SUDDIKSHANA KANNADA NEWS/ DAVANAGERE/ DATE:12-02-2025
ದಾವಣಗೆರೆ: ಬಸ್ ಹತ್ತುವ ವೇಳೆ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಸುಮಾರು 28 ಗ್ರಾಂ ತೂಕದ ಮಾಂಗಲ್ಯ ಸರ, ನಗದು ಹಾಗೂ ಮೊಬೈಲ್ ಅನ್ನು ಕಳ್ಳತನ ಮಾಡಿರುವ ಘಟನೆ ಹೊನ್ನಾಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಗುತ್ತೂರು ಗ್ರಾಮದ ಪುಷ್ಪಾವತಿ ಪ್ರಭುದೇವ್ ಎಂಬುವವರ ಬಂಗಾರದ ಸರ, ನಗದು ಹಾಗೂ ಮೊಬೈಲ್ ಕಳ್ಳತನ ಆಗಿದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೊನ್ನಾಳಿಗೆ ಹರಿಹರ ತಾಲೂಕಿನ ಗುತ್ತೂರು ಗ್ರಾಮದಿಂದ ಬಂದಿದ್ದ ಪುಷ್ಪವತಿ ಅವರು ಬಸವಾಪಟ್ಟಣ ಸಮೀಪದ ದಾಗಿನಕಟ್ಟೆ ಗ್ರಾಮಕ್ಕೆ ಹೋಗಲು ಖಾಸಗಿ ಬಸ್ ಹತ್ತಲು ಬಂದಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಬಸ್ ಹತ್ತಿದ ಬಳಿಕ ವ್ಯಾನಿಟಿ ಬ್ಯಾಗ್ ನೋಡಿದಾಗ ಅದರ ಜಿಪ್ ತೆರೆದಿರುವುದು ಗೊತ್ತಾಗಿದೆ.
ಬ್ಯಾಗ್ ನಲ್ಲಿದ್ದ ನಗದು, ಮಾಂಗಲ್ಯ ಸರ ಮತ್ತು ಮೊಬೈಲ್ ಕಳುವಾಗಿದ್ದು ಗಮನಕ್ಕೆ ಬಂದಿದೆ. ಕೂಡಲೇ ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.