SUDDIKSHANA KANNADA NEWS/ DAVANAGERE/ DATE:28-11-2024
ದಾವಣಗೆರೆ: ಗ್ರಾಮೀಣ ಪರಿಸರದ ಹಲವು ವೈವಿಧ್ಯಮಯ ಜೀವನ ಶೈಲಿಯನ್ನು ಬಿಂಬಿಸುವ ಮತ್ತು ಮಕ್ಕಳಿಗೆ ಗ್ರಾಮೀಣ ಕಲೆ, ಸಂಸ್ಕೃತಿಯನ್ನು ದೃಶ್ಯದ ಮೂಲಕ ಪರಿಚಯ ಮಾಡಿಕೊಡುವ ಥೀಮ್ ಪಾರ್ಕ್ ಮತ್ತು ಗ್ರೀಕ್ ಶೈಲಿಯ ಕಲಾತ್ಮಕ ಬಯಲು ರಂಗ ಮಂದಿರಗಳನ್ನು ಸಾರ್ವಜನಿಕರ ವೀಕ್ಷಣೆಗೆ ಡಿಸೆಂಬರ್ 1ರಂದು ಮುಕ್ತಗೊಳಿಸಲಾಗುವುದು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.
ಥೀಮ್ ಪಾರ್ಕ್ನ ಬಯಲು ರಂಗ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆ ವರೆಗೆ ಥೀಮ್ ಪಾರ್ಕ್ ವೀಕ್ಷಿಸಬಹುದು. ದಾವಣಗೆರೆ ನಗರ ಮತ್ತು ಜಿಲ್ಲೆಯ ಏಕೈಕ ಆಕರ್ಷಣೆಯ ಕಲಾ ಕೇಂದ್ರ ಥೀಮ್ ಪಾರ್ಕ್ ಮತ್ತು ಬಯಲು ರಂಗ ಮಂದಿರಗಳು ದಾವಣಗೆರೆ ನಗರ ಮತ್ತು ಜಿಲ್ಲೆಯ ಏಕೈಕ ಆಕರ್ಷಣೆಯ ಕಲಾ ಕೇಂದ್ರವಾಗಿದೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಮನೊರಂಜನೆ ನೀಡುವ ಜೊತೆಗೆ ಸಾಂಪ್ರದಾಯಿಕ ಕೃಷಿ, ಇತರ ಹಳ್ಳಿಗಾಡಿನ ವೃತ್ತಿಗಳನ್ನು ಕಲೆ ಮತ್ತು ವಾಸ್ತುಶಿಲ್ಪದ ರೂಪಗಳ ಮೂಲಕ ಪ್ರದರ್ಶಿಸಿ, ಗ್ರಾಮೀಣ ಪರಿಸರದ ಪರಿಚಯ ಮಾಡಿಕೊಡುವ ಪ್ರಯತ್ನ ಇದಾಗಿದೆ. ಇಲ್ಲಿ ಕಲೆಯ ಮೂಲಕ ಕರ್ನಾಟಕದ ಗ್ರಾಮೀಣ ಜನರ ಜೀವನದ ಪರಿಚಯವನ್ನು ಸಂಯೋಜಿಸಲಾಗಿದೆ. ಮುಂದಿನ ಪೀಳಿಗೆಗೆ ದೊರಕಲಾಗದ ಅಕ್ಷರಗಳಲ್ಲಿ ತಿಳಿಸಲಾಗದ ಜೀವನ ಶೈಲಿ, ಆಟ, ಪಾಠ, ಆಚಾರ, ವೃತ್ತಿ-ವ್ಯವಹಾರ, ವಿಚಾರ, ಜನಪದರ ಬದುಕಿನ ವೈಪರಿಯನ್ನು ಇಲ್ಲಿ ಸೃಜನಾತ್ಮಕ ಕಲಾಕೃತಿಗಳು ವಿವರಿಸುತ್ತವೆ. ಗ್ರಾಮೀಣ ಬದುಕನ್ನು ಮತ್ತೆ ಕಟ್ಟಿ-ಕಟ್ಟುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.
ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಒಟ್ಟು ಎರಡು ಎಕರೆ ಜಾಗದಲ್ಲಿ ಥೀಮ್ ಪಾರ್ಕ್ ಮತ್ತು ಬಯಲು ರಂಗ ಮಂದಿರವನ್ನು ವಿನ್ಯಾಸಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕಲಾ ಗ್ಯಾಲರಿ, ಥೀಮ್ ಗಾರ್ಡನ್, ಕಲಾಕೃತಿಗಳ ವಸ್ತುಸಂಗ್ರಹಾಲಯ, ಚಿತ್ರಕಲೆಗಳ ಪ್ರದರ್ಶನದ ವ್ಯವಸ್ಥೆ ಮಾಡುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯಲ್ಲಿ ಆದಾಯದ ಉದ್ದೇಶವಿಲ್ಲ. ಆಸದರೆ ಪಾರ್ಕ್ ಮತ್ತು ಬಯಲು ರಂಗಮಂದಿರದ ಸ್ವಚ್ಛತೆ, ವಿದ್ಯುತ್ ಹಾಗೂ ಇತರ ನಿರ್ವಹಣೆ ವೆಚ್ಚಕ್ಕಾಗಿ 10ನೇ ತರಗತಿ ಒಳಗಿನ ಮಕ್ಕಳಿಗೆ 10ರೂಪಾಯಿ, ಸಾಮಾನ್ಯರಿಗೆ 20 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಬಯಲು ರಂಗ ಮಂದಿರವನ್ನು ಕಲಾ ತಂಡಗಳಿಗೆ 10ಸಾವಿರ ರೂಪಾಯಿ ಹಾಗೂ ವಾಣಿಜ್ಯಿಕ ಕಾರ್ಯಕ್ರಮಗಳಿಗೆ 20ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಥೀಮ್ ಪಾರ್ಕ್, ಬಯಲುರಂಗ ಮಂದಿರ ನಿರ್ಮಾಣ ಉದ್ದೇಶ:
ದಾವಣಗೆರೆ ಮಹಾನಗರ ಮತ್ತು ಜಿಲ್ಲೆಯಲ್ಲಿ ಕಲೆಯನ್ನು ಪ್ರಚಾರ ಮಾಡುವುದು ಮತ್ತು ಕಲಾಸಕ್ತಿ ಬೆಳೆಸುವುದು. ಕಲೆಯ ಮೂಲಕ ಸಮಾಜದಲ್ಲಿ ಮನೊರಂಜನೆ, ಕಲಾಭಿರುಚಿ ಬೆಳೆಸಿ, ಆರೋಗ್ಯಕರ ವಾತಾವರಣ ನಿರ್ಮಿಸುವುದು. ಗ್ರಾಮೀಣ ಜೀವನದ ಸಾಂಸ್ಕೃತಿಕ ಮೌಲ್ಯಗಳನ್ನು ಸಂರಕ್ಷಿಸುವುದು ಮತ್ತು ಉತ್ತೇಜಿಸುವುದು.
ವಿನಾಶದ ಅಂಚಿನಲ್ಲಿರುವ ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರದರ್ಶಿಸುವುದು. ಎಲ್ಲ ವರ್ಗದ ಜನರನ್ನು ಸಮಾನವಾಗಿ ಸಂತೋಷಪಡಿಸಲು ವಿಶಿಷ್ಟ ವಿನ್ಯಾಸದ ಕಲೆಗಳನ್ನು ರೂಪಿಸುವುದು. ನೈಜ, ಸೂಪರ್ ರಿಯಲಿಸ್ಟಿಕ್, ಆಧುನಿಕ ಮತ್ತು ಸಮಕಾಲೀನ ಶೈಲಿಯ ಶಿಲ್ಪ ಕಲೆಯ ಬಗ್ಗೆ ಸಾಮಾನ್ಯ ಜನರಿಗೆ ಶಿಕ್ಷಣ ನೀಡುವುದು. ಆಧುನಿಕತೆಯ ಒತ್ತಡದ ಜಂಜಾಟದ ನಡುವೆ ನೆಮ್ಮದಿಯ ವಾತಾವರಣ ನಿರ್ಮಿಸುವುದು ಎಂದು ಹೇಳಿದರು.
ಗೋಷ್ಟಿಯಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜೈರಾಜ್ ಎಂ.ಚಿಕ್ಕಪಾಟೀಲ್, ಸತೀಶ್ ವಲ್ಯೇಪುರೆ, ಬಾ.ಮಾ.ಬಸವರಾಜಯ್ಯ, ಎ.ಮಹಾಲಿಂಪಾಗಪ್ಪ, ,ಸಿದ್ದರಾಜು ಇದ್ದರು.