ಬೆಂಗಳೂರು/ಹೊಸದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ಮೆಟ್ರೋ ರೈಲಿನಲ್ಲಿ ನಡೆದ ಒಂದು ಸ್ವಾರಸ್ಯಕರ ಪ್ರಮಾದ ಮತ್ತು ಇಬ್ಬರು ಅಪರಿಚಿತ ಯುವಕರ ಜಾಗರೂಕತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಖ್ಯಾತ ಡ್ರೇಪಿಂಗ್ ಕಲಾವಿದೆ ಡಾಲಿ ಜೈನ್ ಅವರಿಗೆ ಮೆಟ್ರೋ ಪ್ರಯಾಣದ ವೇಳೆ ಎದುರಾದ ಈ ಅನುಭವ ಸದ್ಯ ವೈರಲ್ ಆಗಿದೆ.
ಮೆಟ್ರೋದಲ್ಲಿ ನಡೆದಿದ್ದೇನು?
ಡಾಲಿ ಜೈನ್ ಅವರು ತಮ್ಮ ಪತಿಯೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರು. ಸುದೀರ್ಘ ಪ್ರಯಾಣದ ಆಯಾಸದಿಂದಾಗಿ ಡಾಲಿ ಸೀಟಿನಲ್ಲೇ ನಿದ್ರೆಗೆ ಜಾರಿದ್ದರು. ಪತ್ನಿ ಗಾಢ ನಿದ್ರೆಯಲ್ಲಿದ್ದ ಮುದ್ದಾದ ಕ್ಷಣವನ್ನು ಸೆರೆಹಿಡಿಯಲು ಎದುರಿನ ಸೀಟಿನಲ್ಲಿ ಕುಳಿತಿದ್ದ ಅವರ ಪತಿ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದರು.
ಅಷ್ಟರಲ್ಲೇ ಮೆಟ್ರೋ ಹತ್ತಿದ ಇಬ್ಬರು ನವಯುವಕರು, ಒಬ್ಬ ಅಪರಿಚಿತ ವ್ಯಕ್ತಿ ನಿದ್ರಿಸುತ್ತಿರುವ ಮಹಿಳೆಯ ವಿಡಿಯೋ ಮಾಡುತ್ತಿದ್ದಾನೆ ಎಂದು ತಪ್ಪಾಗಿ ಭಾವಿಸಿದರು. ಮಹಿಳೆಯ ಖಾಸಗಿತನಕ್ಕೆ ಧಕ್ಕೆ ತರುತ್ತಿರುವ ಕಿಡಿಗೇಡಿ ಇವನಿರಬೇಕು ಎಂದುಕೊಂಡ ಯುವಕರು ತಕ್ಷಣ ಆ ವ್ಯಕ್ತಿಯ ಬಳಿ ಧಾವಿಸಿದರು.
ಯುವಕರು ನೇರವಾಗಿ ಪತಿಯ ಬಳಿ ತೆರಳಿ, “ಏನು ಮಾಡುತ್ತಿದ್ದೀರಿ ಇಲ್ಲಿ?” ಎಂದು ಗಂಭೀರ ಧ್ವನಿಯಲ್ಲಿ ಪ್ರಶ್ನಿಸಿದರು. ಪತಿ ಶಾಂತವಾಗಿಯೇ, “ವಿಡಿಯೋ ಶೂಟ್ ಮಾಡುತ್ತಿದ್ದೇನೆ” ಎಂದರು. ಸಿಟ್ಟಿಗೆದ್ದ ಯುವಕರು, “ಯಾಕೆ ರೆಕಾರ್ಡ್ ಮಾಡುತ್ತಿದ್ದೀರಿ?” ಎಂದು ತರಾಟೆಗೆ ತೆಗೆದುಕೊಂಡಾಗ, “ಏಕೆಂದರೆ ಈಕೆ ನಿದ್ರಿಸುತ್ತಿದ್ದಾಳೆ” ಎಂದು ಪತಿ ಉತ್ತರಿಸಿದರು.
ಈ ಉತ್ತರವನ್ನ ಕೇಳಿ ಆ ವ್ಯಕ್ತಿ ಉದ್ಧಟತನ ತೋರುತ್ತಿದ್ದಾನೆ ಎಂದು ಭಾವಿಸಿದ ಯುವಕರು ಜಗಳಕ್ಕೇ ಮುಂದಾಗುವ ಹಂತ ತಲುಪಿದರು. ಪರಿಸ್ಥಿತಿಯ ಗಂಭೀರತೆ ಅರಿತ ಪತಿ, “ಸರಿ, ಹಾಗಾದರೆ ನಾನೇ ಈಕೆಯನ್ನು ಎಬ್ಬಿಸಿ ಅನುಮತಿ ಪಡೆಯುತ್ತೇನೆ” ಎಂದು ನಿದ್ರೆಯಲ್ಲಿದ್ದ ಡಾಲಿ ಜೈನ್ ಅವರನ್ನು ಎಬ್ಬಿಸಿದರು.
ಕಣ್ಣುಜ್ಜುತ್ತಾ ಎದ್ದ ಡಾಲಿ ಮತ್ತು ಅವರ ಪತಿ ನಗುತ್ತಾ ಮಾತನಾಡಲಾರಂಭಿಸಿದಾಗಲೇ, ಅವರಿಬ್ಬರೂ ದಂಪತಿ ಎಂಬ ಸತ್ಯ ಯುವಕರಿಗೆ ಗೊತ್ತಾಗಿದ್ದು!
ಮುಜುಗರದ ನಡುವೆಯೂ ಹೊರಹೊಮ್ಮಿದ ಆದರ್ಶ:
ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ಆ ಯುವಕರು ಮುಜುಗರಕ್ಕೊಳಗಾಗಿ ನಾಚಿ ನೀರಾದರು. ಆದರೆ ಅವರು ತೋರಿದ ಕಾಳಜಿ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ಕುರಿತು ಸ್ವತಃ ಡಾಲಿ ಜೈನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, “ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ಅಥವಾ ಅನ್ಯಾಯವಾಗುತ್ತಿದ್ದರೂ ಜನರು ತಮಗೇಕೆ ಉಸಾಬರಿ ಎಂದು ಸುಮ್ಮನಿದ್ದು ಬಿಡುತ್ತಾರೆ. ಆದರೆ ಆ ಇಬ್ಬರು ಯುವಕರು ಹಿಂಜರಿಯದೆ ಮಹಿಳೆಯ ಪರವಾಗಿ ನಿಂತು ಪ್ರಶ್ನಿಸಿದ ರೀತಿ ನಿಜಕ್ಕೂ ಶ್ಲಾಘನೀಯ” ಎಂದು ಯುವಕರ ಜಾಗರೂಕತೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.





Leave a comment