SUDDIKSHANA KANNADA NEWS/ DAVANAGERE/ DATE:04-03-2024
ದಾವಣಗೆರೆ: ಮುಂಬರುವ ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವಾಗ ಹೊಸಮುಖಗಳಿಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದೇವೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಎಂ. ಪಿ. ರೇಣುಕಾಚಾರ್ಯ ಮತ್ತೆ ರೆಬೆಲ್ ನುಡಿ ಆಡಿದ್ದಾರೆ. ಜಿ. ಎಂ. ಸಿದ್ದೇಶ್ವರರ ಹೆಸರು ಪ್ರಸ್ತಾಪಿಸದೇ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದೇವೆ. ಹೈಕಮಾಂಡ್ ವರಿಷ್ಠರು ಅಭಿಪ್ರಾಯ ಪರಿಗಣಿಸುತ್ತಾರೆ ಎಂಬ ವಿಶ್ವಾಸ ಇದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ದಾವಣಗೆರೆಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ರಾಜಕೀಯ ಪಕ್ಷ. ನಾವೆಲ್ಲರೂ ಒಮ್ಮತದಿಂದ ತೀರ್ಮಾನ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಜಿಲ್ಲೆಯ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಹೇಳಿದ್ದೇವೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಆರ್ ಎಸ್ ಎಸ್ ನ ಸಂಘಟನೆಯ ಪ್ರಮುಖರು, ದಾವಣಗೆರೆ ಜಿಲ್ಲಾ ಉಸ್ತುವಾರಿ, ಇಲ್ಲಿಗೆ ಬಂದಿರುವ ವೀಕ್ಷಕರಿಗೆ ನಾಲ್ಕು ಗೋಡೆಗಳ ಮಧ್ಯೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ ಎಂದು ಹೇಳಿದರು.
ಕಾರ್ಯಕರ್ತರು, ಮತದಾರರ ಭಾವನೆಗಳನ್ನು ನಾಲ್ಕು ಜನ ಅಭ್ಯರ್ಥಿಗಳಿದ್ದೇವೆ. ಟಿಕೆಟ್ ನೀಡುವಂತೆ ಕೇಳಿದ್ದೇವೆ. ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ಮನೆಯಲ್ಲಿ ಸೇರಿದ್ದರಲ್ಲಿ ತಪ್ಪೇನಿದೆ? ನಾವೇನೂ ಕಾಂಗ್ರೆಸ್ ನವರ ಮನೆಯಲ್ಲಿ ಸೇರಿದ್ದೇವಾ? ರವೀಂದ್ರನಾಥ್ ತುಂಬಾ ಹಿರಿಯರು. ಸೇರಿ ಚರ್ಚೆ ಮಾಡಿದ್ದೇವೆ. ಪಕ್ಷ ಸಂಘಟನೆ, ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಬೇಕು. ನಾವೇನೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಬಂಡಾಯ ಸಭೆ ಅಲ್ಲ. 400 ಸ್ಥಾನ ದೇಶ ಹಾಗೂ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಸಮಾಲೋಚನೆ ನಡೆಸುತ್ತೇವೆ ಎಂದರು.
ಯಾರ ವಿರುದ್ಧವೂ ಮಾಧ್ಯಮದವರ ಮುಂದೆ ಹೇಳುತ್ತೇವೆ. ಕಾರ್ಯಕರ್ತರು, ಮುಖಂಡರು ನನ್ನನ್ನು ಸ್ಪರ್ಧೆ ಮಾಡಿ ಅಂತಾರೆ. ಕಾರ್ಯಕರ್ತರ ಮನದಾಳದ ಮಾತು ಹೇಳಿದ್ದೇವೆ. ರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ್ದೇವೆ, ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ನಾವು ಕೇಳಿದ್ದು ಸತ್ಯ, ಇನ್ನು ಮುಚ್ಚಿಡಲು ಆಗಲ್ಲ. ಪಕ್ಷದ ವರಿಷ್ಠರು ದಾವಣಗೆರೆ ಜಿಲ್ಲೆ ಸಂಘಟನೆ ದೃಷ್ಟಿಯಿಂದ ಅವಕಾಶ ಸಿಗಬಹುದು ಎಂಬ ಆಶಾಭಾವನೆ ನಮ್ಮೆಲ್ಲರಿಗೂ ಇದೆ. ನನ್ನ ಭಾವನೆ ಮತ್ತೊಬ್ಬರ ಭಾವನೆ ಅಲ್ಲ. ಕಾರ್ಯಕರ್ತರ ಭಾವನೆಗಳನ್ನು ತಿಳಿಸಿದ್ದವೆ ಎಂದು ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಈ ವೇಳೆ ಆರೈಕೆ ಆಸ್ಪತ್ರೆ ಮುಖ್ಯಸ್ಥರಾದ ಡಾ. ಟಿ. ಜಿ. ರವಿಕುಮಾರ್, ಮಾಜಿ ಶಾಸಕ ಗುರುಸಿದ್ದನಗೌಡ, ಲೋಕಿಕೆರೆ ನಾಗರಾಜ್ ಮತ್ತಿತರರು ಹಾಜರಿದ್ದರು.