SUDDIKSHANA KANNADA NEWS/ DAVANAGERE/ DATE:21-03-2024
ದಾವಣಗೆರೆ: ಜಿಲ್ಲೆಯಾದ್ಯಂತ ಪಾದಯಾತ್ರೆ ಮೂಲಕ ರಾಜ್ಯ ರಾಜಕಾರಣ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ಸದ್ದು ಮಾಡಿದ್ದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಔಟ್ರೀಚ್ ಸೆಲ್ ವಿಭಾಗದ ಉಪಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಮುಂದಿನ ನಡೆ ನಿಗೂಢವಾಗಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ಅವರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ತಪ್ಪಿರುವುದು ಸ್ಪಷ್ಟವಾಗಿದೆ. ಆದ್ರೆ, ಕೊನೆ ಹಂತದವರೆಗೂ ಇದ್ದ ಹೆಸರು ಯಾಕೆ ತಪ್ಪಿತು ಎಂಬ ಅನುಮಾನ ಈಗಲೂ ಕಾಡುತ್ತಿದೆ. ಮಾತ್ರವಲ್ಲ, ಟಿಕೆಟ್ ಸಿಗದೇ ಇರುವುದು ದುರಂತ. ಜನರ ಪ್ರೀತಿ, ವಿಶ್ವಾಸ, ಸರ್ವೆಯಲ್ಲಿ ಬಂದದ್ದು ನನ್ನ ಪರವಾಗಿಯೇ. ಅಂತಿಮವಾಗಿ ಯಾಕೆ ಟಿಕೆಟ್ ಸಿಕ್ಕಿಲ್ಲ ಎಂಬುದು ವಿನಯ್ ಕುಮಾರ್ ಅವರಿಗೂ ಶಾಕ್ ಕೊಟ್ಟಿದೆ.
ಪಕ್ಷೇತರ ಸ್ಪರ್ಧೆಗೆ ಒತ್ತಡ:
ಜಿ. ಬಿ. ವಿನಯ್ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಎಸ್. ಎಸ್. ಬಡಾವಣೆಯಲ್ಲಿರುವ ಜನ ಸಂಪರ್ಕ ಕಚೇರಿಯಲ್ಲಿ ನೂರಾರು ಮಂದಿ ಸೇರಿದ್ದರು. ವಿನಯ್ ಕುಮಾರ್ ಅವರು ದಾವಣಗೆರೆಗೆ ಬರುತ್ತಾರೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಬೇರೆ ಬೇರೆ ತಾಲೂಕುಗಳ ವಿವಿಧ ಸಮುದಾಯದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು ಹಾಗೂ ಯುವಕರು ಸೇರಿದಂತೆ ಹಲವರು ಆಗಮಿಸಿದ್ದರು. ವಿನಯ್ ಕುಮಾರ್ ಅವರಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದ ನಮಗೆಲ್ಲಾ ನೋವು, ಬೇಸರ ತಂದಿದೆ. ಗೆಲ್ಲುವ ಕುದುರೆಗೆ ಕಾಂಗ್ರೆಸ್ ಹೈಕಮಾಂಡ್ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಿಂದಲೂ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸಿ ಜನರ ಮನಸ್ಸಿನಲ್ಲಿ ಏನಿದೆ? ಜನರು ಬಯಸುವ ನಾಯಕನಾರು? ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದೂ ಸೇರಿದಂತೆ ಹತ್ತಾರು ವಿಚಾರಗಳ ಬಗ್ಗೆ
ಜನರ ಬಳಿಗೆ ಬಂದು ಕೇಳಿಸಿಕೊಂಡಿದ್ದರು. ಜನರು ಸಹ ಅಷ್ಟೇ ಪ್ರೀತಿ ಕೊಟ್ಟಿದ್ದರು. ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಆದ್ರೆ, ಇಷ್ಟೊಂದು ಜಿಲ್ಲೆಯಾದ್ಯಂತ ಸಂಚರಿಸಿ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಬೇರೆಯೊಬ್ಬರಿಗೆ ಟಿಕೆಟ್ ನೀಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೋ ಒಂದು ಸಮುದಾಯಕ್ಕೆ ಮೀಸಲಾಗದೇ ಎಲ್ಲಾ ವರ್ಗದವರನ್ನು ಸಮಾನವಾಗಿ ಕಂಡ ನಾಯಕ. ಕಾಂಗ್ರೆಸ್ ಪಕ್ಷದಲ್ಲಿ ಯುವ ನಾಯಕರಾಗಿದ್ದ ಅವರು, ಶಿಕ್ಷಣಕ್ಕೆ ನೀಡಿದ್ದಂಥ ಪ್ರೋತ್ಸಾಹ ಕಡಿಮೆ ಏನಲ್ಲ. ತಮ್ಮ ಕೈಯಲ್ಲಾದಷ್ಟು ಧನ
ಸಹಾಯ, ಪೀಠೋಪಕರಣ, ಪಠ್ಯ ಪುಸ್ತಕ, ವಿಕಲಚೇನತರಿಗೆ ನೆರವು, ಆಟೋ ಚಾಲಕರು ಮತ್ತು ಅವರ ಮಕ್ಕಳಿಗೆ ಸಹಾಯ ಸೇರಿದಂತೆ ಸಮಾಜಸೇವೆ ಮಾಡಿದವರು. ಇಷ್ಟು ಜನಪ್ರಿಯತೆ ಗಳಿಸಿದ್ದ ವಿನಯ್ ಕುಮಾರ್ ಅವರಿಗೆ ಟಿಕೆಟ್ ನೀಡಬೇಕಿತ್ತು
ಎಂದು ಸಭೆಯಲ್ಲಿದ್ದವರು ಆಗ್ರಹಿಸಿದರು.
ವಿನಯ್ ಕುಮಾರ್ ನಿಲುವೇನು..?
ಟಿಕೆಟ್ ಕೈ ತಪ್ಪಿರುವುದು ಗೊತ್ತಾಗಿದೆ. ಇದು ನಿಜಕ್ಕೂ ಆಶ್ಚರ್ಯ ತಂದಿರುವ ಜೊತೆಗೆ ದುರಂತ ಎನ್ನಬಹುದು. ಎಲ್ಲಾ ಸರ್ವೆಗಳಲ್ಲಿಯೂ ನನ್ನ ಹೆಸರೇ ಇತ್ತು. ಎಐಸಿಸಿ ಪ್ಯಾನಲ್ ನಲ್ಲಿಯೂ ನನ್ನ ಹೆಸರೇ ಅಂತಿಮ ಪಟ್ಟಿಯಲ್ಲಿ ಇತ್ತು. ಕೊನೆಗಳಿಗೆಯಲ್ಲಿ ಟಿಕೆಟ್ ಮಿಸ್ ಆಗಿದೆ. ಟಿಕೆಟ್ ಸಿಗದಿರಲು ಕಾರಣ ಏನೆಂಬುದು ಗೊತ್ತಾಗುತ್ತಿಲ್ಲ. ಕುಟುಂಬ ರಾಜಕಾರಣವೋ, ಬೇರೆ ಕಾರಣವೋ, ಬೇರೆ ಯಾವುದಾದರೂ ಒತ್ತಡ ಇತ್ತೋ ಎಂಬುದು ಗೊತ್ತಾಗುತ್ತಿಲ್ಲ. ನನಗೆ ಟಿಕೆಟ್ ಸಿಗಬೇಕಿತ್ತು ಎಂದು ವಿನಯ್ ಕುಮಾರ್ ಅವರು ಮಾಧ್ಯಮದವರ ಜೊತೆ ಮಾತನಾಡುತ್ತಾ ತಿಳಿಸಿದರು.
ಕಾಂಗ್ರೆಸ್ ಪಕ್ಷ ನಡೆಸಿದ್ದ ಎಲ್ಲಾ ಸರ್ವೆಗಳಲ್ಲಿಯೂ ನನ್ನ ಹೆಸರೇ ಇತ್ತು. ಯಾವ ಕಾರಣಕ್ಕೆ ಟಿಕೆಟ್ ಕೈ ತಪ್ಪಿದೆ ಎಂಬುದು ಗೊತ್ತಾಗುತ್ತಿಲ್ಲ. ಪಕ್ಷದ ವರಿಷ್ಠರು ಹೇಳಿದ್ರು. ಗೆಲ್ಲುವ ಅಭ್ಯರ್ಥಿ ಎಂದೂ ಸಹ ಹೇಳಿದ್ದರು. ಗೆಲ್ಲುವ ಕುದುರೆ ಎಂದು ಹೇಳುವುದು ಅಷ್ಟು ಸುಲಭವಲ್ಲ, ಸಾಮಾನ್ಯವಾದ ವಿಚಾರವೂ ಅಲ್ಲ. ಹೈಕಮಾಂಡ್, ಪಕ್ಷದ ವರಿಷ್ಠರ ಆಲೋಚನೆ ಏನು ಎಂಬುದು ಈಗ ಗೊತ್ತಾಗುತ್ತಿಲ್ಲ ಎಂದು ವಿನಯ್ ಕುಮಾರ್ ತಿಳಿಸಿದರು.
ನನಗೆ ಇನ್ನೂ ವಯಸ್ಸಿದೆ ಎಂಬ ಕಾರಣಕ್ಕೆ ನನ್ನ ಹೆಸರು ಕೈ ಬಿಟ್ಟಿರಬಹುದು. ಮುಂದೆ ಅವಕಾಶ ಸಿಗುತ್ತದೆ. ಸ್ವಲ್ಪ ಸಮಾಧಾನವಾಗಿರಲಿ, ಯುವ ನಾಯಕ ಎಂದುಕೊಂಡು ಟಿಕೆಟ್ ನೀಡದಿರಲು ಕಾರಣವಿರಬಹುದು ಎಂದು ಅನಿಸುತ್ತದೆ ಎಂದು ತಿಳಿಸಿದರು.
ಮುಂದಿನ ನಡೆ ಏನು…?
ನನ್ನ ಮುಂದಿನ ನಡೆ ಕುರಿತಂತೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಈಗಲೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೋ ಇಲ್ಲವೋ ಎಂಬುದನ್ನು ಹೇಳುವುದಿಲ್ಲ. ಜಿಲ್ಲೆಯ 400 ರಿಂದ 500 ಹಳ್ಳಿಗಳಲ್ಲಿ ಪ್ರವಾಸ ಮಾಡುತ್ತೇನೆ. ಅಲ್ಲಿನ ಜನರನ್ನು ಭೇಟಿ ಮಾಡುತ್ತೇನೆ. ಜನರ ಪಲ್ಸ್ ಏನಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಆಮೇಲೆ ಏನು ಮಾಡಬೇಕು ಎಂಬ ಕುರಿತಂತೆ ಜನರು, ಹಿತೈಷಿಗಳು, ಅಭಿಮಾನಿಗಳು, ಸ್ನೇಹಿತರು, ಕುಟುಂಬದವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಘೋಷಿಸುತ್ತೇನೆ ಎಂದು ಹೇಳಿದರು.
ಹದಿನೈದು ದಿನಗಳ ಕಾಲ ಎಲ್ಲೆಡೆ ಓಡಾಡುತ್ತೇನೆ. ಜನರ ಅಭಿಪ್ರಾಯ ಸಂಗ್ರಹಿಸುತ್ತೇನೆ. ಹದಿನೈದು ದಿನಗಳ ಬಳಿಕ ಸ್ಪಷ್ಟ ನಿರ್ಧಾರ ಏನು ಎಂಬುದನ್ನು ಘೋಷಣೆ ಮಾಡುತ್ತೇನೆ ಎಂದು ಹೇಳುವ ಮೂಲಕ ನಿಗೂಢ ನಡೆ ಇಟ್ಟಿದ್ದು, ಎಲ್ಲರಲ್ಲಿಯೂ ಮತ್ತೆ ಕುತೂಹಲ ಕೆರಳುವಂತೆ ಮಾಡಿದ್ದಾರೆ.