SUDDIKSHANA KANNADA NEWS/ DAVANAGERE/ DATE:01-02-2024
ದಾವಣಗೆರೆ: ಲೋಕಸಭಾ ಚುನಾವಣೆಗೆ ಬಿಜೆಪಿ ಸಕಲ ಸಿದ್ದತೆ ಮಾಡಿಕೊಂಡಿದೆ. ಮಧ್ಯಂತರ ಬಜೆಟ್ ಅನ್ನು ಮಂಡನೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವು ಜನಪರ ಘೋಷಣೆ ಮಾಡಿ ಮತದಾರರ ಮನಗೆಲ್ಲಲು ಪ್ರಯತ್ನಿಸುತ್ತಿದೆ. ಆದ್ರೆ, ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್ ಬಡಿದಾಟ ಜೋರಾಗಿದೆ.
ಬೆಂಗಳೂರಿನಲ್ಲಿ ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್ ಸೇರಿದಂತೆ ಹಲವು ನಾಯಕರು ಸರ್ವೇ ನಡೆಸಿ ಟಿಕೆಟ್ ನೀಡಿ ಎಂದು ಪಟ್ಟು ಹಿಡಿದು ಶಕ್ತಿ ಪ್ರದರ್ಶನ ಮಾಡಿತ್ತು. 500 ಕ್ಕೂ ಹೆಚ್ಚು ಬಿಜೆಪಿ ಮುಖಂಡರು, ಕಾರ್ಯಕರ್ತರು ಹೋಗಿದ್ದರು. ಆದ್ರೆ, ಈಗ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಬಣವೂ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದೆ. ಮಾತ್ರವಲ್ಲ, ಜಿಎಂಐಟಿಯಲ್ಲಿ ಸಭೆ ಸೇರಿ ಒಕ್ಕೊರಲನಿಂದ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ ಪ್ರಸಂಗವೂ ನಡೆದಿದೆ.
ಸಿದ್ದೇಶ್ವರ ಪರ ಬ್ಯಾಟಿಂಗ್
ಜಿಎಂಐಟಿಯಲ್ಲಿ ಸೇರಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಿದ್ದೇಶ್ವರ ಅವರಿಗೆ ಟಿಕೆಟ್ ಘೋಷಿಸಬೇಕು. ಕಳೆದ ನಾಲ್ಕು ಬಾರಿ ಸಿದ್ದೇಶ್ವರ ಅವರು ಜಯಶಾಲಿಯಾಗಿದ್ದರೆ, ಅವರ ತಂದೆ ಎರಡು ಬಾರಿ ಗೆದ್ದಿದ್ದಾರೆ. ದಾವಣಗೆರೆ ಜಿಲ್ಲೆ ರಚನೆಯಾದ ಬಳಿಕ ಕಾಂಗ್ರೆಸ್ ಒಮ್ಮೆಯೂ ಗೆದ್ದಿಲ್ಲ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದರೂ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ, ದಾವಣಗೆರೆ ಲೋಕಸಭಾ ವಿಚಾರಕ್ಕೆ ಬಂದರೆ ಬಿಜೆಪಿಯ ಭದ್ರಶಾಲಿ, ಭದ್ರಕೋಟೆಯಾಗಿದೆ. ಈ ಬಾರಿ ಗೊಂದಲ ಹುಟ್ಟುಹಾಕುವಂತ ಕೆಲಸವನ್ನು ಕೆಲ ನಾಯಕರು ಮಾಡುತ್ತಿದ್ದು ಕಾರ್ಯಕರ್ತರು ಸೊಪ್ಪು ಹಾಕಬಾರದು ಎಂದು ಸಭೆಯು ಒಕ್ಕೊರಲನಿಂದ ನಿರ್ಧರಿಸಿದೆ.
ಯಾರ್ಯಾರಿದ್ದರು..?
ಹರಿಹರ ಶಾಸಕ ಬಿ. ಪಿ. ಹರೀಶ್, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ದೇವರಮನಿ ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಎಸ್. ಟಿ. ವೀರೇಶ್, ಆರ್. ಶಿವಾನಂದ್, ಮಾಜಿ ಮೇಯರ್ ಎಸ್. ಡಿ. ಉಮಾ ಪ್ರಕಾಶ್, ಉಪಮೇಯರ್ ಯಶೋಧಾ ಯೋಗೇಶ್, ವಿಪಕ್ಷ ನಾಯಕ ಪ್ರಸನ್ನಕುಮಾರ್, ಮಾಜಿ ಉಪಮೇಯರ್ ಪಿ. ಎಸ್. ಜಯಣ್ಣ, ಬಿಜೆಪಿ ಮುಖಂಡರಾದ ಬಿ. ಎಸ್. ಜಗದೀಶ್, ಶ್ರೀನಿವಾಸ್ ದಾಸಕರಿಯಪ್ಪ, ವೀರೇಶ್ ಹನಗವಾಡಿ, ಕೊಂಡಜ್ಜಿ ಜಯಪ್ರಕಾಶ್, ವಕೀಲ ರಾಘವೇಂದ್ರ ಮೊಹರೆ, ಶಿವಾಜಿ ರಾವ್, ಪಿ. ಎಸ್. ಬಸವರಾಜ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ಶಿವಾಜಿ ರಾವ್, ಸುರೇಶ್ ಗಂಡಗಾಳೆ, ಬಾಡದ ಆನಂದರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 500ಕ್ಕೂ ಹೆಚ್ಚು ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬಿಜೆಪಿ ಪಕ್ಷ ದಾವಣಗೆರೆ ಜಿಲ್ಲೆಯಲ್ಲಿ ಶಕ್ತಿಶಾಲಿಯಾಗದಿದ್ದಾಗ ಪಕ್ಷಕ್ಕೆ ನವಚೈತನ್ಯ ತಂದವರು ದಿವಂಗತ ಜಿ. ಮಲ್ಲಿಕಾರ್ಜುನಪ್ಪ ಅವರು. ಅವರ ನಂತರ ಸಿದ್ದೇಶ್ವರ ಅವರೂ ಅದನ್ನು ಮುಂದುವರಿಸಿಕೊಂಡು ಹೋದರು. ಈ ಬಾರಿ ರಾಮ ಮಂದಿರ ಉದ್ಘಾಟನೆ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಿದೆ. ದೇಶದಲ್ಲಿಯೇ ಬಿಜೆಪಿ ಪರವಾದ ಅಲೆ ಇದೆ. ಆದರೆ, ದಾವಣಗೆರೆಯಲ್ಲಿ ವಿನಾಃಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಮೋದಿ ಅವರ ಜನಪ್ರಿಯತೆಗೆ ಕಾಂಗ್ರೆಸ್ ಪಕ್ಷ, ಮುಖಂಡರು, ಕಾರ್ಯಕರ್ತರೇ ಹೆದರಿದ್ದಾರೆ. ಇಂಥ ಹೊತ್ತಿನಲ್ಲಿ ಗೊಂದಲ ಹುಟ್ಟುಹಾಕುತ್ತಿರುವ ಕುರಿತಂತೆ ಬಿಜೆಪಿ ಕಾರ್ಯಕರ್ತರು ಹುಷಾರಾಗಿರಬೇಕು. ಪಕ್ಷ ಮುಖ್ಯ, ವ್ಯಕ್ತಿ ಮುಖ್ಯ ಅಲ್ಲ. ಪಕ್ಷಕ್ಕಾಗಿ ಕಾರ್ಯಕರ್ತರು ದುಡಿಯುತ್ತಲೇ ಇದ್ದಾರೆ. ಹಾಗಾಗಿ, ಗೊಂದಲ ಹುಟ್ಟು ಹಾಕುವುದು ಬೇಡ. ನಮ್ಮ ಅಭಿಪ್ರಾಯ ತಿಳಿಸೋಣ. ರೇಣುಕಾ ಮಂದಿರದಲ್ಲಿ ಕಾರ್ಯಕ್ರಮವೊಂದನ್ನು ಮಾಡೋಣ. ಈ ಮೂಲಕ ರಾಜ್ಯ ಹಾಗೂ ಕೇಂದ್ರ ವರಿಷ್ಠರಿಗೆ ಅಭಿಪ್ರಾಯ ತಿಳಿಸೋಣ ಎಂಬ ಸಲಹೆಯೂ ಬಂತು.
ಟಿಕೆಟ್ ನೀಡೋದು ಹೈಕಮಾಂಡ್
ಇನ್ನು ಟಿಕೆಟ್ ನೀಡುವುದು ಹೈಕಮಾಂಡ್. ಅವರಿಗೆ ಬಿಡೋಣ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡೋಣ. ಸದ್ಯಕ್ಕೆ ನಾಲ್ಕು ಬಾರಿ ಸಂಸದರಾಗಿ ಸೋಲಿಲ್ಲದ ಸರದಾರರಾಗಿರುವ ಸಿದ್ದೇಶ್ವರ್ ಅವರ ಪರ ನಾವೆಲ್ಲರೂ ನಿಲ್ಲೋಣ. ಅವರಿಗೆ ಟಿಕೆಟ್ ನೀಡಿದರೆ ಈ ಬಾರಿ ಗೆಲುವು ಖಚಿತ. ಗೊಂದಲ ಹುಟ್ಟು ಹಾಕಿದರೆ ಪಕ್ಷಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನೆಡೆ ಆಗುತ್ತದೆ. ಏನೇ ಸಮಸ್ಯೆ ಇದ್ದರೂ ಕುಳಿತು ಚರ್ಚಿಸೋಣ. ಕಾರ್ಯಕರ್ತರಲ್ಲಿ ಗೊಂದಲ, ಅನುಮಾನ ಹುಟ್ಟು ಹಾಕುವಂಥ ಪ್ರಸಂಗಕ್ಕೆ ಕಡಿವಾಣ ಹಾಕೋಣ ಎಂಬ ಅಭಿಪ್ರಾಯವೂ ಕೇಳಿ ಬಂತು.
ಹೊಗಳಿದವರೇ ವಿರುದ್ಧ ಕೆಲಸ ಮಾಡ್ತಿದ್ದಾರೆ
ಈ ಹಿಂದೆ ಸಿದ್ದೇಶ್ವರ ಅವರನ್ನೂ ಮನದುಂಬಿ ಹೊಗಳಿದ್ದಾರೆ. ಅವರ ಆಶೀರ್ವಾದವನ್ನೂ ಪಡೆದಿದ್ದಾರೆ. ಈಗ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಎಂ. ಪಿ. ರೇಣುಕಾಚಾರ್ಯ ಸೇರಿದಂತೆ ಹಲವರು ಮೂರು ತಿಂಗಳಿನಿಂದ ಓಡಾಡುತ್ತಿದ್ದಾರೆ. ಸರ್ವೇ ಆಧರಿಸಿ ಟಿಕೆಟ್ ನೀಡಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ವರ್ಷಗಳು ಇಲ್ಲದ ಸಂಪ್ರದಾಯ ಈಗ ಯಾಕೆ ಬಂತು? ಎಂಬುದೇ ಗೊತ್ತಾಗುತ್ತಿಲ್ಲ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಜಿಲ್ಲೆಗಳವರು ಈಗಲೂ ಸ್ಪರ್ಧೆ ಮಾಡುತ್ತಿದ್ದಾರೆ. ಇದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ. ಈ ಕಾರಣದಿಂದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ ಕಾದು ನೋಡೋಣ. ಸಿದ್ದೇಶಣ್ಣ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದಾರೆ. ಇದುವರೆಗೆ ಒಮ್ಮೆಯೂ ಸೋಲು ಕಂಡಿಲ್ಲ. ಹಾಗಾಗಿ, ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಕಷ್ಟವಾಗದು ಎಂಬುದನ್ನು ವರಿಷ್ಠರಿಗೆ ತಿಳಿಸೋಣ. ಎಲ್ಲರೂ ಇದಕ್ಕೆ ಸಮ್ಮತಿಸುತ್ತೀರಾ ಎಂಬ ಪ್ರಶ್ನೆಗೆ ಹೌದು ಎಂಬ ಉತ್ತರ ಸಭೆಯಲ್ಲಿ ಬಂತು.
ನಾವೂ ಹೋಗೋಣ
ಒಂದು ವೇಳೆ ಬೆಂಗಳೂರಿಗೆ ತೆರಳಿ ಸಿದ್ದೇಶ್ವರ ಪರ ಶಕ್ತಿ ಪ್ರದರ್ಶನ ಮಾಡುವುದಾದರೂ ಹೋಗೋಣ. ನಾವು ಸಾವಿರಾರು ಸಂಖ್ಯೆಯಲ್ಲಿ ಇದ್ದೇವೆ. ಮಹಾನಗರ ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರಿದ್ದೇವೆ. ಅಲ್ಲಿಗೆ ಹೋಗಿ ಭೇಟಿಯಾಗಿ ನಾವು ಅಭಿಪ್ರಾಯ ತಿಳಿಸೋಣ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡೋಣ ಮಾತನಾಡೋಣ. ಮಾತ್ರವಲ್ಲ, ವಿಧಾನಸಭೆ ಚುನಾವಣೆಯ ಬಳಿಕ ಜಿಲ್ಲೆಯಲ್ಲಿ ಏನೇನಾಗಿದೆ? ಯಾವ್ಯಾವ ನಾಯಕರು ಏನು ಮಾಡಿದ್ದಾರೆ? ಕಾಂಗ್ರೆಸ್ ಪಕ್ಷದ ಮುಖಂಡರ ಮನೆಗೆ ಯಾರ್ಯಾರು ಹೋಗಿದ್ದಾರೆ? ಪಕ್ಷಕ್ಕೆ ಹಾನಿಯಾಗುವ ಕುರಿತಂತೆ ಏನೆಲ್ಲಾ ಮಾತನಾಡಿದ್ದಾರೆ? ಏನೆಲ್ಲಾ ಬೆಳವಣಿಗೆಗಳು ಆಗಿವೆ ಎಂಬ ಕುರಿತಂತೆ ಸಮಗ್ರ ಮಾಹಿತಿ ನೀಡೋಣ ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದವು.
ರೇಣು ಬಣ ಏನು ಆಗ್ರಹಿಸಿತ್ತು…?
ಕಾರ್ಯಕರ್ತರನ್ನು ಕಡೆಗಣಿಸಿ ಕೆಂಗಣ್ಣಿಗೆ ಗುರಿಯಾಗಿ ಅಭಿವೃದ್ಧಿಯನ್ನೂ ಮಾಡದ ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಜಿ.ಎಂ.ಸಿದ್ದೇಶ್ವರ್ ಗೆ ಟಿಕೆಟ್ ನೀಡಬಾರದೆಂದು ಜಿಲ್ಲಾ ಮುಖಂಡರ ನಿಯೋಗ ಪಕ್ಷದ ಪ್ರಮುಖರಿಗೆ ಮನವಿ ಮಾಡಿತ್ತು. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ದಾವಣಗೆರೆ ಜಿಲ್ಲಾ ಮುಖಂಡರ ಬಿಜೆಪಿ ನಿಯೋಗ ಜಿ.ಎಂ ಸಿದ್ದೇಶ್ವರ್ ಗೆ ಟಿಕೆಟ್ ನೀಡಬಾರದೆಂದು ಮನವರಿಕೆ ಮಾಡಿಕೊಟ್ಟಿತ್ತು.
ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಮಾಜಿ ಶಾಸಕ ಗುರುಸಿದ್ದನ ಗೌಡ್ರು, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಶಿವಯೋಗಿ ಸ್ವಾಮಿ, ಮುಖಂಡರಾದ ಮಾಡಾಳ್
ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಅಜಯ್‍ಕುಮಾರ್ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಯಾವುದೇ ಕಾರಣಕ್ಕೂ ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಬಾರದೆಂದು ಆಗ್ರಹಿಸಿದ್ರು.
ಮೊದಲು ದವಳಗಿರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಿಯೋಗವು, ಸಿದ್ದೇಶ್ವರ್ ಅವರಿಗೆ ಏಕೆ ಟಿಕೆಟ್ ನೀಡಬಾರದೆಂದು ಸವಿಸ್ತಾರವಾಗಿ ಮನವಿ ಮಾಡಿಕೊಟಿತ್ತು. ಜಿಲ್ಲೆಯಲ್ಲಿ ಸಿದ್ದೇಶ್ವರ್ ಸ್ಪರ್ಧೆಗೆ ವಿರೋಧವಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕರ್ತರ ವಿರೋಧವಿದೆ. ನಾಲ್ಕು ಬಾರಿ ಗೆದಿದ್ದರೂ ಜಿಲ್ಲೆಯನ್ನು ಅಭಿವೃದ್ಧಿಪಡಿಸಿಲ್ಲ ಎಂಬ ಆರೋಪವಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ. ಹೀಗಾಗಿ ಈ ಬಾರಿ ಅವರಿಗೆ ಟಿಕೆಟ್ ನೀಡಬಾರದು. ಒಂದು ವೇಳೆ ಅವರಿಗೆ ಟಿಕೆಟ್ ನೀಡಿದರೆ ಸೋಲುವ ಸಾಧ್ಯತೆ ಇದೆ ಎಂದು ತಿಳಿಸಿತ್ತು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದೇಶ್ವರ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡದೆ ಕೆಲವು ಕಡೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಗೂ ಕಾರಣಕರ್ತರಾಗಿದ್ದಾರೆ. ಅವರ ಸ್ಪರ್ಧೆಗೆ ಎಲ್ಲೆಡೆ ವಿರೋಧ ಇರುವುದರಿಂದ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದೆಂದು ಹಕ್ಕೊತ್ತಾಯ ಮಂಡಿಸಲಾಗಿತ್ತು. ಅದೇ ದಿನ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿದ ನಿಯೋಗವು, ಸಿದ್ದೇಶ್ವರ್ ಗೆ ಟಿಕೆಟ್ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ದಾವಣಗೆರೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದ ಎಸ್. ಎ. ರವೀಂದ್ರನಾಥ್ ಅವರು ಸಿದ್ದೇಶ್ವರ ವಿರೋಧಿ ಬಳಗದಲ್ಲಿ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು. 50 ವರ್ಷಗಳಿಂದಲೂ ಹೆಚ್ಚು ರಾಜಕೀಯ ಅನುಭವ ಹೊಂದಿರುವ ರವೀಂದ್ರನಾಥ್ ಅವರು ಜಿಲ್ಲೆಯಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಯಾರೂ ಮಾತನಾಡಲ್ಲ. ಆದ್ರೆ, ಅಂಥ ಹಿರಿಯರೇ ಹೋಗಿರುವುದು ಯಡಿಯೂರಪ್ಪ, ಬಿ. ವೈ. ವಿಜಯೇಂದ್ರ ಅವರಿಗೆ ತಲೆನೋವು ತಂದಿದೆ. ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಶಿವಯೋಗಿಸ್ವಾಮಿ ಸೇರಿದಂತೆ ಮಾಜಿ ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ವಿಧಾನಸಭೆ ಪರಾಜಿತ ಅಭ್ಯರ್ಥಿಗಳು ಹೋಗಿದ್ದು ಸಮಸ್ಯೆ ತೀವ್ರತೆಗೆ ಸಾಕ್ಷಿಯಾಗಿತ್ತು. ಈಗ ಎರಡೂ ಬಣಗಳ ಬಡಿದಾಟಕ್ಕೆ ಕಾರ್ಯಕರ್ತರು ಕಂಗೆಡುವಂತಾಗಿದೆ.