SUDDIKSHANA KANNADA NEWS/ DAVANAGERE/ DATE:03-02-2025
-ಕ್ರೀಡೆ, ಸಾಂಸ್ಕೃತಿಕ, ವಿಜ್ಞಾನ, ಶೈಕ್ಷಣಿಕ , ಹಲವು ವೈವಿಧ್ಯಗಳ ಅನಾವರಣಕ್ಕೆ ಕ್ಷಣಗಣನೆ.
– ರೈತರ ಕಲ್ಯಾಣೋತ್ಸವ, ಯೋಧರಿಗೆ ಗೌರವೋತ್ಸವದ ಮಾನವತೆಯ ನಿಜ ದರ್ಶನೋತ್ಸವಕ್ಕೆ ನಾಳೆಯಿಂದ ಶುಭಾರಂಭ
ಒಂದೆಡೆ ಧಾರ್ಮಿಕ ಆಚರಣೆ, ಸಂಪ್ರದಾಯ, ಸಾಧನೆ, ಜೋತಿಷ, ಖಗೋಳಶಾಸ್ತ್ರ, ಭಕ್ತಿ ಮತ್ತು ಜ್ಞಾನದ ಮಹಾ ಸಮ್ಮಿಲನವೇ ಕುಂಭಮೇಳ. 2025ನೇ ಸಾಲಿನ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿದೆ.ನಾಡಿನ ಎಲ್ಲಾ ಧಾರ್ಮಿಕ ಸಮಾರಂಭಗಳಿಗೆ ಮಾತೃ ಸ್ವರೂಪದಂತಿರುವ ‘ತರಳಬಾಳು ಹುಣ್ಣಿಮೆ ಮಹೋತ್ಸವ’ಪ್ರತಿ ವರ್ಷವೂ ಮಾನವೀಯತೆಯ ಅನನ್ಯತೆಯನ್ನು ಸಾರುವ ಮಹಾ ಉತ್ಪವವಾಗಿ ಆಚರಿಸಲ್ಪಡುತ್ತಿದೆ. ಧರ್ಮ, ಜಾತಿ, ಮತ, ಪಂಥಗಳನ್ನು ಮೀರಿ ಸರ್ವರ ಉನ್ನತಿಯ ಆಶಯವನ್ನು ಹೊತ್ತು ಶರಣರ ತತ್ವ ವಿಚಾರಗಳ ಮಂಥನದ ಮಹಾವೇದಿಕೆಯಾಗಿ ದಕ್ಷಿಣದ ಜ್ಞಾನಮೇಳ ಖ್ಯಾತಿಯ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಭರಮಸಾಗರದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.ಫೆ.4 ರಿಂದ 12ರವರಗೆ ನಡೆಯಲಿರುವ ಮಹೋತ್ಸವಕ್ಕೆ 250 ಎಕರೆ ವಿಶಾಲ ಪ್ರದೇಶದಲ್ಲಿ ವೇದಿಕೆ ಹಾಗೂ ಭವ್ಯ ಮಂಟಪ ಸಿದ್ಧಗೊಳ್ಳುತ್ತಿದೆ.
ಭಾರತ ದೇಶದ ಧಾರ್ಮಿಕ ಇತಿಹಾಸದಲ್ಲಿ ಮಠ-ಪೀಠಗಳ ಆಧ್ಯಾತ್ಮಿಕ ಗುರುಗಳು ಸಮಾಜವನ್ನು ಮತ್ತು ಸಮೂಹವನ್ನು ಧನಾತ್ಮಕವಾಗಿ ಪರಿವರ್ತಿಸಿದ್ದಾರೆ. ಇಂತಹ ಮಠ-ಪೀಠಗಳ ಪರಂಪರೆಯಲ್ಲಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ರೈತಮುಖಿ, ನ್ಯಾಯಮುಖಿ, ಹೀಗೆ ನೂರಾರು ಸೇವಾಕೈಂಕರ್ಯಗಳು ವಿಶ್ವವ್ಯಾಪಿ ಮನ್ನಣೆಗೆ ಪಾತ್ರವಾಗಿವೆ.
12ನೆಯ ಶತಮಾದ ಬಸವಾದಿ ಶಿವಶರಣರ ಹಿರಿಯ ಸಮಕಾಲೀನರಾದ ವಿಶ್ವಬಂಧು ಮರುಳಸಿದ್ಧರು ಅಂದಿನ ಸಮಾಜವನ್ನು ಪಟ್ಟಭದ್ರ ಹಿತಾಸಕ್ತಿಗಳ ಶೋಷಣೆಯ ಕಬಂಧ ಬಾಹುಗಳಿಂದ ರಕ್ಷಿಸಲು ಆಜೀವ ಪರ್ಯಂತ ಹೋರಾಡಿದರು. ಸಕಲರಿಗೂ ಲೇಸನ್ನು ಬಯಸಿದ ಅಣ್ಣ ಬಸವಣ್ಣನವರ ಹಿರಿಯ ಸಮಕಾಲೀನರಾದ, ಸಮತೆಯ ತತ್ವದ ಸಮಾನತೆಯ ಸಂಕೇತದ ಮೂಲ ಪುರುಷರಾಗಿ ವಿಶ್ವಕ್ಕೇ ಬಂಧುವಾದವರು ಮರುಳಸಿದ್ದರು. ಪಟ್ಟಭದ್ರ ಹಿತಾಸಕ್ತಿಗಳ ಜನಮಾರಕ ಕೃತ್ಯಗಳ ವಿರುದ್ದ ಉತ್ತರದಿಂದ ಪಶ್ಚಿಮದ ದಿಕ್ಕಿನವರೆಗೆ ಅಗಾದ ಲೋಕಸಂಚಾರದ ಮೂಲಕ ಹೋರಾಡಿದ ಕ್ರಾಂತಿಯೋಗಿಯಾಗಿದ್ದಾರೆ. ಧರ್ಮದ ತಳಹದಿಯ ಮೇಲೆ ಮಾನವ ಮಾನವರ ಮಧ್ಯೆ ತರತಮ ಭಾವವಿಲ್ಲದೆ ನವ ಸಮಾಜವನ್ನು ನಿರ್ಮಿಸಿ, ಸದ್ಧರ್ಮ ಪೀಠವನ್ನು ಸ್ಥಾಪಿಸಿದರು. ಮಾಘ ಶುದ್ಧ ಪೂರ್ಣಿಮೆಯಂದು ತಮ್ಮ ಶಿಷ್ಯ ತೆಲಗುಬಾಳು ಸಿದ್ಧನನ್ನು ಸದ್ಧರ್ಮ ಪೀಠದಲ್ಲಿ ಕುಳ್ಳಿರಿಸಿ ‘ತರಳಾ,ಬಾಳು’ ಎಂದು ಹರಸಿದರು. ‘ತರಳಾ, ಬಾಳು’ ಎಂಬ ಪಂಚಾಕ್ಷರಿ ಮಂತ್ರದಲ್ಲಿ ಮಾನವ ಕುಲದ ಅಭ್ಯುದಯವೇ ಅಡಕವಾಗಿದೆ. ಈ ಆಶೀರ್ವಾದದ ಪರಂಪರೆಯಲ್ಲಿ ಸಾಗಿ ಬದ ಸದ್ಧರ್ಮ ಪೀಠಾಧಿಪತಿಗಳೇ ತರಳಬಾಳು ಜಗದ್ಗುರುಗಳವರು ಎಂದು ಲೋಕಮಾನ್ಯರಾಗಿದ್ದಾರೆ. ಈ ಐತಿಹಾಸಿಕ ಘಟನೆಯು ಜರುಗಿದ ಹುಣ್ಣಿಮೆಯು ನಾಡಿನಲ್ಲಿ “ತರಳಬಾಳು ಹುಣ್ಣಿಮೆ” ಎಂದು ಪ್ರಸಿದ್ಧವಾಗಿದೆ. ತರಳಬಾಳು ಪೀಠದಲ್ಲಿ ಸಾಗಿಬಂದ ಪೀಠಾಧಿಪತಿಗಳು ಸಮಾಜಕ್ಕೆ, ಭಕ್ತರಿಗೆ ದೇವರ ಸಮಾನರು. ಭಕ್ತರಲ್ಲಿ ಆಸ್ತಿಕತೆಯನ್ನು ಬೆಳೆಸಿ, ಸತ್ಪಥವನ್ನು ನೀಡುವ ಸತ್ಕಾರ್ಯವನ್ನು ನಿರಂತರವಾಗಿ ಮುನ್ನಡೆಸಿ, ಜಾತಿ ವಿಜಾತಿ ಎನ್ನದೆ ಸಕಲರ ಸಮಬಾಳ್ವೆಯ ಚಿತ್ತವನ್ನು ದೇಶದ ಧಾರ್ಮಿಕತೆಯ ಅನನ್ಯ ಭಾಗವಾದ ಕರ್ಮಯೋಗ, ಜ್ಞಾನಯೋಗವು ನಿರಂತರವಾಗಿರಲಿ ಎಂಬ ಸದ್ಬಯಕೆಯೊಂದಿಗೆ ಅವಿಚ್ಛಿನ್ನ ಪರಂಪರೆಯನ್ನು ಮುನ್ನಡೆಸುತ್ತಾ, ಧರ್ಮನಿಷ್ಠೆ, ಕಾಯಕ ನಿಷ್ಠೆ, ಧಾರ್ಮಿಕ ವಿವೇಚನೆ, ಸಮಾಜಕ್ಕೆ ಸನ್ಮಾರ್ಗ ದರ್ಶನ, ತತ್ವಬೋಧನೆ, ಪಾಂಡಿತ್ಯಪೂರ್ಣ ವಿಷಯ ಪ್ರತಿಪಾಧನೆಯಲ್ಲಿ ಅಗ್ರಗಣ್ಯರಾಗಿದ್ದಾರೆ.
ಒಂದು ಮಠದ ಚಾರಿತ್ರಿಕ ಹಿನ್ನೆಲೆಯಲ್ಲಿ ನಡೆದುಕೊಂಡು ಬಂದಿರುವ ಈ ಹುಣ್ಣಿಮೆ ಮಹೋತ್ಸವವನ್ನು ಜಾತಿ-ಮತ-ಪಂಥಗಳ ಚೌಕಟ್ಟನ್ನು ಮೀರಿ ನಾಡ ಜನರ ಭಾವೈಕ್ಯತೆಯ ಸಾಧನವನ್ನಾಗಿ ರೂಪಿಸಿದವರು 20ನೆಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ಟಾಮಿಗಳವರು. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪ್ರತಿ ವರ್ಷವೂ ನಾಡಿನ ಒಳಹೊರಗೆ ಯಶಸ್ವಿಯಾಗಿ ನಡೆದುಕೊಂಡು ಬಂದು ನಾಡಿನ ಪ್ರಮುಖ ಧಾರ್ಮಿಕ ಸಮಾರಂಭಗಳಿಗೆ ಮಾತೃ ಸ್ವರೂಪದಂತಿರುವ ಈ ತರಳಬಾಳು ಹುಣ್ಣಿಮೆ ಮಹೋತ್ಸವವು ಲಿಂಗೈಕ್ಯ ಗುರುಗಳವರ ಕರಕಮಲ ಸಂಜಾತರಾದ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ಟಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಹೊಸ ಆಯಾಮವನ್ನು ಪಡೆದಿದೆ.
ನೊಂದಮನಗಳಿಗೆ ಬೆಂದ ಹೃದಯಗಳಿಗೆ ಸಾಂತ್ವನ ನೀಡುವ ಆಶಯದಿಂದ ಸದ್ದರ್ಮ ಪೀಠವನ್ನು ಸ್ಥಾಪಿಸಿ, ತರಳ-ಬಾಳು ಎನ್ನುವ ಪಂಚಾಕ್ಷರಿ ಮಂತ್ರದ ಮೂಲಕ ಮನುಕುಲದ ಅಭ್ಯುದಯದ ಸಂದೇಶ ಸಾರಿದ ಸುವರ್ಣಗಳಿಗೆಯ ಶುಭ ದಿನವೇ ತರಳಬಾಳು ಹುಣ್ಣಿಮೆಯೆಂದು ಸುಪ್ರಸಿದ್ದಿಯಾಗಿದೆ. ಜಾತಿ-ಮತ, ಪಂಥ-ಪಂಗಡಗಳ ಎಲ್ಲೆಯನ್ನು ಮೀರಿ ನಾಡಿನ ಎಲ್ಲಾ ಧಾರ್ಮಿಕ ಕರ್ಯಕ್ರಮಗಳಿಗೆ ಮಾತೃ ಸ್ವರೂಪದಂತಿರುವ, ಭಾವೈಕ್ಯತಾ ಪರಿಷತ್, ನಡೆದಾಡುವ ವಿಶ್ವವಿದ್ಯಾನಿಲಯ ರೂಪದ ಜ್ಞಾನ ದಾಸೋಹದ ದಿವ್ಯ ನನಸೇ ತರಳಬಾಳು ಹುಣ್ಣಿಮೆ. ನಾಡಿನ ಎಲ್ಲಾ ಧಾರ್ಮಿಕ ಸಮಾರಂಭಗಳಿಗೆ ಮಾತೃ ಸ್ವರೂಪದಂತಿರುವ ‘ತರಳಬಾಳು ಹುಣ್ಣಿಮೆ ಮಹೋತ್ಸವ’ ಪ್ರತಿ ವರ್ಷವೂ ಮಾನವೀಯತೆಯ ಅನನ್ಯತೆಯನ್ನು ಸಾರುವ ಮಹಾ ಉತ್ಸವವಾಗಿ ಕಳೆದ 75 ವರ್ಷಗಳಿಂದ ಆಚರಿಸಲ್ಪಡುತ್ತಿದೆ. ಸರ್ವರ ಉನ್ನತಿಯ ಆಶಯವನ್ನು ಹೊತ್ತು ಶರಣರ ತತ್ವ ವಿಚಾರಗಳ ಮಂಥನದ ಮಹಾವೇದಿಕೆಯಾಗಿ ಸುಪ್ರಸಿದ್ದಿಯಾಗಿದೆ. ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಹೊರಗೆ ನಡೆಸಿಕೊಂಡು ಬಂದಿರುವ ವಾರ್ಷಿಕ ಸಮಾರಂಭ “ತರಳಬಾಳು ಹುಣ್ಣಿಮೆ ಮಹೋತ್ಸವ’ ಒಂದು ನಾಡಹಬ್ಬವಾಗಿ ಸರ್ವಜನಾದರಣೆಯನ್ನು ಗಳಿಸಿದೆ. ಸಂಕುಚಿತ ಬುದ್ಧಿಯ ಮೂಲಭೂತವಾದಿಗಳ ಕೋಲಾಹಲದಿಂದಾಗಿ ವಿವಿಧ ಧರ್ಮಗಳ ಮಧ್ಯೆ ಸಂಶಯದ ಅಡ್ಡಗೋಡೆಗಳು ನಿರ್ಮಾಣವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಜಾತಿ- ಮತ, ಪ್ರಾಂತ್ಯ-ಪ್ರದೇಶಗಳ ಭೇದವಿಲ್ಲದೆ ಎಲ್ಲರನ್ನೂ ಸದ್ಭರ್ಮದ ಬೆಸುಗೆಯಲ್ಲಿ ಒಗ್ಗೂಡಿಸುವ ಭಾವೈಕ್ಯ ಸಂಗಮವಾದ ಈ ಮಹೋತ್ಸವದ ಮಹಾವೇದಿಕೆ ಒಂದು ಆಶಾಕಿರಣವಾಗಿದೆ.
ಸಮಾಜ ಮುಖಿ ಚಿಂತನೆಯ ಈ ಮಹೋತ್ಸವದ ಸಾರ್ಥಕ ಯಶೋಗಾಥೆಗೆ ಸಾವಿರಾರು ಕೋಟಿ ರೂಗಳ ನೀರಾವರಿ ಯೋಜನಗಳು, ಕಲ್ಯಾಣ ಮಂಟಪಗಳು, ಭೂಕಂಪ-ಸುನಾಮಿ-ಸೈನಿಕ ಸಂತ್ರಸ್ಥರಿಗೆ ಸಹಾಯ ಹಸ್ತ, ಶಾಲಾ- ಕಾಲೇಜುಗಳು, ಕುಡಿಯುವ ನೀರಿನ ಪೂರೈಕೆ ಯೋಜನೆಗಳು, ಜಾನುವಾರುಗಳಿಗೆ ಹುಲ್ಲು ಸಮರ್ಪಣೆಯಂತಹ ಹೃದಯಸ್ಪರ್ಷಿ ಕಾರ್ಯಕ್ರಮಗಳು ಸಾಕ್ಷಿಯಾಗಿವೆ.
ತರಳಬಾಳು ಹುಣ್ಣಿಮೆ ಮಹೋತ್ಸವ:
ಜಾತಿ –ಮತ, ಮೇಲು-ಕೀಳು, ದಲಿತ-ಬಲಿತ ಎಂಬ ಭೇದ ಭಾವವಿಲ್ಲದೆ ಇವ ನಮ್ಮವ ಇವ ನಮ್ಮವ ಎಂಬ ಅಣ್ಣನ ಆಣತಿಗನುಗುಣವಾಗಿ,ವಿಶ್ವ ಮಾನವತೆಯ ಸಂಧೇಶ ಸಾರುವ ಸತ್ಯ ಸಂಕಲ್ಪವೇ ತರಳಬಾಳು ಹುಣ್ಣಿಮೆ.
ಮರುಳಸಿದ್ದನ ತರುವಾಯ ಪೀಠದ ಎಲ್ಲಾ ಶ್ರೀಗಳು ಮೂಲ ಆಶಯದಂತೆ ದಿಟ್ಟ ಹೆಜ್ಜೆಯ ಧೀರಪ್ರಭುಗಳಾಗಿ ಜನಸೇವಾ ಕರ್ಯಗಳೇ ತರಳಬಾಳು ಮಠದ ಹೆಜ್ಜೆಗುರುತುಗಳಾಗಿ ದಾಖಲಾಗಿವೆ. ಈ ಮಹೋತ್ಸವವು ಬದಲಾದ ಸಂಧರ್ಭಕ್ಕನುಗುಣವಾಗಿ ಆಧುನಿಕ ಸ್ಪರ್ಷತೆಯೊಂದಿಗೆ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ,ಜನಮುಖಿ ಕರ್ಯಕ್ರಮವನ್ನಾಗಿಸಿ,ಜನರ ಧ್ವನಿಗೆ ಬಲನೀಡಿ, ಸಮಸ್ಯೆಗಳಿಗೆ ಪರಿಹಾರದ ಸದಾಶಯದ ಸಂದೇಶದ ಮೂಲಕ ಜಗದಗಲ ಹರಡಿಸಿ ,ಅರ್ಥಪರ್ಣ ಕರ್ಯಕ್ರಮವನ್ನಾಗಿಸಿದವರು ಪ್ರಸ್ತುತ ಜಗದ್ಗುರುರ್ಯರಾದ ಲೋಕಪೂಜನೀಯ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ಶಿವಮೂರ್ತಿ ಶಿವಾಚಾರ್ಯ ವiಹಾಸ್ವಾಮಿಗಳವರು. ಸಂಕಲ್ಪ ಸನ್ನಿಧಾನದಿಂದ.
ಕಳೆದ ಏಳು ದಶಕಕ್ಕು ಹೆಚ್ಚು ಕಾಲದಿಂದ ಪ್ರತಿವರ್ಷ ನಾಡಿನ ಒಳ-ಹೊರಗೆ ಯಶಸ್ವಿಯಾಗಿ ಜ್ಞಾನದಾಸೋಹವನ್ನು ನವದಿನಗಳಕಾಲ ಉಣಬಡಿಸುತ್ತಿರುವ ಈ ಸಮಾರಂಭದಲ್ಲಿ ನಾಡಿನ ಹೆಸರಾಂತ, ಧರ್ಮಗುರುಗಳು, ವಿದ್ವಾಂಸರು, ಸಾಹಿತಿಗಳು ಕಲಾವಿದರು, ಜನನಾಯಕರುರಿಗೆ ಧನ್ಯತಾ ಭಾವನೆಯನ್ನು ಮೂಡಿಸಿರುವದೇ ಇದರ ಸಾರ್ಥಕತೆಗೆ ಸಾಕ್ಷಿ
1950 ನೇ ಇಸವಿಯಿಂದ ಜಗಳೂರಿನಲ್ಲಿ ಪ್ರಾರಂಭವಾದ ಈ ಮಹೋತ್ಸವ ಅಂದಿನಿಂದ ಇಂದಿನವರೆಗೆ ನೆನಪಿನ ಮಜಲುಗಳನ್ನೆ ಸೃಷ್ಟಿಸಿರುವುದಕ್ಕೆ ಕಾರಣ ಅದರ ಸವಿನೆನಪಿಗಾಗಿ ಕಟ್ಟಿರುವ ಆಸ್ಪತ್ರೆಗಳು, ಕಲ್ಯಾಣ ಮಂಟಪಗಳು, ಶಾಲಾ-ಕಾಲೇಜುಗಳು, ಉಚಿತ ವಿದ್ಯಾರ್ಥಿನಿಲಯಗಳು,ಕುಡಿಯುವ ನೀರಿನ ಪೂರೈಕಾ ಕರ್ಯಕ್ರಮಗಳು, ನೀರಾವರಿ ಯೋಜನೆಗಳು,ಕೆರೆ ತುಂಬಿಸಲು ಕೈಗೊಂಡ ಯಶಸ್ವಿ ಕಾರಯಯೋಜನೆಗಳು ಹೀಗೆ ಹತ್ತು ಹಲವು ಸಮಾಜ ಮುಖಿ ಕೈಂರ್ಯಗಳು ತರಳಬಾಳು ಹುಣ್ಣಿಮೆಯ ನಿಮಿತ್ತ ಅನುಷ್ಠಾನಗೊಂಡು ಸಮಾರಂಭದ ಸಾರ್ಥಕತೆಯನ್ನು ಮೆರೆಯುತ್ತಾ ಇವೆ.
ತರಳಬಾಳು ಮಠದ ಕೀರ್ತಿಯನ್ನು ವಿಶ್ವದೆತ್ತರಕ್ಕೆ ಪಸರಿಸಿದ ಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠವನ್ನು ವಿಶ್ವ ವ್ಯಾಪಿಯನ್ನಾಗಿಸಿದ ಭಕ್ತಿಕೀರ್ತಿಯು ಪೂಜ್ಯ ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಸಲ್ಲುತ್ತದೆ. ಕನ್ನಡ ನಾಡಿನ ರೈತ ಮೆಚ್ಚಿದ ಗುರು ಎಂದೇ ಸುಪ್ರಿದ್ದರಾಗಿದ್ದಾರೆ.
“ಗಗನಂ ಗಗನಾಕಾರಂ, ಸಾಗರಂ ಸಾಗರೋಪಮಃ|
ರಾಮರಾವಣಯೋರ್ಯುದ್ಧಂ ರಾಮರಾವಣಯೋರಿವ”-
ಆಕಾಶ, ಆಕಾಶದ ಹಾಗೆ,ಸಮುದ್ರ ಸಮುದ್ರದ ಹಾಗೆ,
ರಾಮ-ರಾವಣರ ಯುದ್ಧ, ರಾಮ-ರಾವಣರ ಯುದ್ಧದ ಹಾಗೆ-
ಎಂದು ಹೇಳುವ ಹಾಗೆ ಡಾ||ಶ್ರೀ ಶಿವಮೂರ್ತಿ ಶ್ರೀಗಳು ಹೇಗೆ ಎಂದು ಕೇಳಿದರೆ ಡಾ|| ಶಿವಮೂರ್ತಿಶ್ರೀಗಳು ಹಾಗೆಯೆ ಎಂದು ಹೇಳಬೇಕು ಅಷ್ಟೆ. ಅವರನ್ನು “ಅವರ ಹಾಗೆ, ಇವರ ಹಾಗೆ” ಎಂದೂ ಹೋಲಿಸಿ ಹೇಳುವದಕ್ಕೆ ಸಾಧ್ಯವಾಗುವುದಿಲ್ಲ ಶ್ರೀಗಳ ಸಮಾಜ ಜೀವನ, ವಿದ್ವತ್ತು, ವ್ಯಕ್ತಿತ್ವ, ಲೋಕಮುಖಿ ಸಾಧನೆಗೆ ಪರ್ಯಾಯ ಹೋಲಿಕೆ ಇಲ್ಲವೇ ಇಲ್ಲ !!
೧೨ನೇ ಶತಮಾನದ ಶರಣರ ಹಿರಿಯ ಸಮಕಾಲೀನರಾದ ಶ್ರೀ ವಿಶ್ವಬಂಧು ಮರುಳಸಿದ್ಧರಾದಿ ಬಳಿವಿಡಿದು ಯುಗ ಪುರುಷ ಕ್ರಾಂತಿಕಾರಿ ಬಸವಣ್ಣನವರ ತತ್ವಾದರ್ಶಗಳ ಆಶಯದಂತೆ ವೈಚಾರಿಕತೆ ಮತ್ತು “ಕಾಯಕವೇ ಕೈಲಾಸ”ದ ಹಾದಿಯಲ್ಲಿ ಶೈಕ್ಷಣಿಕ, ಸಾಮಾಜಿಕ, ಹಾಗೂ ಧಾರ್ಮಿಕ ದಾಸೋಹಿಯಾಗಿ ಜಾತ್ಯಾತೀಥ, ಧರ್ಮಾತೀಥ, ಪಕ್ಷಾತೀಥರಾಗಿ ಅಕ್ಷರ ಅನ್ನ ಅಸರೆಯ ಸಕಾರರೂಪಿಯಾಗಿ, ಸಾಂದರ್ಭಿಕ್ಕನುಗುಣವಾಗಿ ಜನಪರ ಕಾರ್ಯಗಳಲ್ಲಿ ಡಾ||ಶ್ರೀ ಶಿವಮೂರ್ತಿ ಶಿವಾಚಾರ್ಯ ಶ್ರೀಗಳವರ ದಿಟ್ಟ ಹೆಜ್ಜೆ ತೆಗೆದುಕೊಂಡ ನಿಲುವುಗಳು ಎಂದಿಗೂ ಪ್ರಶ್ನಾತೀತ. ತರಳ-ಬಾಳು ಪಂಚಾಕ್ಷರಿ ಮಂತ್ರದಂತೆ ಮನುಕುಲದ ಉನ್ನತಿಯೇ ತರಳಬಾಳು ಮಠದ ಸಂವಿಧಾನ 9ಶತಮಾನಗಳ ಭವ್ಯ ಇತಿಹಾಸ ಹೊಂದಿ ಜನಪರ ನಿಲುವುಗಳಿಂದ ದೇಶ-ವಿದೇಶಗಳಲ್ಲಿ ಅಸಂಖ್ಯಾ ಭಕ್ತ ಸಮುದಾಯ ಹೊಂದಿರುವ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ 21ನೇಯ ಪೀಠಾಧಿಪತಿಗಳಾಗಿ ಕಳೆದ ೪ ದಶಕಗಳಿಂದಲೂ ಸರ್ವರ ಹಿತ ಕಾಯುತ್ತಿರುವ ಶ್ರೀಗಳ ಕರ್ತವ್ಯದ ಕಾಣಿಕೆ ಅನನ್ಯವಾದುದು.
ನೂರಾರು ದೇಶಗಳ ಅಂತರಾಷ್ಟ್ರೀಯ ಧಾರ್ಮಿಕ ವಿಚಾರ ಸಂಕೀರ್ಣಗಳಲ್ಲಿ ಭಾರತ ದೇಶದ ಧಾರ್ಮಿಕ ಪ್ರತಿನಿಧಿಯಾಗಿ ವಿದೇಶಗಳ ಸಂಘ ಸಂಸ್ಥೆಗಳ ಅಸಂಖ್ಯಾ ಧಾರ್ಮಿಕ,ವೈಚಾರಿಕ,ಶೈಕ್ಷಣಿಕ ಮತ್ತು ಅಂತರಾಷ್ಯ ಜ್ವಲಂತ ಸಮಸ್ಯೆಗಳ ಸಂಕೀರ್ಣಗಳಲ್ಲಿ ನೇತೃತ್ವವಹಿಸಿ ಭಾರತ ದೇಶದ ಹೆಮ್ಮೆಯ ಪುತ್ರರೆನಿಸಿ ತಮ್ಮ ವಿದ್ವತ್ಪೂರ್ಣ ಸಂದೇಶಗಳನ್ನು ವಿಶ್ವಕ್ಕೆ ಸಾರಿ ವಿಶ್ವಕ್ಕೆ ‘ಶಾಂತಿಧೂತ’ರೆನಿಸಿದ್ದಾರೆ.
ನಾಡಿನ ಅನ್ನದಾತನ ಮೇಲೆ ಅಪಾರ ಮಮತೆ ಮತ್ತು ವಾತ್ಸಲ್ಯವುಳ್ಳ ಶ್ರೀಗಳು ರೈತ ಸಂಕಷ್ಟದಿ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿದಾಗ ಆತ್ಮಸ್ಥೈರ್ಯ ತುಂಬಿ ರೈತಪರ ಯೋಜನೆಗಳ ಆಧುನಿಕ ಭಗೀರಥರೆಸಿದ್ದಾರೆ.
ಅನ್ನ,ಆಸರೆ,ಶಿಕ್ಷಣ,ಉದ್ಯೋಗ,ನ್ಯಾಯದಾನ, ಕನ್ನಡ ಜಾನಪದ ಕಲೆಗಳ ಪುನರುಜ್ಜೀವನ , ಸಾಮಾಜಿಕ ಕಾಳಜಿ,ಪರಿಸರ ರಕ್ಷಣೆ, ಶರಣ ಸಂಸ್ಕೃತಿಯನ್ನು ವಿಶ್ವಕ್ಕೆ ದರ್ಶಸಿದ ಗಣಕ ಋಷಿ ಎಂದೇ ನಾಮದೇಯರಾಗಿರುವ ಶ್ರೀ ಗುರುವರ್ಯರ ಸಾಧನೆಗಳ ಕುರಿತು ಬರೆಯುವುದೆಂದರೆ ಅದು ಸೂರ್ಯನನ್ನು ಕನ್ನಡಯಲ್ಲಿ ಹಿಡಿದಂತೆ..!
ಫೆಬ್ರವರಿ 4 ರಿಂದ 12 ರವರೆಗೆ ಹುಣ್ಣಿಮೆಯ ಆಚರಣೆಗೆ ಭರಮಸಾಗರದಲ್ಲಿ ಎಲ್ಲಾ ರೀತಿಯ ಸ್ವಚ್ಛತೆಗಾಗಿ ರಸ್ತೆಗಳ ರಿಪೇರಿ, ಹಳ್ಳ, ಗುಂಡಿಗಳನ್ನು ಮುಚ್ಚುವುದು, ವಿಶೇಷವಾಗಿ ವಿದ್ಯುತ್ ದೀಪ ನೂತನವಾಗಿ ಅಳವಡಿಕೆ ಮಾಡಿರುವುದು ಅಲ್ಲದೇ ಭರಮಸಾಗರ ದೊಡ್ಡ ಕೆರೆಯ ರಸ್ತೆಗೆ ಡಾಂಬರ್ ಹಾಕುವುದು ಇನ್ನೂ ವಿಶೇಷವಾಗಿ ಭರಮಸಾಗರ ಕಾರ್ಯಕ್ರಮಕ್ಕೆ ಸಿದ್ಧವಾಗುತ್ತಿದೆ.
ಕಳೆದ 75 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದ ಸ್ಥಳಗಳ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ಆ ಭಾಗದ ಜನತೆಯ ಆಶೋತ್ತರಗಳಿಗೆ, ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಪರಿಹಾರವನ್ನು ಕಂಡುಕೊಂಡು ಜನರ ಮೊಗದಲ್ಲಿ ಸಾರ್ಥಕತೆಯನಗೆಬೆಳದಿಂಗಳನ್ನು ಮೂಡಿಸಿ ತೃಪ್ತಿಯ ಪ್ರಭೆಯನ್ನು ಬೀರಿದೆ. ನೂರಾರು ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಗಳು, ಶಾಶ್ವತ ಕುಡಿಯುವ ನೀರಿನ ಯೋಜನೆಗಳು, ಕಲ್ಯಾಣ ಮಂಟಪಗಳು,ಶಾಲಾ-ಕಾಲೇಜುಗಳು,ಆಸ್ಪತ್ರೆಗಳು,ಗೋಶಾಲೆಗೆ ಮೇವು ಪೂರೈಕೆ,ಭೂಕಂಪ, ನೆರೆ, ಸುನಾಮಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಂತಹ ಹೃದಯ ಸ್ಮರಣೀಯ ಸಮಾಜ ಮುಖಿಯಾದ ನಿತ್ಯ ಕಲ್ಯಾಣ ಕೈಂಕರ್ಯಗಳು ತರಳಬಾಳು ಹುಣ್ಣಿಮೆ ಮಹೋತ್ಸವದ ಸಾರ್ಥಕ ಸುಪ್ರಭೆಯನ್ನು ಸಾರುತ್ತಿವೆ.
ತರಳಬಾಳು ಹುಣ್ಣಿಮೆ ಮಹೋತ್ಸವವೇ ಭಾವೈಕ್ಯತೆಯ ಸಂಗಮ ಎಂಬುದಕ್ಕೆ ಭರಮಸಾಗರ ಕೆರೆ ನಿರ್ಮಾತೃ ಭರಮಣ್ಣ ನಾಯಕರ ಸ್ಮರಣೆಗಾಗಿ ಮಂಟಪಕ್ಕೆ ಬಿಚ್ಚುಗತ್ತಿ ಭರಮಣ್ಣ ನಾಯಕ ಮಹಾಮಂಟಪ ಎಂದೂ, ಮಹಾದ್ವಾರ ಹಾಗೂ ಇತರೆ ವೇದಿಕೆಗೆ ಚಿನ್ಮೂಲಾದ್ರಿ ಗುರು ರೇವಣಸಿದ್ದೇಶ್ವರ ವೇದಿಕೆ ಎಂಬ ಹೆಸರುಗಳನ್ನು ನಾಮಕರಿಸಲು ಶ್ರೀಜಗದ್ಗುರುಗಳು ನಿರ್ಧರಿಸಿರುವುದು ಸಾಕ್ಷಿಯಾಗಿದೆ.
ಲಕ್ಷಾಂತರ ಮಂದಿ ಸೇರುವ ತರಳಬಾಳು ಹುಣ್ಣಿಮೆ ಮಹೋತ್ಸವದ ವ್ಯವಸ್ಥೆಗಳನ್ನು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಖುದ್ದಾಗಿ ಪರಿಶೀಲಿಸುತ್ತಿದ್ದಾರೆ.
ಫ್ಲೆಕ್ಸ್,ಬ್ಯಾನರ್ ಭರಾಟೆ ಇಲ್ಲ: ಈ ಬಾರಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಪರಿಸರ ಸಂರಕ್ಷಣೆ ಎಲ್ಲಿಯೂ ಪ್ಲೆಕ್ಸ್, ಬ್ಯಾನರ್ ಹಾಕದಂತೆ ಶ್ರೀ ಜಗದ್ಗುರುಗಳವರು ಆದೇಶಿಸಿದ್ದಾರೆ.
ಭರಮಸಾಗರ ಏತ ನೀರಾವರಿ ಯೋಜನೆಯ ಕೆರೆಗಳು ಭರ್ತಿಗೊಳ್ಳದ ಕಾರಣ ಮುಂದೂಡಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವ ಈ ವರ್ಷ ಎಲ್ಲಾ ಕೆರೆಗಳಿಗೆ ಶ್ರೀ ಜಗದ್ಗುರುಗಳವರು ಪರಿಶ್ರಮದ ಫಲವಾಗಿ ಭರ್ತಿಗೊಂಡ ಫಲವಾಗಿ ಸಡಗರ ಸಂಭ್ರಮದಿಂದ ನಡೆಯಲಿದೆ.
9 ದಿನಗಳ ಕಾರ್ಯಕ್ರಮ : ತರಳಬಾಳು ಹುಣ್ಣಿಮೆ ಮಹೋತ್ಸವ ಫೆ.4ರಿಂದ ಆರಂಭವಾಗಿ 12ರ ವರೆಗೆ ಕಾರ್ಯಕ್ರಮದಲ್ಲಿ 4-2-2025 ಮಂಗಳವಾರ ಶಿಕ್ಷಣ-ಕಲೆ-ಸಂಸ್ಕೃತಿ 5-2-2025 ಬುಧವಾರ – ಮಹಿಳೆ ಮತ್ತು ಸಮಾಜ 6-2-2025 ಗುರುವಾರ – ರಾಜಕಾರಣ ಮತ್ತು ಸಮಾಜ 7-2-2025 ಶುಕ್ರವಾರ – ಶರಣ ಸಾಹಿತ್ಯ ಮತ್ತು ಸಮಾಜ 8-2-2025 ಶನಿವಾರ – ನ್ಯಾಯಾಲಯ ಮತ್ತು ಸಮಾಜ 9-2-2025 ಭಾನುವಾರ – ಆರೋಗ್ಯ ಮತ್ತು ಸಮಾಜ 10-2-2025 ಸೋಮವಾರ – ಸಮೂಹ ಮಾಧ್ಯಮ ಮತ್ತು ಸಮಾಜ 11-2-2025 ಮಂಗಳವಾರ – ಕೃಷಿ ಮತ್ತು ಜಲಸಂರಕ್ಷಣೆ 12-2-2025 ಬುಧವಾರ – ಧರ್ಮ-ವಿಜ್ಞಾನ-ಸಮಾಜವಿಷಯಗಳ ಕುರಿತು ನಾಡಿನ ಶ್ರೇಷ್ಠ ಚಿಂತಕ ರಿಂದ ಜ್ಞಾನದ ಸುಧೆ ಹರಿಯಲಿದೆ.
ಹುತಾತ್ಮ ಯೋಧರಿಗೆ ಗೌರವ :
ದೇಶದ ಹಿತಕ್ಕಾಗಿ ಹೋರಾಡುತ್ತಾ ವೀರ ಮರಣ ಹೊಂದಿರುವ 10 ಸೈನಿಕ ಕುಟುಂಬಕ್ಕೆ ನೆರವು ತಲಾ 1 ಲಕ್ಷ ರೂ. ಗಳನ್ನು ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಹಲವಾರು ವರ್ಷಗಳಿಂದ ನೀಡಲಾಗುತ್ತಿದೆ. ಅದರಂತೆ ಈ ವರ್ಷವೂ
12-2-2025 ರಂದು 8-00 ಗಂಟೆಗೆ ಪ್ರಾಣದ ಹಂಗು ತೊರೆದು, ಶತ್ರುಗಳೊಂದಿಗೆ ಹೋರಾಡಿ, ದೇಶವನ್ನು ರಕ್ಷಿಸಿ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ಅಭಿನಂದನೆಗಳೊಂದಿಗೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಒಂದು ಲಕ್ಷ ರೂಪಾಯಿಗಳ ಆರ್ಥಿಕ ನೆರವಿನ ಸಾಂತ್ವನವನ್ನು
ಅಂಕುಶ್ ಶರ್ಮ, ಜಮ್ಮು-ಕಾಶ್ಮೀರ
ಗಾಡಗೆ ಶುಭಂ ಸಮಧಾನ್, ಸತಾರ್, ಮಹಾರಾಷ್ಟ್ರ
ರಾಮಕೃಷ್ಣ, ಉತ್ತರ ಪ್ರದೇಶ
ಮಹೇಶ್ ನಾಗಪ್ಪ ಮರಿಗೊಂಡಮಹಾಲಿಂಗಪುರ, ಬಾಗಲಕೋಟೆ
ಸುಬೇದಾರ ದಯಾನಂದ ತಿರುಕಣ್ಣವರ, ಸಾಂಬ್ರ, ಬೆಳಗಾವಿ
ಧರ್ಮರಾಜ ಖೋತಕುಪ್ಪನವಾಡಿ, ಚಿಕ್ಕೋಡಿ, ಬೆಳಗಾವಿ
ಸುಂದರೇಶ್ ಎಲ್.ಬಿ, ಹಾಸನ
ಮಹೇಶ್ ನಿಂ ವಾಲಿ, ಈರನಟ್ಟಿ, ಗೋಕಾಕ್, ಬೆಳಗಾವಿ
ರವಿಕುಮಾರ್ ಕೆಳಗಿನಮನೆ, ರಟ್ಟಿಹಳ್ಳಿ, ಶಿವಮೊಗ್ಗ ಹುತಾತ್ಮ ಯೋಧರಿಗೆ ಆರ್ಥಿಕ ನೆರವಿನ ಮೂಲಕ ಶ್ರೀ ಜಗದ್ಗುರುಗಳವರು ಸಾಂತ್ವನ ಹೇಳಲಿದ್ದಾರೆ.
ದೇಶ – ವಿದೇಶಗಳಿಂದ ವಿದ್ವಾಂಸರು, ಸಾಧಕರು ಮತ್ತು ರಾಜ ತಾಂತ್ರಿಕರು ಈ ಬಾರಿಯ ಹುಣ್ಣಿಮೆ ಮಹೋತ್ಸವದಲ್ಲಿ ಭಾಗಿ ಯಾಗುತ್ತಿರುವುದರಿಂದ ಈ ಹುಣ್ಣಿಮೆಗೆ ಅಂತರ್ ರಾಷ್ಟ್ರೀಯ ಮೆರಗು ಬರಲಿದೆ.
ಕುಸ್ತಿ ಪಂದ್ಯಾವಳಿ, ಕ್ರೀಡಾ ಮೇಳ, ಸಾಂಸ್ಕೃತಿಕ ಸ್ಪರ್ಧೆಗಳು, ಭಜನಾ ಸ್ಪರ್ಧೆ, ಸೇರಿದಂತೆ ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳು ಪ್ರತಿ ದಿನ ನಡೆಯಲಿವೆ.
ಕೃಷಿಕರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶ್ರೀ ಜಗದ್ಗುರುಗಳವರು ಈ ಭಾರಿ ಕೃಷಿ, ಕೈಗಾರಿಕಾ ಮೇಳ ಮತ್ತು ಸಂವಾದವನ್ನು ಏರ್ಪಡಿಸಿದ್ದಾರೆ.
ನಾಡಿನ ಪೂಜ್ಯ ಮಠಾಧೀಶರುಗಳು,ನ್ಯಾಯಮೂರ್ತಿಗಳು,ಉಪಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆ ಸಚಿವರು ಮತ್ತು ಜನಪ್ರತಿನಿಧಿಗಳು,ಕಲಾವಿದರು, ಸಾಹಿತಿಗಳು ,ನಾಗಲಕ್ಷ್ಮಿ ಚೌದರಿ, ನಿವೃತ್ತ ನ್ಯಾಯಾಧೀಶ ಸಂತೋಷ್ ಹೆಗಡೆ, ಜಯದೇವ ಆಸ್ಪತ್ರೆಯ ಡಾ. ಮಂಜುನಾಥ್, ಅಶೋಕ್ ಹಾರನಹಳ್ಳಿ, ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ, ಹಿರೇಮಗಳೂರು ಕಣ್ಣನ್, ಹಾಸ್ಯ ಭಾಷಣಕಾರ ಸಂಧ್ಯಾ ಶೆಣೈ, ಬಿ.ವೈ. ವಿಜಯೇಂದ್ರ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಪ್ರಭಾಕರ್ ಶಾಸ್ತ್ರೀ, ಡಾ|| ಪ್ರಭಾ ಮಲ್ಲಿಕಾರ್ಜುನ್, ಡಾ|| ಶರಣ ಪಾಟೀಲ್, ಪಬ್ಲಿಕ್ ಟಿವಿ ರಂಗನಾಥ್, ಟಿವಿ 9 ಮುಖ್ಯ ನಿರ್ಮಾಪಕ ರಂಗನಾಥ್ ಭಾರಧ್ವಾಜ್, ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಬಸವರಾಜ ಬೊಮ್ಮಾಯಿ, ಇನ್ನೂ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸುವರು.