SUDDIKSHANA KANNADA NEWS/ DAVANAGERE/ DATE:31-10-2024
ದಾವಣಗೆರೆ: ದೀಪಗಳ ಹಬ್ಬ ದೀಪಾವಳಿ. ಎಲ್ಲೆಲ್ಲೂ ಪಟಾಕಿಗಳ ಸದ್ದು. ಜೊತೆಗೆ ದೀಪಗಳ ಬೆಳಕಿನ ಚಿತ್ತಾರ.. ನೋಡುಗರಿಗೆ ಸಿಗುತ್ತೆ ಸೊಬಗಿನ ವೈಯ್ಯಾರ.. ಬೆಳಕಿನಾಟದಲ್ಲಿ ಮಿಂದೆದ್ದ ವಿದ್ಯಾರ್ಥಿಗಳು. ಹೊಸ ಲೋಕವನ್ನೇ ಸೃಷ್ಟಿಸಿದ್ದ ವಿದ್ಯಾರ್ಥಿಗಳ ಕೈಚಳಕ ವರ್ಣಿಸಲು ಪದಪುಂಜ ಸಾಲದು.
ಹೌದು. ಇಂಥದ್ದೊಂದು ಡಿಫರೆಂಟ್ ದೀಪಾವಳಿ ಹಬ್ಬ ನಡೆದಿದ್ದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿಯ ಪಬ್ಲಿಕ್ ಶಾಲೆಯಲ್ಲಿ. ಮನಸ್ಸಿನ ಕತ್ತಲೆ ತೊಡೆದು ಬೆಳಕಿನೆಡೆಗೆ ಸಾಗುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ಆಚರಿಸುವ ದೀಪಾವಳಿ ಹಬ್ಬ ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ವಿಶೇಷವಾಗಿ ನಡೆಯಿತು.
ಬಹಳ ವಿಜೃಂಭಣೆಯಿಂದ ದೀಪಾವಳಿ ಜರುಗಿತು. ಶಾಲಾ ಶಿಕ್ಷಕರಾದ ಎನ್. ರಾಜ, ಸುಗಾರ, ಆಯಿಷಾ ಬಾನು, ನಿತ್ಯವತಿ, ಶಾಲಾ ಪ್ರಾಂಶುಪಾಲರನ್ನು ಒಳಗೊಂಡ ತಂಡದ ನೇತೃತ್ವದಲ್ಲಿ ಪೂರ್ವ ನಿಯೋಜನೆಯೊಂದಿಗೆ ಈ ಕಾರ್ಯಕ್ರಮ ವ್ಯವಸ್ಥಿತವಾಗಿ ನೆರವೇರಿತು.
ಶಿಕ್ಷಕಿ ಸವಿತಾ ಬೇಗೂರು, ಸಂಗೀತ ಹಾಗೂ ರಾಗಿಣಿ ಅವರು ಲಕ್ಷ್ಮಿ ಪೂಜೆಯನ್ನು ನೆರವೇರಿಸಿ, ಪ್ರಸಾದ ವಿನಿಯೋಗ ಮಾಡಿದ ನಂತರ ಶಿಕ್ಷಕರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಸಹಯೋಗದೊಂದಿಗೆ ಆರು ಗುಂಪುಗಳಲ್ಲಿ ದೀಪ ಬೆಳಗಿಸುವ ಹಾಗೂ ಹಸಿರು ಪಟಾಕಿ ಹಚ್ಚಿದ್ದು ಕಾರ್ಯಕ್ರಮಕ್ಕೆ ರಂಗು ತಂತು.
ದಸರಾದಲ್ಲಿ ಮೈಸೂರು ಅರಮನೆಯಂತೆ ಕಂಗೊಳಿಸಿದ ಶಾಲಾ ಆವರಣವು ಎಲ್ಲರ ಕಣ್ಮನ ಸೆಳೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಡಿವೈಎಸ್ಪಿ ಪ್ರಕಾಶ್ ಅವರು ದೀಪ ಬೆಳಗಿಸಿ, ದೀಪಾವಳಿ ಆಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿ, ಸುರಕ್ಷತಾ ಕ್ರಮಗಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿ ಎಂಬ ಕಿವಿ ಮಾತು ಹೇಳಿದರು.
ಶಾಲಾ ಪ್ರಾಂಶುಪಾಲರಾದ ಯತೀಶ್ ಎಚ್. ವಿ. ಅವರು ದೀಪಾವಳಿ ಹಬ್ಬದ ಆಚರಣೆಯ ಸಾಂಪ್ರದಾಯಿಕ ಹಿನ್ನೆಲೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಪೋಷಕರು ಶಾಲೆಯಲ್ಲಿ ದೀಪಾವಳಿ ಆಚರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶಿಕ್ಷಕರ ಪರಿಶ್ರಮವನ್ನು ಶ್ಲಾಘಿಸಿದರು. ಮಾತ್ರವಲ್ಲ, ಬೆಳಕಿನ ಲೋಕದಲ್ಲಿ ಮಿಂದೆದ್ದರು.