ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಿರಂತರವಾಗಿ ನಡೆಯುತ್ತಿರುವ ಅಕ್ರಮ ಹಾಗೂ ಹಗರಣಗಳ ಹಿನ್ನೆಲೆಯಲ್ಲಿ, ಸಂಸ್ಥೆಯನ್ನೇ ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಕುರಿತು ತಜ್ಞರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ನಡೆದ ಕಿಯೋನಿಕ್ಸ್ ಸಂಸ್ಥೆಯ 50ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಪಿಎಸ್ಸಿ ಕಾರ್ಯಾಚರಣೆ ಹಾಗೂ ಹೈಕೋರ್ಟ್ ಇತ್ತೀಚೆಗೆ ನೀಡಿದ ಆದೇಶದ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
“ಆಯೋಗದ ಸದಸ್ಯರು ಅಂಗಡಿಯನ್ನೇ ತೆರೆದಿದ್ದಾರೆ”
ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ಕೆಪಿಎಸ್ಸಿಯಲ್ಲಿ ಖದೀಮರು ಸೇರಿಕೊಂಡಿದ್ದಾರೆ. ನಾವು ನಂಬಿಕೆ ಇಟ್ಟು ಆಯ್ಕೆ ಮಾಡಿ ಕಳುಹಿಸಿದ ಅಧಿಕಾರಿಗಳೇ ಈ ರೀತಿ ಮಾಡುತ್ತಿದ್ದಾರೆ. ಅಲ್ಲಿರುವ ಕೆಲ ಸದಸ್ಯರು ನೇಮಕಾತಿಯನ್ನೇ ಒಂದು ಅಂಗಡಿಯನ್ನಾಗಿ ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಈ ಬಗ್ಗೆ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದು, ಶೀಘ್ರದಲ್ಲೇ ಎಲ್ಲಾ ಸತ್ಯಾಸತ್ಯತೆಗಳು ಹೊರಬರಲಿವೆ” ಎಂದರು.
SIT ತನಿಖೆ ಸ್ವಾಗತಾರ್ಹ, ಆದರೆ ನೇಮಕ ಸರ್ಕಾರದ ಹಕ್ಕು
ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಶೇಷ ತನಿಖಾ ತಂಡ (SIT) ರಚನೆಗೆ ನೀಡಿದ ನಿರ್ದೇಶನವನ್ನು ಸ್ವಾಗತಿಸಿದ ಅವರು, “ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ಮತ್ತು ನಮ್ಮ ರಾಜ್ಯ ಪೊಲೀಸರು ಅತ್ಯಂತ ದಕ್ಷತೆಯಿಂದ ನಡೆಸುತ್ತಿದ್ದಾರೆ. ನ್ಯಾಯಾಲಯಕ್ಕೆ ಅಗತ್ಯವೆನಿಸಿದರೆ ನಮ್ಮ ಪೊಲೀಸರ ತನಿಖೆಯ ಉಸ್ತುವಾರಿಯನ್ನು ನೋಡಿಕೊಳ್ಳಬಹುದಿತ್ತು. SIT ರಚನೆ ಮಾಡಿದ್ದು ಸರಿಯೇ, ಆದರೆ ತನಿಖಾಧಿಕಾರಿಗಳನ್ನು ನೇಮಕ ಮಾಡುವ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರಕ್ಕೆ ನೀಡಬೇಕಿತ್ತು. ಅಧಿಕಾರಿಗಳ ನೇಮಕದ ವಿಚಾರದಲ್ಲಿ ಹೈಕೋರ್ಟ್ ನಿರ್ದೇಶನ ನೀಡಿರುವುದಕ್ಕೆ ಸಂಬಂಧಿಸಿದಂತೆ ದೆಹಲಿ ಸೇರಿದಂತೆ ವಿವಿಧ ಕಡೆಗಳಿಂದ ಕರೆಗಳು ಬಂದಿದ್ದು, ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗುವುದು” ಎಂದು ತಿಳಿಸಿದರು.
ಯುವಜನರ ಭವಿಷ್ಯವೇ ನಮಗೆ ಮುಖ್ಯ
ಉದ್ಯೋಗಾಕಾಂಕ್ಷಿಗಳ ಹಿತರಕ್ಷಣೆ ಸರ್ಕಾರದ ಮೊದಲ ಆದ್ಯತೆ ಎಂದ ಡಿ.ಕೆ. ಶಿವಕುಮಾರ್, “ನಮಗೆ ರಾಜ್ಯದ ಯುವಜನರ ಹಾಗೂ ಮಕ್ಕಳ ಭವಿಷ್ಯ ಮುಖ್ಯ. ಇದೇ ಕಾರಣಕ್ಕೆ ಸಿದ್ದರಾಮಯ್ಯನವರು ತಮ್ಮ ಹಿಂದಿನ ಆಡಳಿತಾವಧಿಯಲ್ಲಿ ಕೆಪಿಎಸ್ಸಿ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಿದ್ದರು. ನಾವು ಪಾರದರ್ಶಕತೆಗೆ ಆದ್ಯತೆ ನೀಡುತ್ತಿದ್ದರೂ ಅಧಿಕಾರಿಗಳು ಹಾದಿ ತಪ್ಪುತ್ತಿದ್ದಾರೆ. ನಾನು ಇಂಧನ ಸಚಿವನಾಗಿದ್ದ ಅವಧಿಯಲ್ಲಿ 22,000 ಲೈನ್ಮ್ಯಾನ್ ಹಾಗೂ ಎಂಜಿನಿಯರ್ಗಳ ಹುದ್ದೆಗಳನ್ನು ಅತ್ಯಂತ ಜಾಗರೂಕತೆಯಿಂದ ಹಾಗೂ ಪಾರದರ್ಶಕವಾಗಿ ಭರ್ತಿ ಮಾಡಿದ್ದೆ. ಅದಕ್ಕೂ ಮೊದಲು ಖಾಲಿ ಪೇಪರ್ನಲ್ಲಿ ಬರೆಸಿಕೊಳ್ಳುವ ಭ್ರಷ್ಟ ಪದ್ಧತಿಯಿತ್ತು, ಅದಕ್ಕೆ ನಾನು ಮುಕ್ತಿ ನೀಡಿದ್ದೆ” ಎಂದು ನೆನಪಿಸಿಕೊಂಡರು.





Leave a comment