ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಗುಣಮಟ್ಟದ ಶಿಕ್ಷಣದ ಕೊರತೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ನೀಡಿರುವ ಹೇಳಿಕೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಲಕ್ಷಾಂತರ ರೂಪಾಯಿ ಸಂಬಳ ಪಡೆದರೂ ಕೆಲ ಸರ್ಕಾರಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಅವರ ಮಾತುಗಳು ಶಿಕ್ಷಕರ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಐಶ್ವರ್ಯಾ, ವಾರದಲ್ಲಿ ಐದು ದಿನ ಶಾಲೆಗೇ ಬಾರದ ಶಿಕ್ಷಕರನ್ನು ತಾವು ನೋಡಿರುವುದಾಗಿ ತಿಳಿಸಿದ್ದರು. ಅಲ್ಲದೆ, ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಶೌಚಾಲಯ, ಸ್ವಚ್ಛತೆ ಹಾಗೂ ಹೆಣ್ಣುಮಕ್ಕಳಿಗೆ ಅಗತ್ಯವಿರುವ ಪ್ಯಾಡ್ ಡಿಸ್‌ಬಿನ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗಮನ ಸೆಳೆದಿದ್ದರು. ತಮ್ಮ ಸಂಸ್ಥೆಯ ವತಿಯಿಂದ ಪ್ರೊಜೆಕ್ಟರ್ ಹಾಗೂ ಬಸ್‌ಗಳನ್ನು ನೀಡಿರುವುದಾಗಿ ಅವರು ತಿಳಿಸಿದ್ದು, ಈ ಹೇಳಿಕೆಗಳ ವಿರುದ್ಧ ಶಿಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸಾಮೂಹಿಕ ನಿಂದನೆಗೆ ವಿರೋಧ: ಕೆಲವರ ತಪ್ಪಿಗೆ ಲಕ್ಷಾಂತರ ಪ್ರಾಮಾಣಿಕ ಸರ್ಕಾರಿ ಶಿಕ್ಷಕರನ್ನು ಸಾರ್ವಜನಿಕವಾಗಿ ಹೀಯಾಳಿಸುವುದು ಸರಿಯಲ್ಲ ಎಂದು ಶಿಕ್ಷಕರು ಖಂಡಿಸಿದ್ದಾರೆ.
ಅತಿಯಾದ ಕರ್ತವ್ಯದೊತ್ತಡ: ಬರಿ ದಾಖಲೆಗಳ ನಿರ್ವಹಣೆ, ಹಾಲು-ಮೊಟ್ಟೆ ಲೆಕ್ಕ ಹಾಗೂ ವಿವಿಧ ಕಾರ್ಯಾಗಾರಗಳ ಹೊರೆಯಿಂದಾಗಿ ತರಗತಿಯಲ್ಲಿ ಮುಕ್ತವಾಗಿ ಪಾಠ ಮಾಡಲು ಬಿಡುತ್ತಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ನಿಸ್ವಾರ್ಥ ಸೇವೆ: ವರ್ಷಪೂರ್ತಿ ರಜೆ ಹಾಕದೆ, ಅತ್ಯುತ್ತಮ ಫಲಿತಾಂಶ ನೀಡುತ್ತಿರುವ ನೂರಾರು ಶಿಕ್ಷಕರ ಮನಸ್ಸು ನೋಯಿಸುವಂತಹ ಹೇಳಿಕೆಗಳನ್ನು ನೀಡುವುದನ್ನು ಕೈಬಿಡಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಸಾರ್ವಜನಿಕವಾಗಿ ಸರ್ಕಾರಿ ಶಿಕ್ಷಕರ ದಕ್ಷತೆಯನ್ನು ಪ್ರಶ್ನಿಸುವ ಬದಲು, ಆಡಳಿತಾತ್ಮಕ ವ್ಯವಸ್ಥೆಯನ್ನು ಸುಧಾರಿಸುವ ಹಾಗೂ ಶಿಕ್ಷಕರಿಗೆ ನೆಮ್ಮದಿಯಿಂದ ಬೋಧಿಸಲು ತಕ್ಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.





Leave a comment