ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ವೃತ್ತದ ಹೆಸರನ್ನು ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಬದಲಾಯಿಸಲಾಗುವುದು ಎಂಬ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೊನೆಗೂ ವೃತ್ತದ ಹೆಸರನ್ನು ಬದಲಾಯಿಸುವುದಿಲ್ಲ ಎಂದು ತುಮಕೂರು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆಯನ್ನು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸ್ವಾಗತಿಸಿದ್ದಾರೆ.
ಪೂಜ್ಯ ಶ್ರೀಗಳ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸಕೂಡದು ಎಂದು ಆಗ್ರಹಿಸಿ ಶ್ರೀಗಳ ಭಕ್ತವೃಂದವು ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಸೋಮಣ್ಣ ಅವರು ಮಾನ್ಯ ಮುಖ್ಯಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಲ್ಲದೆ, ಜಿಲ್ಲಾಡಳಿತಕ್ಕೂ ಇದರ ಪ್ರತಿಯನ್ನು ಕಳುಹಿಸಿಕೊಟ್ಟಿದ್ದರು. ಭಕ್ತರ ಹಾಗೂ ಸಚಿವರ ನಿರಂತರ ಒತ್ತಡಕ್ಕೆ ಮಣಿದು ಜಿಲ್ಲಾಡಳಿತವು ಹೆಸರನ್ನು ಮುಂದುವರಿಸಲು ನಿರ್ಧರಿಸಿದೆ.
ಹೆಸರು ಬದಲಾವಣೆ ಕೈಬಿಟ್ಟ ಜಿಲ್ಲಾಡಳಿತ: ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರನ್ನೇ ವೃತ್ತಕ್ಕೆ ಮುಂದುವರಿಸುವುದಾಗಿ ತುಮಕೂರು ಜಿಲ್ಲಾಧಿಕಾರಿಗಳು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.
ಭಕ್ತವೃಂದದ ಆಶಯ ಈಡೇರಿಕೆ: ಶ್ರೀಗಳ ಕೋಟ್ಯಂತರ ಭಕ್ತರ ಭಾವನೆಗೆ ಗೌರವ ಸಿಕ್ಕಿದ್ದು, ವೃತ್ತದ ಹೆಸರು ಬದಲಾವಣೆ ಮಾಡುವ ಹುನ್ನಾರ ವಿಫಲವಾಗಿದೆ.
ಕೇಂದ್ರ ಸಚಿವರ ಮುತುವರ್ಜಿ: ಭಕ್ತರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಡಳಿತದ ಗಮನ ಸೆಳೆದು ಹೆಸರು ಬದಲಾಗದಂತೆ ತಡೆಯುವಲ್ಲಿ ವಿ. ಸೋಮಣ್ಣ ಪ್ರಮುಖ ಪಾತ್ರ ವಹಿಸಿದ್ದಾರೆ.
ತುಮಕೂರಿನ ಅಧಿದೇವರೆಂದೇ ಖ್ಯಾತರಾದ ಡಾ. ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.





Leave a comment