ಹೈದರಾಬಾದ್: ತೆಲಂಗಾಣದ ರಾಜಕೀಯ ಮತ್ತು ಉದ್ಯಮ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಘಟನೆಯೊಂದರಲ್ಲಿ, ಹೈದರಾಬಾದ್ ಮೂಲದ ‘ಮಿಥುನಾ ಆಡ್ಸ್’ ಜಾಹೀರಾತು ಸಂಸ್ಥೆಯ ಮಹಿಳಾ ಉದ್ಯಮಿ ಕೆ. ಶೋಭಾ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಆಪ್ತನೆನ್ನಲಾದ ವ್ಯಕ್ತಿಯೊಬ್ಬರ ವಿರುದ್ಧ ಗಂಭೀರ ಲೈಂಗಿಕ ಕಿರುಕುಳ ಮತ್ತು ದುಡಿತದ ಶೋಷಣೆಯ ಆರೋಪ ಮಾಡಿದ್ದಾರೆ. ಮಾತ್ರವಲ್ಲ, ಈ ಸಂಬಂಧ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
@revanth_anumula @TelanganaCMO CM Sir Please help me 🙏 pic.twitter.com/ffytZXCQef
— shobhareddykalvala (@shobhareddyk) September 20, 2026
ಕಳೆದ ಮೂರು ವರ್ಷಗಳಿಂದ ಹೊರಾಂಗಣ ಜಾಹೀರಾತು ರಂಗದಲ್ಲಿ ನಿಯಮಾನುಸಾರ ಅವಕಾಶಗಳಿಗಾಗಿ ಹೋರಾಡುತ್ತಿರುವ ಶೋಭಾ ರೆಡ್ಡಿ, ಸರ್ಕಾರಕ್ಕೆ ಆದಾಯ ಹಂಚಿಕೆ ಮಾದರಿಯ ತಾತ್ಕಾಲಿಕ ಯೋಜನೆಗಳನ್ನು ಸಲ್ಲಿಸಿದ್ದರು. ಆದರೆ ತಮ್ಮ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಪ್ರಯತ್ನಿಸಿದಾಗ, ಸಿಎಂ ಅವರ ಅತ್ಯಂತ ಆಪ್ತ ಎಂದು ಹೇಳಲಾದ ವ್ಯಕ್ತಿಯೊಬ್ಬರು, “ವಿಷಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಗೇಸ್ಟ್‌ಹೌಸ್‌ಗೆ ಬಾ” ಎಂದು ನೇರವಾಗಿ ಆಹ್ವಾನ ನೀಡಿದ್ದರೆಂದು ಶೋಭಾ ರೆಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ನೋವು ತೋಡಿಕೊಂಡಿದ್ದಾರೆ.
ತಮಗೆ ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲ ಹಾಗೂ ತಮಗೆ ವಿಶೇಷ ಸೌಲಭ್ಯಗಳೂ ಬೇಡ. ಬದಲಿಗೆ ಒಬ್ಬ ಮಹಿಳಾ ಉದ್ಯಮಿಯಾಗಿ ಗೌರವಯುತವಾಗಿ ಮತ್ತು ಕಾನೂನುಬದ್ಧವಾಗಿ ಕೆಲಸ ಮಾಡಲು ಸಮಾನ ಅವಕಾಶ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ಈ ಹಿಂದೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅಕ್ರಮ ಜಾಹೀರಾತು ಫಲಕಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾಗಲೂ ತಮ್ಮ ಮೇಲೆ ಬೆದರಿಕೆ ಹಾಗೂ ಹಲ್ಲೆಗೆ ಯತ್ನಿಸಲಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಪ್ರಸ್ತುತ ಈ ವಿಡಿಯೋ ವೈರಲ್ ಬೆನ್ನಲ್ಲೇ ಬಿಆರ್‌ಎಸ್ (BRS) ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಆರ್‌ಆರ್ ಪ್ರವೀಣ್ ಕುಮಾರ್ ಸೇರಿದಂತೆ ವಿರೋಧ ಪಕ್ಷಗಳು ತೆಲಂಗಾಣ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಆ ಗೇಸ್ಟ್‌ಹೌಸ್ ಯಾರದ್ದು ಮತ್ತು ಸಿಎಂ ಹೆಸರಿನಲ್ಲಿ ಕಿರುಕುಳ ನೀಡಿದ ಆಪ್ತ ಯಾರು ಎಂಬುದನ್ನು ತಕ್ಷಣವೇ ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದಾರೆ.





Leave a comment