಂದು ವಾರದೊಳಗೆ ಬಸ್ ಸಂಚಾರದ ಸಮಸ್ಯೆ ಬಗೆಹರಿಸುವಂತೆ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಪ್ರಗತಿ:ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಶೇ. 97.24 ರಷ್ಟು ಸಾಧನೆಯಾಗಿದ್ದು, 36 ಕಂತುಗಳಲ್ಲಿ ಒಟ್ಟು ₹2,545.31 ಕೋಟಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದ ₹3.65 ಕೋಟಿ ಹಣದಲ್ಲಿ ₹98.79 ಲಕ್ಷ ಹಣವನ್ನು ಬ್ಯಾಂಕ್ಗಳ ಮೂಲಕ ಹಿಂಪಡೆಯಲಾಗಿದ್ದು, ಉಳಿದ ಮೊತ್ತವನ್ನು ಶೀಘ್ರ ವಸೂಲಿ ಮಾಡಲು ಲೀಡ್ ಬ್ಯಾಂಕ್ ಅಧಿಕಾರಿಗಳ ಸಭೆ ಕರೆಯುವಂತೆ ಸೂಚಿಸಲಾಯಿತು. ಗೃಹಜ್ಯೋತಿ ಯೋಜನೆಯಲ್ಲಿ ಶೇ. 96.26 ರಷ್ಟು ಪ್ರಗತಿಯಾಗಿದ್ದು, ಬಾಡಿಗೆ ಮನೆ ಬದಲಾವಣೆ ಮತ್ತು ಬೇಸಿಗೆಯ ವಿದ್ಯುತ್ ಬಿಲ್ ವ್ಯತ್ಯಾಸದಿಂದ ಬಾಕಿ ಉಳಿದಿರುವ 12,450 ಫಲಾನುಭವಿಗಳ ಸಮಸ್ಯೆ ಬಗೆಹರಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಯಿತು.
ಯುವನಿಧಿ ಮತ್ತು ಶಿಷ್ಟಾಚಾರ ಪಾಲನೆ:
ಯುವನಿಧಿ ಯೋಜನೆಯಡಿ 15,565 ಪದವೀಧರರು ಹಾಗೂ ಡಿಪ್ಲೊಮಾದಾರರಿಗೆ ₹52.01 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ. ಜನವರಿ ತಿಂಗಳಲ್ಲಿ ವಿಶೇಷ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಮೇಳ ಆಯೋಜಿಸಲು ಸೂಚಿಸಲಾಯಿತು. ಇದೇ ವೇಳೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಶಿಷ್ಟಾಚಾರದಂತೆ ಆಹ್ವಾನಿಸಿ ವೇದಿಕೆಯಲ್ಲಿ ಸೂಕ್ತ ಗೌರವ ನೀಡಬೇಕು ಎಂದು ಮೆಹರೋಜ್ ಖಾನ್ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಸಾಹಿತ್ಯ ಎಂ. ಆಲದಕಟ್ಟಿ, , ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಾಮನೂರು ಟಿ. ಬಸವರಾಜು, ಉಪಾಧ್ಯಕ್ಷರಾದ ರಾಜೇಶ್ವರಿ, ಅನೀಶ್ ಪಾಷ, ಕೆ. ಎನ್. ಮಂಜುನಾಥ, ಮಂಜಾನಾಯ್ಕ ಹಾಗೂ ಸದಸಸಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
- Davangere guarantee meeting
- Davangere Police Annual Sports Meet 2026
- Karnataka Police sports events
- KSRTC DC notice Mehraj Khan
- Shakti scheme bus issues Karnataka
- SP Shekhar HT
- ಎನ್. ಸತೀಶ್ ಕುಮಾರ್
- ಎಸ್.ಪಿ ಶೇಖರ್ ಹೆಚ್.ಟಿ
- ಕೆಎಸ್ಆರ್ಟಿಸಿ ನೋಟಿಸ್
- ದಾವಣಗೆರೆ ಗ್ಯಾರಂಟಿ ಸಭೆ
- ದಾವಣಗೆರೆ ಪೊಲೀಸ್ ಕ್ರೀಡಾಕೂಟ 2026
- ಮೆಹರೋಜ್ ಖಾನ್
- ಶಕ್ತಿ ಯೋಜನೆ ಬಸ್ ಸಮಸ್ಯೆ
- ಶಾಮನೂರು ಟಿ. ಬಸವರಾಜು




