SUDDIKSHANA KANNADA NEWS/ DAVANAGERE/ DATE:20-11-2024
ತಂಜಾವೂರು: ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಿನಂನಲ್ಲಿ ಬುಧವಾರ ಬೆಳಗ್ಗೆ ಸರ್ಕಾರಿ ಶಾಲೆಯ ಆವರಣದಲ್ಲಿ ಮಹಿಳಾ ಶಿಕ್ಷಕಿ ಎದೆಗೆ ಮತ್ತು ಹೊಟ್ಟೆಗೆ ಇರಿದು ಇರಿದು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಚಿನ್ನಮನೈ ಗ್ರಾಮದ ನಿವಾಸಿ ರಮಣಿ (26) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಳೆದ ಐದು ತಿಂಗಳಿನಿಂದ 6 ರಿಂದ 9 ನೇ ತರಗತಿಗೆ ತಾತ್ಕಾಲಿಕ ತಮಿಳು ಶಿಕ್ಷಕಿಯಾಗಿ ರಮಣಿ ಕಾರ್ಯನಿರ್ವಹಿಸುತ್ತಿದ್ದರು.
ಸ್ಟಾಫ್ ರೂಮ್ ಬಳಿ ಈ ಘಟನೆ ಸಂಭವಿಸಿದೆ, ತನ್ನ ಗ್ರಾಮದ ಎಸ್.ಮದನ್ (30) ಎಂಬ ವ್ಯಕ್ತಿಯೊಂದಿಗೆ ರಮಣಿ ಮಾತನಾಡುತ್ತಿದ್ದಳು. ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಶಾಲೆಯ ಸಿಬ್ಬಂದಿ ಕೊಠಡಿಯಲ್ಲಿ ತನ್ನ ಸಹೋದ್ಯೋಗಿಗಳ ಕಣ್ಣಿಗೆ ಕಾಣುವಂತೆ ಮದನ್ ಎಂಬಾತ ರಮಣಿಯ ಕುತ್ತಿಗೆ ಮತ್ತು ಹೊಟ್ಟೆಗೆ ಪದೇ ಪದೇ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಶಿಕ್ಷಕಿಯನ್ನು ಪಟ್ಟುಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ, ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ರಾವತ್ ಮತ್ತು ಅವರ ತಂಡ ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಪ್ರಾಥಮಿಕ ತನಿಖೆಯಲ್ಲಿ ರಮಣಿ ಮತ್ತು ಮದನ್ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ, ಆದರೆ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರೂ ಅವರ ಕುಟುಂಬವು ಅವರಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು.
ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ನಡೆಯಲು ಸಾಧ್ಯವಿಲ್ಲ ಎಂದು ರಮಣಿ ಮದನ್‌ಗೆ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರಿಂದ ಕುಪಿತಗೊಂಡ ಮದನ್ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಸೇತುಬಾವಚತಿರಂ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಘಟನೆಯು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಣಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿ ರಮಣಿ ಮೇಲಿನ ಹಲ್ಲೆ ಹಾಗೂ ಹತ್ಯೆಯನ್ನು ಖಂಡಿಸಿದ್ದಾರೆ.