
ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಮಗಳ ಮದುವೆ ಪೂರ್ವಭಾವಿ ಮೆರವಣಿಗೆಯ ವೇಳೆ ಕುಣಿದು ಕುಪ್ಪಳಿಸುತ್ತಿದ್ದ 51 ವರ್ಷದ ವ್ಯಕ್ತಿಯೊಬ್ಬರು ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.
ಸಂತೋಷದ ಮನೆಯಲ್ಲಿ ಆಘಾತಕಾರಿ ದುರಂತ ಸಂಭವಿಸಿದ್ದರೂ, ಕುಟುಂಬದವರು ಮಗಳ ಮದುವೆಯನ್ನು ನೆರವೇರಿಸಿ, ನಂತರ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಿರುವ ಹೃದಯವಿದ್ರಾವಕ ಪ್ರಸಂಗ ಬೆಳಕಿಗೆ ಬಂದಿದೆ.
ನವೆಂಬರ್ 20 ರಂದು ತಡರಾತ್ರಿ ಋಷಭ್ದೇವ್ ಉಪವಿಭಾಗದ ಪತಿಯಾರ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೃತಪಟ್ಟವರನ್ನು ಅಹಮದಾಬಾದ್ನಲ್ಲಿ ಖಾಸಗಿ ಕಂಪನಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಶಂಕರ್ಲಾಲ್ ಮೇಘವಾಲ್ ಎಂದು ಗುರುತಿಸಲಾಗಿದೆ.
ತಮ್ಮ 26 ವರ್ಷದ ಮಗಳು ಪ್ರಿಯಾಂಕಾಳ ಮದುವೆ ಮೆರವಣಿಗೆಯಲ್ಲಿ ಶಂಕರ್ಲಾಲ್ ಅತ್ಯಂತ ಉತ್ಸಾಹದಿಂದ ನೃತ್ಯ ಮಾಡುತ್ತಿದ್ದಾಗ ಹಠಾತ್ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅವರು ಜೀವನ್ಮರಣ ನಡೆಸಿ ಕೊನೆ ಉಸಿರೆಳೆದರು. ತಂದೆಯ ಸಾವಿನ ವಿಷಯವನ್ನು ಮಗಳ ಮದುವೆಯಾಗುವವರೆಗೆ ಮುಚ್ಚಿಟ್ಟ ಕುಟುಂಬದವರು, ರಾತ್ರೋರಾತ್ರಿ ಮದುವೆ ಶಾಸ್ತ್ರಗಳನ್ನು ಮುಗಿಸಿ, ಮಗಳ ವಿದಾಯದ ಬಳಿಕ ತಂದೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.
ಖುಷಿಯಲ್ಲೇ ಆವರಿಸಿದ ದುಃಖ: ಮಗಳ ಮದುವೆ ಸಂಭ್ರಮದ ನೃತ್ಯದ ನಡುವೆಯೇ ಹೃದಯಾಘಾತವಾಗಿ ತಂದೆ ಶಂಕರ್ಲಾಲ್ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಮನೆಯಲ್ಲಿ ಸಾವು ಮುಚ್ಚಿಟ್ಟು ಮದುವೆ: ವಧುವಿಗೆ ಆಘಾತವಾಗಬಾರದೆಂದು ತಂದೆಗೆ ಆರೋಗ್ಯ ಸಮಸ್ಯೆಯಿದೆ ಎಂದು ಸುಳ್ಳು ಹೇಳಿ, ರಾತ್ರೋರಾತ್ರಿ 3 ಗಂಟೆಗೆ ಮದುವೆ ಶಾಸ್ತ್ರಗಳನ್ನು ಪೂರ್ಣಗೊಳಿಸಲಾಗಿದೆ.
ಮಗಳ ವಿದಾಯದ ಬಳಿಕ ಅಂತ್ಯಕ್ರಿಯೆ: ಮಗಳ ಮದುವೆ ಮತ್ತು ಬೀಳ್ಕೊಡುಗೆಯ ನಂತರ ಕುಟುಂಬದವರು ಶಂಕರ್ಲಾಲ್ ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸಿ ಕಣ್ಣೀರು ಹಾಕಿದ್ದಾರೆ.
ಈ ಘಟನೆಯು ಸ್ಥಳೀಯ ಗ್ರಾಮಸ್ಥರನ್ನು ಮತ್ತು ನೆರೆಹರೆಯವರನ್ನು ತೀವ್ರ ಆಘಾತ ಹಾಗೂ ಶೋಕಸಾಗರದಲ್ಲಿ ಮುಳುಗಿಸಿದೆ.




