SUDDIKSHANA KANNADA NEWS/ DAVANAGERE/ DATE:10-03-2024
ದಾವಣಗೆರೆ: ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದ ಹಿರೇಹಳ್ಳದಿಂದ ಕಾಕನೂರುವರೆಗಿನ ಒಂದು ಕಿಲೋಮೀಟರ್ ಬ್ಲಾಕ್ ಸ್ಪಾಟ್ ಎಂದು ಘೋಷಿಸಲಾಗಿದೆ. ರಾಜ್ಯ ಹೆದ್ದಾರಿ ಆಗಿರುವ ಕಾರಣ ಆಗಾಗ್ಗೆ ಇಲ್ಲಿ ಅಪಘಾತ ಸಂಭವಿಸುತ್ತಿರುತ್ತದೆ. ಪೊಲೀಸರು ವಾಹನ ಸವಾರರಿಗೆ ಜಾಗೃತಿ ಮೂಡಿಸಿದರೂ ನಿಯಮ ಪಾಲನೆ ಮಾಡದಿರುವುದು ಇದಕ್ಕೆ ಸಮಸ್ಯೆ.
ಅಪಘಾತ ಹೆಚ್ಚಳ ಆಗುತ್ತಿರುವುದರಿಂದ ಈ ಒಂದು ಕಿಲೋಮೀಟರ್ ವರೆಗೆ ಬ್ಲಾಕ್ ಸ್ಪಾಟ್ ಎಂಬ ಸೂಚನೆ ನೀಡಿದ್ದರೂ ವಾಹನ ಸವಾರರು ಮಾತ್ರ ನಿಯಮ ಪಾಲನೆ ಮಾಡುತ್ತಿಲ್ಲ. ಇದು ದೊಡ್ಡ ಸಮಸ್ಯೆ ತಂದೊಡ್ಡಿದೆ.
ಕಾಕನೂರು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಕಾರಿನಲ್ಲಿದ್ದ ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ. ದಾವಣಗೆರೆ ತಾಲೂಕಿನ ದ್ಯಾಮೇನಹಳ್ಳಿ ಸಂತೋಷ (26) ಹಾಗೂ ಹರಿಹರ ತಾಲೂಕಿನ ಗುಲಿಗೇನಹಳ್ಳಿ ಗ್ರಾಮದ ಮಹೇಂದ್ರ (23) ಮೃತಪಟ್ಟ ದುರ್ದೈವಿಗಳು.
ಚನ್ನಗಿರಿ ಕಡೆಯಿಂದ ಯುವಕರು ಬೈಕ್ ನಲ್ಲಿ ಹೋಗುತ್ತಿದ್ದರು. ಚಿಕ್ಕಮಗಳೂರಿನಿಂದ ದಾವಣಗೆರೆ ಕಡೆಗೆ ಕಾರು ಬರುತ್ತಿತ್ತು. ಬೆಳಿಗ್ಗೆ 7.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ಹಾರಿ ರಸ್ತೆ ಬದಿ ಗುಂಡಿಗೆ ಬಿದ್ದಿದ್ದು, ಕಾರು – ಬೈಕ್ ಅನ್ನು ಸುಮಾರು 100 ಮೀಟರ್ ವರೆಗೆ ಎಳೆದು ಹೋಗಿದೆ. ಕಾರಿನಲ್ಲಿದ್ದ ಮಹಿಳೆಯರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ರಕ್ಷಿಸಿದ್ದಾರೆ. ಅಪಘಾತದ ಭೀಕರತೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆಯನ್ನೂ ನಡೆಸಿದ್ದಾರೆ.
ರಾಜ್ಯ ಹೆದ್ದಾರಿಯಲ್ಲಿ ಹಂಪ್ಸ್ ಹಾಕಿದರೆ ಅಪಘಾತ ತಡೆಗಟ್ಟಬಹುದು. ಗ್ರಾಮದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಆಗಾಗ್ಗೆ ಅಪಘಾತ ಆಗುತ್ತಲೇ ಇರುತ್ತದೆ. ಪ್ರತಿ 15 ದಿನಗಳಿಗೊಮ್ಮೆ ಆಕ್ಸಿಡೆಂಟ್ ಸಾಮಾನ್ಯ
ಎಂಬಂತಾಗಿದೆ. ರಸ್ತೆ ಹಂಪ್ಸ್ ಗಳನ್ನು ನಿರ್ಮಾಣ ಮಾಡಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ, ಲೋಕೋಪಯೋಗಿ ಇಲಾಖೆ, ಕೆ ಆರ್ ಡಿ ಸಿ ಎಲ್ ಇಲಾಖೆ ಕಚೇರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ
ಪ್ರಯೋಜನ ಶೂನ್ಯ. ಕಳೆದ ತಿಂಗಳು ಹಂಪ್ಸ್ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಆದ್ರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಹಂಪ್ಸ್ ಅಳವಡಿಸುವುದಾಗಿ ಭರವಸೆ ನೀಡಿದ್ದರು. ಆದ್ರೂ ಆಗಿಲ್ಲ. ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಪ್ರೌಢಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗುತ್ತಾರೆ. ಸಂಜೆಯಂತೂ ವಾಹನ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ದಾವಣಗೆರೆ ವಿವಿ ಬಳಿ, ದೇವರಹಳ್ಳಿ ಗ್ರಾಮ ಹಾಗೂ ಟೋಲ್ ಗಳ ಬಳಿ ಹಂಪ್ಸ್ ನಿರ್ಮಿಸಿರುವ ರೀತಿಯಲ್ಲಿ ಹಾಕಬೇಕು. ಮತ್ತೆ ಅಪಘಾತ ಸಂಭವಿಸಿದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಹಂಪ್ಸ್ ಅಳವಡಿಸಲು ಆಗುತ್ತಿಲ್ಲ. ಈ ಕುರಿತಂತೆ ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಸುಮಾರು ಒಂದು ಕಿಲೋಮೀಟರ್ ವರೆಗೆ ಆಗಿದ್ದಾಂಗೆ ಅಪಘಾತ
ಆಗುತ್ತಲೇ ಇರುತ್ತದೆ. ಸ್ಪೀಡ್ ಲಿಮಿಟ್, ಹೆಲ್ಮೆಟ್ ಧರಿಸಬೇಕು, ಸಂಚಾರಿ ನಿಯಮ ಪಾಲನೆ ಮಾಡಬೇಕು ಎಂಬುದೂ ಸೇರಿದಂತೆ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ.
ರಾಜ್ಯ ಹೆದ್ದಾರಿ ಆಗಿರುವ ಕಾರಣ ವೇಗವಾಗಿ ಬರುವ ವಾಹನಗಳಿಗೆ ಸ್ಪೀಡ್ ಲಿಮಿಟ್ ಹಾಕಬೇಕು. ಆಗ ಮಾತ್ರ ನಿಯಂತ್ರಣ ಸಾಧ್ಯ. ಜನರಿಗೆ ಅರಿವು ಮೂಡಿಸಿದ್ದರೂ ವೇಗವಾಗಿ ಬೈಕ್, ಕಾರು, ಬಸ್, ಲಾರಿ ಸೇರಿದಂತೆ ಎಲ್ಲಾ ವಾಹನಗಳು ಸಂಚರಿಸುವುದೇ ಈ ಸಮಸ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.