SUDDIKSHANA KANNADA NEWS/ DAVANAGERE/ DATE:18-11-2024
ಬೆಂಗಳೂರು: ನನಗಾಗಲಿ, ಬಸವರಾಜ ಬೊಮ್ಮಾಯಿ ಅವರಿಗಾಗಲಿ ಮುಖ್ಯಮಂತ್ರಿಯಾಗಲಿದ್ದೀರಿ ಎಂದು ಬರೆದಿದ್ದರೆ? ಎಂದು ಸಿಎಂ ಸಿದ್ದರಾಮಯ್ಯರ ಹೇಳುವ ಮೂಲಕ ಕುತೂಹಲ ಕೆರಳಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ್ದ 19ನೇ ವರ್ಷದ “ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ” ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾನತೆಯ ಸಮಾಜ ನಿರ್ಮಾಣವಾಗಲು ಜಾತಿ ವ್ಯವಸ್ಥೆ ಹೋಗಬೇಕು. ಇಂದಿಗೂ ಜಾತಿ ವ್ಯವಸ್ಥೆ ಇದ್ದು, ಇದನ್ನು ಹೋಗಲಾಡಿಸಲು ಮಾನವೀಯತೆಯಿಂದ ಕೂಡಿದ ಸಮಾಜ ಅಗತ್ಯ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದರು.
ಗೊತ್ತಿದ್ದೋ, ಗೊತ್ತಿಲ್ಲದೆಯೋ ಮೌಢ್ಯ, ಕಂದಾಚಾರಗಳನ್ನು ಆಚರಿಸುತ್ತೇವೆ. ಇದನ್ನು ಬಿಟ್ಟಾಗ ಮಾತ್ರ ಬಸವಾದಿ ಶರಣರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.
ಕರ್ಮ ಸಿದ್ಧಾಂತ ಇರಬಾರದು. ಇದನ್ನು ಈಗಲೂ ಬಹಳ ಜನ ಪರಿಪಾಲಿಸುತ್ತಾರೆ. ವಿದ್ಯಾವಂತರೂ ಕೂಡ ಹಣೆಬರಹದಲ್ಲಿ ನಂಬಿಕೆ ಇಡುತ್ತಾರೆ. ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ಸಮಾಜದಿಂದ ಮಾತ್ರ ಇದಕ್ಕೆ ಪರಿಹಾರ ಸಿಗಲಿದೆ. ನನಗಾಗಲಿ, ಬಸವರಾಜ ಬೊಮ್ಮಾಯಿ ಅವರಿಗಾಗಲಿ ಮುಖ್ಯಮಂತ್ರಿಯಾಗಲಿದ್ದೀರಿ ಎಂದು ಬರೆದಿದ್ದರೆ? ಎಂದು ಪ್ರಶ್ನಿಸಿದರು.
ಬಸವಣ್ಣ ಅವರ ವಿಚಾರ, ತತ್ವ ಆದರ್ಶಗಳನ್ನು ನೂರಕ್ಕೆ ನೂರು ಪಾಲನೆ ಮಾಡಲಾಗದಿದ್ದರೂ, ಪಾಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ಶರಣ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವವರನ್ನು ಪ್ರೋತ್ಸಾಹಿಸುವುದು ಬಹಳ ಮುಖ್ಯ. ಬಸವಾದಿ ಶರಣರ ವಿಚಾರಗಳು ಇಡೀ ಜಗತ್ತಿಗೆ ತಲುಪಬೇಕು. ನಮಗೆ ಮಾತ್ರ ಸೀಮಿತವಾಗಿ ತಲುಪಿದರೆ ಸಾಲುವುದಿಲ್ಲ. ಬಸವಾದಿ ಶರಣರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವವನ್ನು ಸಲ್ಲಿಸಿದಂತಾಗುತ್ತದೆ. ಸಮಾಜಕ್ಕೆ ಬಸವಣ್ಣ ಮತ್ತು ಅವರ ಅನುಯಾಯಿಗಳ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿಗೆ ಬಂದಾಗ ವೈರುಧ್ಯತೆಯಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ ಎಂದರು. ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ಇದೆ. ರಾಜಕೀಯ ಸಮಾನತೆ ಸಿಕ್ಕಿದ್ದರೂ, ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಸಿಕ್ಕಿಲ್ಲ. ಬಸವಾದಿ ಶರಣರು ಇದನ್ನು 850 ವರ್ಷಗಳ ಹಿಂದೆಯೇ ಪ್ರತಿಪಾದಿಸಿದ್ದರು ಎಂದರು.
ಬಸವಾದಿ ಶರಣರು ಹೇಳಿದಂತೆ ಇವನಾರವ ಎಂದು ಎಣಿಸದೆ ಇವ ನಮ್ಮವ ಎಂದು ಎಣಿಸಬೇಕು. ವಚನಗಳನ್ನು ಹೇಳುತ್ತಲೇ ನೀವು ಯಾವ ಜಾತಿ ಎಂದು ಕೇಳುತ್ತವೆ. ಇದನ್ನು ಮೊದಲು ನಾವು ಬಿಡಬೇಕು. ಆರ್ಥಿಕ, ಸಾಮಾಜಿಕ ಅಸಮಾನತೆ ಹೋಗಲಾಡಿಸಲು, ಬಸವಾದಿ ಶರಣರ ಕನಸು ನನಸಾಗಿಸಲು ದುಡಿದರೆ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನಗಳು ಆಗಲಿ. ನಾನು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಯತ್ನವನ್ನು ನಿಜವಾಗಿ ಮಾಡುತ್ತಿದ್ದೇನೆ. ಅಸಮಾನತೆ ಹೋಗಬೇಕಾದರೆ ಬದಲಾವಣೆ ಅಗತ್ಯ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಅಸಮಾನತೆ ಹೋಗಲು ಸಾಧ್ಯ. ಆ ಶಕ್ತಿಯನ್ನು ಜನರಲ್ಲಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಅಭಿಪ್ರಾಯಪಟ್ಟರು.