SUDDIKSHANA KANNADA NEWS/ DAVANAGERE/ DATE:04-02-2025
ದಾವಣಗೆರೆ: ಮೆಡಿಕಲ್ ಶಾಪ್ ಮಾಲೀಕ ಅಮ್ಜದ್ ಬಾಲಕಿಯರು, ವಿದ್ಯಾರ್ಥಿನಿಯರು, ಯುವತಿಯರು ಹಾಗೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ಮುಂದುವರಿದಿದೆ.
ಈ ನಡುವೆ ಪೊಲೀಸರಿಗೆ ಸವಾಲೂ ಸಹ ಎದುರಾಗಿದೆ. ಅಮ್ಜದ್ ಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಕರೆ ನೀಡಿದ್ದ ಚನ್ನಗಿರಿ ಪಟ್ಟಣ ಯಶಸ್ವಿಯೂ ಆಗಿದೆ. ಆಕ್ರೋಶವೂ ಭುಗಿಲೆದ್ದಿದೆ. ಕಾಮಾಂಧನಿಗೆ ಕಠಿಣ ಶಿಕ್ಷೆಯಾಗಬೇಕು. ಯಾವುದೇ ಕಾರಣಕ್ಕೂ ಹೊರಗಡೆ ಬರಬಾರದು ಎಂಬ ಒಕ್ಕೊರಲ ಒತ್ತಾಯ ಬಲವಾಗಿದೆ.
ಸಿಇಎನ್ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ನೇತೃತ್ವದ ಪೊಲೀಸ್ ತಂಡವು ತನಿಖೆ ಬಿರುಸುಗೊಳಿಸಿದೆ. ಆದ್ರೆ, ಪೊಲೀಸರಿಗೆ ಇದುವರೆಗೆ ಯಾರೂ ದೂರು ಕೊಡಲು ಬಾರದಿರುವುದು ಸವಾಲು ತಂದಿದೆ.
ಬಾಲಕಿಯರು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಚಿತ್ರೀಕರಣ ಮಾಡಿ ವೈರಲ್ ಆದ ಕೇಸ್ ನಲ್ಲಿ ಬಂಧಿತನಾಗಿರುವ ಅಮ್ಜದ್ ವಿರುದ್ಧ ದೂರು ನೀಡಲು ಇದುವರೆಗೆ ಯಾರೂ ಬಂದಿಲ್ಲ. ಇದು ತ್ವರಿತಗತಿಯ ತನಿಖೆಗೆ ಸ್ವಲ್ಪ ಹಿನ್ನೆಡೆ ತಂದಿದೆ.
ಸುಮಾರು 60ಕ್ಕೂ ಹೆಚ್ಚು ವಿಡಿಯೋಗಳು ಪತ್ತೆಯಾಗಿದ್ದು, ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ವಿಡಿಯೋದಲ್ಲಿರುವ ಸಂತ್ರಸ್ತೆಯರ ಗುರುತು ಪತ್ತೆ ಹಚ್ಚಿ ದೂರು ನೀಡುವಂತೆ ಮನವೊಲಿಸುವ ಕುರಿತಂತೆಯೂ ಒಂದು ತಂಡ ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ದೂರು ನೀಡಿದರೆ ಸಂತ್ರಸ್ತರ ಹೆಸರು, ಮಾಹಿತಿ, ಸ್ಥಳ, ವಿಳಾಸ ಸೇರಿದಂತೆ ಎಲ್ಲಾ ವಿಚಾರಗಳನ್ನು ಗೌಪ್ಯವಾಗಿಡಲಾಗುವುದು. ಸಂತ್ರಸ್ತರು ಮುಂದೆ ಬಂದು ದೂರು ಕೊಡಿ ಎಂದು ಮನವಿ ಮಾಡಲಾಗುತ್ತಿದೆಯಾದರೂ ಯಾರೂ ಬಾರದಿರುವುದು ಪೊಲೀಸರಿಗೆ ತಲೆನೋವು ತಂದಿದೆ.
ವಿಡಿಯೋ ನೈಜತ್ ತಿಳಿದುಕೊಳ್ಳುವ ಪ್ರಯತ್ನವೂ ಮುಂದುವರಿದಿದೆ. ಖಚಿತತೆ ಖಚಿತಪಡಿಸಿಕೊಳ್ಳಲು ವಿಡಿಯೋಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆಯೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಈ ರೀತಿಯಾಗಿ ಈ ಹಿಂದೆಯೂ ಆರೋಪಿ ಮಾಡಿರುವ ಸಾಧ್ಯತೆ ಇದ್ದು, ಈ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೆಡಿಕಲ್ ಶಾಪ್ ಸುತ್ತಮುತ್ತ ಹಾಗೂ ಮನೆ ಸುತ್ತಮುತ್ತಲಿನ ವಾಸಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಿಇಎನ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆರೋಪಿಯ ವಿಚಾರಣೆ ತೀವ್ರಗೊಳಿಸಿದ್ದಾರೆ.