Home ಕ್ರೈಂ ನ್ಯೂಸ್ ಉದ್ಯಮಿ ಕೊಲೆ ಪ್ರಕರಣ: ‘ಸಿಕ್ಕಿಬಿದ್ದರೆ ಹೆಂಡತಿ ಹೆಸರು ಹೇಳು’ ಎಂದು ಸುಪಾರಿ ಕಿಲ್ಲರ್‌ಗೆ ಸೂಚಿಸಿದ್ದ ಮಗ ಬಂಧನ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಉದ್ಯಮಿ ಕೊಲೆ ಪ್ರಕರಣ: ‘ಸಿಕ್ಕಿಬಿದ್ದರೆ ಹೆಂಡತಿ ಹೆಸರು ಹೇಳು’ ಎಂದು ಸುಪಾರಿ ಕಿಲ್ಲರ್‌ಗೆ ಸೂಚಿಸಿದ್ದ ಮಗ ಬಂಧನ!

Share
ಉದ್ಯಮಿ
Share

ಕಾನ್ಪುರ: ಉತ್ತರ ಪ್ರದೇಶದ ಕಾನಪುರದಲ್ಲಿ ಸೆಪ್ಟೆಂಬರ್ 5ರಂದು ನಡೆದ ಪ್ರಖ್ಯಾತ ಔಷಧ ಉದ್ಯಮಿ ವಿನೀತ್ ಮನೋಚಾ (60) ಅವರ ಭೀಕರ ಕೊಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಬೆನ್ನತ್ತಿದ ಕಾನಪುರ ಪೊಲೀಸರು, ಉದ್ಯಮಿಯ ಸ್ವಂತ ಮಗ ಸುಬ್ರತ್ ಮನೋಚಾ ಜತೆಗೆ ಸುಪಾರಿ ಶೂಟರ್‌ಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

₹6 ಲಕ್ಷ ಸುಪಾರಿ ಡೀಲ್! ಪೊಲೀಸ್ ತನಿಖೆಯ ವೇಳೆ ಬಂಧಿತ ಸುಪಾರಿ ಕಿಲ್ಲರ್ ವಿಶಾಲ್ ಗೌತಮ್ ನೀಡಿದ ಹೇಳಿಕೆ ಇಡೀ ಪ್ರಕರಣದ ಗಂಭೀರತೆಯನ್ನು ಬಯಲುಗೊಳಿಸಿದೆ. ತಂದೆ ವಿನೀತ್ ಮನೋಚಾ ಅವರನ್ನು ಕೊಲ್ಲಲು ಮಗ ಸುಬ್ರತ್ ತನಗೆ 6 ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದ್ದಾಗಿ ವಿಶಾಲ್ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, “ಒಂದು ವೇಳೆ ಪೊಲೀಸರಿಗೆ ಸಿಕ್ಕಿಬಿದ್ದರೆ ನನ್ನ ಹೆಂಡತಿ ಶಾಲೂ ಹೆಸರನ್ನು ಹೇಳು” ಎಂದು ಸುಬ್ರತ್ ತನಗೆ ಮಾರ್ಗದರ್ಶನ ನೀಡಿದ್ದಾಗಿ ವಿಶಾಲ್ ಗಂಭೀರ ಆರೋಪ ಮಾಡಿದ್ದಾನೆ.
ಕಣ್ಣೀರಿಟ್ಟ ಸೊಸೆ, ಬಯಲಾಯ್ತು ಸಂಚು: ಕಲ್ಯಾಣಪುರದ ‘ರತನ್ ಆರ್ಬಿಟ್’ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಆರಂಭದಲ್ಲಿ ಉದ್ಯಮಿಯ ಸೊಸೆ ಶಾಲೂ, ಸುಪಾರಿ ಕಿಲ್ಲರ್ ವಿಶಾಲ್ ಹಾಗೂ ಆತನ ಸಹಚರ ರಾಜ್‌ಕಿಶೋರ್‌ನನ್ನು ಬಂಧಿಸಿದ್ದರು. ಆದರೆ, ಸುಬ್ರತ್, ಶಾಲೂ ಮತ್ತು ವಿಶಾಲ್ ಮೂವರನ್ನೂ ಮುಖಾಮುಖಿ ವಿಚಾರಣೆ ನಡೆಸಿದಾಗ ಶಾಲೂ ಕಣ್ಣೀರಿಟ್ಟು, ತನ್ನ ಗಂಡ ಸುಬ್ರತ್‌ನನ್ನು ರಕ್ಷಿಸಲು ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಸತ್ಯ ಬಾಯ್ಬಿಟ್ಟಿದ್ದಾಳೆ.
ಪೊಲೀಸರಿಗೆ ಸಿಕ್ಕ ಬಲವಾದ ಸಾಕ್ಷ್ಯಗಳು:

ಹೊಸ ಸಿಮ್ ಕಾರ್ಡ್ ಬಳಸಿ ಕರೆ: ಕೊಲೆ ನಡೆಯುವುದಕ್ಕಿಂತ ಕೇವಲ ಎರಡೇ ದಿನಗಳ ಮುಂಚೆ ವಿಶಾಲ್ ಹೊಸ ಸಿಮ್ ಕಾರ್ಡ್ ಖರೀದಿಸಿ, ಅದರಿಂದ ಮೊದಲು ಸುಬ್ರತ್‌ಗೆ ಕರೆ ಮಾಡಿದ್ದ ಎನ್ನುವುದು ಕಾಲ್ ರೆಕಾರ್ಡ್ಸ್ (CDR) ಮೂಲಕ ದೃಢಪಟ್ಟಿದೆ.

ಸಾಕ್ಷ್ಯಗಳ ವಶ: ಕೃತ್ಯ ಎಸಗಿ ಓಡಿಹೋಗುವಾಗ ಎಸೆದಿದ್ದ ಅಪಾರ್ಟ್‌ಮೆಂಟ್‌ನ ಕೀಲಿಕೈಯನ್ನು ಖಾಲಿ ಜಾಗದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಕ್ತಸಿಕ್ತ ಉಡುಪು: ಮತ್ತೊಬ್ಬ ಆರೋಪಿ ರಾಜ್‌ಕಿಶೋರ್ ಸೂಚನೆ ಮೇರೆಗೆ ಕಾನಪುರ ಸೆಂಟ್ರಲ್ ರೈಲ್ವೆ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಹಿಂಭಾಗದಲ್ಲಿದ್ದ ರಕ್ತಸಿಕ್ತ ಪ್ಯಾಂಟ್ ಹಾಗೂ ಕಪ್ಪು ಸ್ಕಾರ್ಫ್ ಅನ್ನು ಜಪ್ತಿ ಮಾಡಲಾಗಿದೆ.

ಕಾನಪುರ ಪೊಲೀಸ್ ಕಮಿಷನರ್ ರಘುವೀರ್ ಲಾಲ್ ಈ ಕುರಿತು ಮಾಹಿತಿ ನೀಡಿದ್ದು, ಡಿಜಿಟಲ್ ಹಾಗೂ ಸಾಂದರ್ಭಿಕ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ, ಸುಬ್ರತ್‌ನನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
Share

Leave a comment

Leave a Reply

Your email address will not be published. Required fields are marked *