Home ಕ್ರೈಂ ನ್ಯೂಸ್ SIT ರಿ ಇನ್ವಿಷ್ಟಿಗೇಷನ್: ದಕ್ಷಿಣ ಕನ್ನಡ ನಂಟಿರುವ ಅಧಿಕಾರಿಗಳೇಕೆ? ಎಸ್‌ಐಟಿ ವಿರುದ್ಧ ಸೌಜನ್ಯ ತಾಯಿ ಕುಸುಮಾವತಿ ಅಸಮಾಧಾನ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

SIT ರಿ ಇನ್ವಿಷ್ಟಿಗೇಷನ್: ದಕ್ಷಿಣ ಕನ್ನಡ ನಂಟಿರುವ ಅಧಿಕಾರಿಗಳೇಕೆ? ಎಸ್‌ಐಟಿ ವಿರುದ್ಧ ಸೌಜನ್ಯ ತಾಯಿ ಕುಸುಮಾವತಿ ಅಸಮಾಧಾನ!

Share
ದಕ್ಷಿಣ ಕನ್ನಡ
Share

ದಕ್ಷಿಣ ಕನ್ನಡ: ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದ ಕುಮಾರಿ ಸೌಜನ್ಯ ಅ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಬೆನ್ನಲ್ಲೇ, ರಾಜ್ಯ ಸರ್ಕಾರವು ವಿಶೇಷ ತನಿಖಾ ದಳವನ್ನು (SIT) ರಚಿಸಿದೆ. ಆದರೆ, ಸರ್ಕಾರದ ಈ ಎಸ್‌ಐಟಿ ರಚನೆ ಹಾಗೂ ಅದರಲ್ಲಿರುವ ಅಧಿಕಾರಿಗಳ ಆಯ್ಕೆಯ ಬಗ್ಗೆ ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕುಸುಮಾವತಿ ಅವರು, “ನನ್ನ ಮಗಳು ಸೌಜನ್ಯಳಿಗಾದ ದುರಂತದ ಮರುತನಿಖೆಗೆ ಆದೇಶಿಸಿರುವ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ನಾವು ಎಂದಿಗೂ ಆಭಾರಿಯಾಗಿರುತ್ತೇವೆ. ಆದರೆ, ಮರುತನಿಖೆಗಾಗಿ ರಾಜ್ಯ ಸರ್ಕಾರವು ರಚಿಸಿರುವ ಎಸ್‌ಐಟಿ ತಂಡದ ಬಗ್ಗೆ ನಮಗೆ ತೀವ್ರ ಅಸಮಾಧಾನವಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಎಸ್‌ಐಟಿ ತಂಡದಲ್ಲಿ ಯಾರಿದ್ದಾರೆ? ಆಕ್ಷೇಪ ಯಾಕೆ?

ರಾಜ್ಯ ಸರ್ಕಾರವು ಐಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದೆ. ಈ ತಂಡದಲ್ಲಿ:

ಎನ್. ಶಶಿಕುಮಾರ್ – ಐಜಿಪಿ (ತಂಡದ ಮುಖ್ಯಸ್ಥರು)

ಸುಧೀರ್ ಕುಮಾರ್ ರೆಡ್ಡಿ – ಮಂಗಳೂರು ಪೊಲೀಸ್ ಕಮಿಷನರ್

ನಿಶಾ ಜೇಮ್ಸ್ – ರಾಜ್ಯ ಗುಪ್ತವಾರ್ತೆ ವಿಭಾಗದ ಎಸ್‌ಪಿ

ಲೋಕೇಶ್ ಜಗಲಾಸರ್ – ಸಿಐಡಿ ಎಸ್‌ಪಿ

ವೆಂಕಟೇಶ್ ಪ್ರಸನ್ನ – ಬೆಂಗಳೂರು ಗ್ರಾಮಾಂತರ ಎಎಸ್‌ಪಿ

ಈ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆ ಕೆಲಸ ಮಾಡಿದ್ದ ಮತ್ತು ವಿವಾದಾತ್ಮಕ ಹಿನ್ನೆಲೆಯಿರುವ ಅಧಿಕಾರಿಗಳನ್ನು ನೇಮಿಸಿರುವುದಕ್ಕೆ ಸೌಜನ್ಯ ಪರ ಹೋರಾಟಗಾರರಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ಷೇಪ ವ್ಯಕ್ತವಾಗಿದೆ. ಎಸ್‌ಐಟಿ ಮುಖ್ಯಸ್ಥ ಶಶಿಕುಮಾರ್ ಅವರು ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದರೆ, ವೆಂಕಟೇಶ್ ಪ್ರಸನ್ನ ಅವರು ದಕ್ಷಿಣ ಕನ್ನಡ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಮಂಗಳೂರು ಕಮಿಷನರ್ ಆಗಿರುವ ಸುಧೀರ್ ಕುಮಾರ್ ರೆಡ್ಡಿ ಅವರ ಹೆಸರೂ ಈ ತಂಡದಲ್ಲಿದೆ.

ದಕ್ಷಿಣ ಕನ್ನಡ ನಂಟಿಲ್ಲದವರ ನೇಮಕಕ್ಕೆ ಆಗ್ರಹ

ಪಕ್ಷಪಾತವಿಲ್ಲದೆ ನ್ಯಾಯಯುತ ತನಿಖೆ ನಡೆಯಬೇಕಾದರೆ, ದಕ್ಷಿಣ ಕನ್ನಡ ಜಿಲ್ಲೆಯ ನಂಟು ಇರುವ ಅಧಿಕಾರಿಗಳನ್ನು ಎಸ್‌ಐಟಿಯಿಂದ ಕೈಬಿಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಸೌಜನ್ಯ ತಾಯಿಯ ಈ ಅಸಮಾಧಾನದ ಹೇಳಿಕೆಯು ಪ್ರಕರಣದಲ್ಲಿ ಮತ್ತೆ ಹೊಸ ಚರ್ಚೆಗೆ ನಾಂದಿ ಹಾಡಿದೆ.

Share

Leave a comment

Leave a Reply

Your email address will not be published. Required fields are marked *