Home ಬೆಂಗಳೂರು ಪೆನ್ ಡ್ರೈವ್ ನಲ್ಲಿತ್ತು ಗಾಡ್‌ಫಾದರ್ ಹೆಸರಿನ ರಾಕ್ಷಸ ಕೃತ್ಯ: ‘ತಮಿಳುನಾಡಿನ ಎಪ್‌ಸ್ಟೀನ್’ ಗ್ರಾನೈಟ್ ಉದ್ಯಮಿ ವೀರಮಣಿ ಬಂಧನ, ತಮಿಳುನಾಡು ಸಿಎಂ ತನಿಖೆಗೆ ಖಡಕ್ ಆದೇಶ!
ಬೆಂಗಳೂರುಕ್ರೈಂ ನ್ಯೂಸ್

ಪೆನ್ ಡ್ರೈವ್ ನಲ್ಲಿತ್ತು ಗಾಡ್‌ಫಾದರ್ ಹೆಸರಿನ ರಾಕ್ಷಸ ಕೃತ್ಯ: ‘ತಮಿಳುನಾಡಿನ ಎಪ್‌ಸ್ಟೀನ್’ ಗ್ರಾನೈಟ್ ಉದ್ಯಮಿ ವೀರಮಣಿ ಬಂಧನ, ತಮಿಳುನಾಡು ಸಿಎಂ ತನಿಖೆಗೆ ಖಡಕ್ ಆದೇಶ!

Share
ವೀರಮಣಿ
Share

ಚೆನ್ನೈ: ತಮಿಳುನಾಡಿನ ಖ್ಯಾತ ಉದ್ಯಮಿ ಹಾಗೂ ‘ಜೆಮ್ ಗ್ರೂಪ್ ಆಫ್ ಕಂಪನೀಸ್’ ಮುಖ್ಯಸ್ಥ, 84 ವರ್ಷದ ಆರ್‌. ವೀರಮಣಿ ವಿರುದ್ಧದ ‘ಪೋಕ್ಸೋ’  ಪ್ರಕರಣವು ರಾಜ್ಯದ ಅತಿ ದೊಡ್ಡ ಲೈಂಗಿಕ ಶೋಷಣೆ ಪ್ರಕರಣವಾಗಿ ಮಾರ್ಪಟ್ಟಿದೆ.

ಆರ್ಥಿಕವಾಗಿ ಹಿಂದುಳಿದ ಅಪ್ರಾಪ್ತ ಬಾಲಕಿಯರ ಮೇಲೆ ದಶಕಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವೀರಮಣಿ ಹಾಗೂ ಅವರ ಸಹಚರರಾದ ಶಾಂತಿ ಮತ್ತು ಮಹೇಂದ್ರ ಸಿಮನ್ ಅವರನ್ನು ಪೋಲಿಸರು ಬಂಧಿಸಿದ್ದಾರೆ. ತನಿಖಾಧಿಕಾರಿಗಳು ಈತನನ್ನು “ತಮಿಳುನಾಡಿನ ಎಪ್‌ಸ್ಟೀನ್” ಎಂದು ಕರೆದಿದ್ದಾರೆ.

ಸಂತ್ರಸ್ತೆ ‘ಶಾಂತಿ’ ನೀಡಿದ ಆಘಾತಕಾರಿ ಹೇಳಿಕೆ

ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬಳಾಗಿ ಬಂಧನಕ್ಕೊಳಗಾಗಿರುವ ‘ಶಾಂತಿ’ ಎಂಬ ಮಹಿಳೆ, ಆರಂಭದಲ್ಲಿ ತಾನೇ ಈ ಉದ್ಯಮಿಯ ಮೊದಲ ಸಂತ್ರಸ್ತೆ ಎಂದು ಬಹಿರಂಗಪಡಿಸಿದ್ದಾಳೆ.

ಶಾಂತಿ ಹೇಳುವ ಪ್ರಕಾರ, ಆಕೆಗೆ ಸುಮಾರು 13 ವರ್ಷ ವಯಸ್ಸಿದ್ದಾಗ ವೀರಮಣಿ ಆಕೆಯ ಕುಟುಂಬಕ್ಕೆ ಉದ್ಯಮ ಮತ್ತು ಹಣಕಾಸಿನ ನೆರವು ನೀಡುವ ನೆಪದಲ್ಲಿ ಮನೆಗೆ ಬರಲು ಪ್ರಾರಂಭಿಸಿದ್ದ. ತನಗೆ ‘ಗಾಡ್ ಫಾದರ್’ (ಮಾರ್ಗದರ್ಶಕ) ತರಹ ನಟಿಸುತ್ತಾ, ಆಕೆಯ ಕುಟುಂಬದ ನಂಬಿಕೆಯನ್ನು ಗಳಿಸಿದ. ಅಪ್ರಾಪ್ತ ವಯಸ್ಕಳಾಗಿದ್ದರಿಂದ ಆತನ ದುರುದ್ದೇಶಗಳನ್ನು ಅರ್ಥಮಾಡಿಕೊಳ್ಳಲು ಆಕೆಗೆ ಸಾಧ್ಯವಾಗಲಿಲ್ಲ.

ವೀರಮಣಿ ತನ್ನ ಮೇಲಿನ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ನಿರಂತರವಾಗಿ ಲೈಂಗಿಕ ಶೋಷಣೆ ನಡೆಸಿದ. ಅಷ್ಟೇ ಅಲ್ಲದೆ, ಶಾಂತಿಯ ತಂದೆಯ ಆಸ್ತಿಯಿಂದ ಬಂದಿದ್ದ ಪೂರ್ಣ ಹಣವನ್ನು ತನ್ನ ಹಣಕಾಸಿನ ಅಗತ್ಯಗಳಿಗಾಗಿ ಪಡೆದುಕೊಂಡು ವಂಚಿಸಿದ್ದ. ಕಾಲಕ್ರಮೇಣ, ಬಡ ಕುಟುಂಬಗಳ ಅಪ್ರಾಪ್ತ ಬಾಲಕಿಯರನ್ನು (12 ರಿಂದ 16 ವರ್ಷ) ಹುಡುಕಿ, ಚೆನ್ನೈನ ತೇನಾಂಪೇಟೆಯಲ್ಲಿರುವ ಬಾಡಿಗೆ ಮನೆಗೆ ಕರೆತರುವಂತೆ ಶಾಂತಿಯನ್ನೇ ದಾಳವಾಗಿ ಬಳಸಿಕೊಳ್ಳಲಾಯಿತು. ಈ ಜಾಲಕ್ಕೆ ಬಿದ್ದ ಬಾಲಕಿಯರಿಗೆ ಹಣ ಮತ್ತು ಉಡುಗೊರೆಗಳ ಆಮಿಷ ಒಡ್ಡಲಾಗುತ್ತಿತ್ತು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಪೆನ್ ಡ್ರೈವ್ ವಿಡಿಯೋ: ಅಕ್ಟೋಬರ್ 2025 ರಲ್ಲಿ ಎನ್‌ಜಿಒ ಒಂದರ ಮೂಲಕ ಪೋಲಿಸರಿಗೆ ಪೆನ್ ಡ್ರೈವ್ ಲಭ್ಯವಾಯಿತು. ಅದರಲ್ಲಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ದೃಶ್ಯವಿತ್ತು.

ಪೋಲಿಸರ ನಿರ್ಲಕ್ಷ್ಯ ಹಾಗೂ ನ್ಯಾಯಾಲಯದ ಹಸ್ತಕ್ಷೇಪ: ಆರಂಭಿಕ ತನಿಖೆಯಲ್ಲಿ ಸಂತ್ರಸ್ತೆ ಸಿಗಲಿಲ್ಲ ಎಂಬ ಕಾರಣಕ್ಕೆ ಪೋಲಿಸರು ಬಿ-ರಿಪೋರ್ಟ್ (ಪ್ರಕರಣ ಬಂದ್) ಸಲ್ಲಿಸಲು ಯತ್ನಿಸಿದರು. ಆದರೆ ‘ವಿಶೇಷ ಪೋಕ್ಸೋ ನ್ಯಾಯಾಲಯ’ ಇದನ್ನು ತಿರಸ್ಕರಿಸಿ, ಮರುತನಿಖೆಗೆ ಆದೇಶಿಸಿತು.

ಸತ್ಯಾಂಶ ಹೊರಕ್ಕೆ: ಮರುತನಿಖೆಯ ನಂತರ ತೇನಾಂಪೇಟೆಯ ಕ್ರೈಂ ಸ್ಪಾಟ್ ಪತ್ತೆಯಾಯಿತು. ಪ್ರಸ್ತುತ 7ಕ್ಕೂ ಹೆಚ್ಚು ಸಂತ್ರಸ್ತ ಅಪ್ರಾಪ್ತ ಬಾಲಕಿಯರು ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, 2023ಕ್ಕೂ ಮೊದಲಿನ ದೌರ್ಜನ್ಯ ಹಾಗೂ ಎಸ್‌ಸಿ/ಎಸ್‌ಟಿ ಅಟ್ರಾಸಿಟಿ ಕಾಯ್ದೆಯಡಿ ಹೆಚ್ಚುವರಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಈ ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದು, ಯಾವುದೇ ಪ್ರಭಾವಕ್ಕೂ ಒಳಗಾಗದೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *