SUDDIKSHANA KANNADA NEWS/ DAVANAGERE/ DATE:16-03-2025
ದಾವಣಗೆರೆ: ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಹೆಚ್. ಕಡದಕಟ್ಟೆ ಬಳಿ ಬಂಧಿಸಲಾಗಿರುವ ನಾಲ್ವರು ಕುಖ್ಯಾತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇವರ ಹಿಸ್ಟರಿಯೇ ಭಯಾನಕವಾಗಿದೆ. ಮಾತ್ರವಲ್ಲ, ಸಂಭವಿಸಬಹುದಾಗಿದ್ದ ಬ್ಯಾಂಕ್ ದರೋಡೆ ತಡೆಗಟ್ಟುವಲ್ಲಿ ಜಿಲ್ಲಾ ಪೊಲೀಸ್ ತಂಡ ಯಶಸ್ವಿಯಾಗಿದೆ.
ನ್ಯಾಮತಿ ಪೊಲೀಸ್ ನಿರೀಕ್ಷಕ ರವಿ ಎನ್. ಎಸ್. ಹಾಗೂ ಹೊನ್ನಾಳಿ ಪೊಲೀಸ್ ಠಾಣೆಯ ಪಿಎಸ್ಐ ಸಂಜೀವ ಕುಮಾರ, ಪಿಎಸ್ಐ ಸಾಗರ್ ಅತ್ತರವಾಲ, ಡಿಸಿಆರ್ ಬಿ ಘಟಕದ ಸಿಬ್ಬಂದಿ ಮತ್ತು ನ್ಯಾಮತಿ ಪೊಲೀಸ್ ಠಾಣೆಯ ಸಿಬ್ಬಂದಿಗಳನ್ನೊಳಗೊಂಡ 2 ತಂಡಗಳ ಕಾರ್ಯಾಚರಣೆ ನಿಜಕ್ಕೂ ರೋಚಕ. ಅತಿರೋಚಕ. ಎರಡು ಕಾರುಗಳಲ್ಲಿ ಬಂದಿದ್ದ ದರೋಡೆಕೋರರನ್ನು ಬಂಧಿಸಿದ ಪರಿ ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಮೆಚ್ಚುಗೆಗೆ ಪಾತ್ರವಾಗಿದೆ.
ಹೊನ್ನಾಳಿ ಠಾಣಾ ವ್ಯಾಪ್ತಿಯ ಹೆಚ್. ಕಡದಕಟ್ಟೆ ನಾಕ ಬಂದಿ ಬಳಿ ಹೊನ್ನಾಳಿ ಕಡೆಯಿಂದ ಅತೀವೇಗವಾಗಿ ಬರುತ್ತಿದ್ದ ಎರಡು ಕಾರುಗಳನ್ನು ಚೆಕ್ ಪೋಸ್ಟ್ ನಲ್ಲಿದ್ದ ಪೊಲೀಸರು ಪರಾರಿಯಾಗುತ್ತಿದ್ದ ಖತರ್ನಾಕ್ ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಹಿಡಿದಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಬಂದರೂ ಅಂಜದೇ, ಅಳುಕದೇ ಫೈರಿಂಗ್ ಮಾಡಿ ದರೋಡೆಕೋರರ ಹುಟ್ಟಡಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಲ್ಲೆಲ್ಲಿ ಕಳ್ಳತನ ಮಾಡಿದ್ದರು?
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಳ್ಳಿ ಠಾಣೆ ವ್ಯಾಪ್ತಿಯಲ್ಲಿ 3 ಕೋಟಿ, 18 ಲಕ್ಷ, 96 ಸಾವಿರದ 508 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, 14 ಲಕ್ಷ 86 ಸಾವಿರ, 432 ರೂಪಾಯಿ ನಗದು ಹಣ ಒಟ್ಟು -3,33,82,940- ರೂ ಮೌಲ್ಯದ ಸ್ವತ್ತು
ಕದ್ದಿದ್ದರು.
ಕೊಪ್ಪಳ ಜಿಲ್ಲೆ ಬೆವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಕೋಟಿ, 46ಲಕ್ಷ, 56 ಸಾವಿರದ 905 ರೂಪಾಯಿ ಮೌಲ್ಯದ 3ಕೆಜಿ 761 ಗ್ರಾಂ ಬಂಗಾರದ ಆಭರಣಗಳು ಹಾಗೂ 21.75 ಲಕ್ಷ ನಗದು ಹಣ ಒಟ್ಟು 1,46,55,905 ಮೌಲ್ಯದ ಸ್ವತ್ತು ಕದ್ದಿದ್ದರು.
ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಆರೋಪಿತರಾಗಿದ್ದಾರೆ.
ಹೊಸ ಪ್ರಕರಣಗಳು ಪತ್ತೆ!
ಶಿವಮೊಗ್ಗ ಜಿಲ್ಲೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸ್ ಬಿ ಐ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ 1,25,000 ಮೌಲ್ಯದ ಕ್ಯಾಮೆರಾ, ಡಿವಿಆರ್, ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡಿದ್ದರು.
ಹಾವೇರಿ ಜಿಲ್ಲೆ ತಡಸ ಪೊಲೀಸ್ ಠಾಣೆ ವ್ಯಾಪ್ಚಿಯಲ್ಲಿ ದಾಖಲಾಗಿರುವ ಜ್ಯೂವೆಲ್ಲರಿ ಶಾಪ್ ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ 1,55,000 ಮೌಲ್ಯದ ಬೆಳ್ಳಿಯ ಮತ್ತು ರೋಲ್ಡ್ ಗೋಲ್ಡ್ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದರು
ಯಾವ್ಯಾವ ರಾಜ್ಯಗಳಲ್ಲಿ ಕಳವು?
ತಮಿಳುನಾಡಿನ ಕೃಷ್ಣಗಿರಿಯ ಬೆರಿಗಾಯಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಯತ್ನ ಪ್ರಕರಣದಲ್ಲಿ ಆರೋಪಿತರಾದ ಗುಡ್ಡು ಕಾಲಿಯ ಮತ್ತು ಹಜರತ್ ಅಲಿ ಭಾಗಿಯಾಗಿದ್ದಾರೆ. 2025ರ ಫೆಬ್ರವರಿ ತಿಂಗಳಿನಲ್ಲಿ ಜಾರ್ಖಂಡ್ ರಾಜ್ಯದ ಪಲಮು ಜಿಲ್ಲೆಯಲ್ಲಿ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.