SUDDIKSHANA KANNADA NEWS/ DAVANAGERE/ DATE:27-03-2025
ದಾವಣಗೆರೆ: ಕಲ್ಲು ಎಸೆದು ಪರಾರಿಯಾಗಲು ಯತ್ನಿಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ದಾವಣಗೆರೆ ತಾಲೂಕಿನ ತೋಳಹುಣಸೆ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ಪಿ. ಗೊಲ್ಲರಹಳ್ಳಿಯ ನವೀನ್ (31) ಕಾಲಿಗೆ ಗುಂಡು ತಗುಲಿದ್ದು, ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದರೋಡೆ ಪ್ರಕರಣದ ಆರೋಪಿಯಾದ ನವೀನ್ ನನ್ನು ಸ್ಥಳ ಮಹಜರುಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಕಲ್ಲು ತೂರಾಟ ನಡೆಸಿ ತಪ್ಪಿಸಿಕೊಳ್ಳಲು ನವೀನ್ ಯತ್ನಿಸಿದ್ದಾನೆ.
ಬುಧವಾರ ರಾತ್ರಿ ಸ್ಥಳ ಮಹಜರು ಮಾಡಲು ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯ ಸಿಪಿಐ ಶಿಲ್ಪಾ ನೇತೃತ್ವದ ತಂಡವು ಮುಂದಾಗಿತ್ತು. ಈ ವೇಳೆ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ ಆರೋಪಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಮನವಿ ಮಾಡಿದರೂ ಕೇಳಿಲ್ಲ. ಕಲ್ಲು ಎಸೆಯುವುದನ್ನು ಮುಂದುವರಿಸಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಲಾಗಿದೆ. ಆದರೂ ಕೇಳಿಲ್ಲ. ಈ ವೇಳೆ ಸಿಪಿಐ ಶಿಲ್ಪಾ ಹಾಗೂ ಕಾನ್ ಸ್ಟೇಬಲ್ ಚಂದ್ರಶೇಖರ್ ಗಾಯಗೊಂಡರು. ಕೂಡಲೇ ಪಿಸ್ತೂಲ್ ತೆಗೆದ ಶಿಲ್ಪಾ ಅವರು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ.
ಅತ್ಯಾಚಾರ, ಕೊಲೆ, ದರೋಡೆ ಸೇರಿದಂತೆ ಆರೋಪಿ ವಿರುದ್ದ 51 ಪ್ರಕರಣಗಳು ದಾಖಲಾಗಿದ್ದು, ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದು ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ. ಈತ ಹಿನ್ನೆಲೆಯೇ ಭಯಾನಕವಾಗಿದ್ದು,ಆರೋಪಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.