SUDDIKSHANA KANNADA NEWS/ DAVANAGERE/ DATE:10-08-2024
ದಾವಣಗೆರೆ: ಚಿತ್ರದುರ್ಗದ ಸಿರಿಗರೆಯ ತರಳಬಾಳು ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಪರ ಹಳ್ಳಿ- ಹಳ್ಳಿಗಳ ಲಕ್ಷಾಂತರ ಮಂದಿ ನಿಲ್ಲುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಸ್ವತಃ ಗ್ರಾಮದ ಮುಖಂಡರು, ಸಮಾಜದ ಹಿರಿಯ ಮುಖಂಡರು, ಭಕ್ತರು ಸೇರಿ ಸಭೆ ನಡೆಸತೊಡಗಿದ್ದಾರೆ. ಶ್ರೀಗಳ ವಿರುದ್ಧ ಮಾಡಿರುವ ಆರೋಪಗಳ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸುವ ಜೊತೆಗೆ ಶ್ರೀಗಳ ಪರ ನಿಲ್ಲುವುದಾಗಿ ನಿರ್ಣಯ ಮಾಡತೊಡಗಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ಸೇರಿದಂತೆ ಈಗಾಗಲೇ ಹಲವು ಗ್ರಾಮಗಳಲ್ಲಿನ ಜನರು ಸಿರಿಗೆರೆ ಶ್ರೀಗಳ ಪರ ನಿಂತಿದ್ದು, ಶ್ರೀಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಅವರೇ ಗುರುಗಳಾಗಿ ಮುಂದುವರಿಯಬೇಕು. ನೀರಾವರಿ, ಶಿಕ್ಷಣ, ಸಮಾಜದ ಸಂಘಟನೆ ಸೇರಿದಂತೆ ಸಾವಿರಾರು ಒಳ್ಳೆಯ ಕಾರ್ಯ ಮಾಡಿದ್ದಾರೆ. ಆದ್ರೆ, ಕೆಲವರು ಶ್ರೀಗಳ ವಿರುದ್ಧ ಮಾಡಿರುವುದು ಭಕ್ತರ ಮನಸ್ಸಿಗೆ ಘಾಸಿ ತಂದಿದೆ. ಈ ಬೆಳವಣಿಗೆ ನಡೆಯಬಾರದಿತ್ತು. ನಾವೆಲ್ಲರೂ ಶ್ರೀಗಳ ಪರ ನಿಲ್ಲೋಣ, ಷಡ್ಯಂತ್ರ ಕೊನೆಗಾಣಿಸೋಣ ಎಂಬ ಧ್ಯೇಯವಾಕ್ಯದಡಿ ಸಭೆ ನಡೆಸಿ ಶ್ರೀಗಳ ಪರವಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ.
ಕೊಟ್ಟೂರಿನ ತೂಲಹಳ್ಳಿ ಗ್ರಾಮಸ್ಥರು ಸಭೆ ನಡೆಸಿ, ಸಿರಿಗೆರೆ ಶ್ರೀಗಳ ಜೊತೆ ನಿಲ್ಲುವುದಾಗಿ ನಿರ್ಣಯ ಅಂಗೀಕರಿಸಿ ಈ ಪತ್ರವನ್ನು ಶ್ರೀಗಳಿಗೆ ಕಳುಹಿಸಿಕೊಟ್ಟಿದ್ದಾರೆ.
ಪತ್ರದಲ್ಲೇನಿದೆ…?
ಪ್ರಸ್ತುತ ಮಠ ಹಾಗೂ ತಮ್ಮ ವಿರುದ್ಧ ನಡೆಯುತ್ತಿರುವ ವಿಷಾದಕರ ವಿದ್ಯಮಾನಗಳ ಕುರಿತಂತೆ ಆಗಸ್ಟ್ 10ರಂದು ತೂಲಹಳ್ಳಿ ಗ್ರಾಮದ ವಿಶ್ವಬಂಧು ಮರುಳಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರೆಲ್ಲರೂ ಸಭೆ ಸೇರಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದ್ದೇವೆ.
ತರಳಬಾಳು ಜಗದ್ಗುರುಗಳು ಹಾಗೂ ಮಠದ ಬಗ್ಗೆ ಸುಳ್ಳು ಆಪಾದನೆ ಮಾಡುತ್ತಿರುವ ವ್ಯವಸ್ಥಿತ ಗುಂಪಿನ ವಿರುದ್ಧ ಗಟ್ಟಿಯಾದ ಪ್ರತಿರೋಧವನ್ನು ನಾವು ಹೊಂದಿದ್ದೇವೆ.
ಮುಂದಿನ ದಿನಗಳಲ್ಲಿ ಬೃಹನ್ಮಠದ ಉತ್ತರಾಧಿಕಾರತ್ವ ಹಾಗೂ ಇನ್ನಿತರೆ ಯಾವುದೇ ವಿಷಯಗಳಿದ್ದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಕೈಗೊಳ್ಳುವ ಯಾವುದೇ ನಿರ್ಧಾರವನ್ನು ನಾವು ಪ್ರಶ್ನಾತೀತವಾಗಿ ಒಪ್ಪುತ್ತೇವೆ. ಅವರನ್ನು ಹಾಗೂ ಅವರು ಕೈಗೊಳ್ಳುವ ನಿರ್ಧಾರಗಳನ್ನು ಮನಃಪೂರ್ವಕವಾಗಿ ಒಪ್ಪಿಕೊಂಡು ಬೆಂಬಲಿಸುತ್ತೇವೆ.
ಈ ನಿರ್ಣಯವನ್ನು ಬಹಿರಂಗವಾಗಿ ಓದಿ, ಓದಿಸಿ, ಕೇಳಿಸಿಕೊಂಡು ನಮ್ಮ ಮನಃಪೂರ್ವಕವಾಗಿ ಒಪ್ಪಿ ನಮ್ಮ ಸಹಿಯನ್ನು ಮಾಡಿರುತ್ತೇವೆ ಎಂದು ಗ್ರಾಮದ ಮುಖಂಡರೆಲ್ಲರೂ ಮಾಹಿತಿ ನೀಡಿದ್ದಾರೆ.
ಈ ಮೂಲಕ ದಿನ ಕಳೆದಂತೆ ಸಿರಿಗೆರೆ ಶ್ರೀಗಳ ಬೆಂಬಲಕ್ಕೆ ಭಕ್ತರು ನಿಲ್ಲುತ್ತಿದ್ದು, ವಿರೋಧಿ ಗುಂಪಿನ ನಡೆಯತ್ತ ಚಿತ್ತ ನೆಟ್ಟಿದೆ. ಇನ್ನು ಶ್ರೀಗಳೇ ಬಹಿರಂಗವಾಗಿಯೇ ವಿರೋಧಿಗಳಿಗೆ ತಮ್ಮದೇ ಆದ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ಈಗ ಭಕ್ತರು ಅಖಾಡಕ್ಕೆ ಇಳಿದಿದ್ದು, ಮುಂದೆ ಯಾವ ಸ್ವರೂಪಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಶ್ರೀಗಳ ಬೆಂಬಲಕ್ಕೆ ನಿಲ್ಲುವವರ ಸಂಖ್ಯೆಯು ಹೆಚ್ಚಾಗುತ್ತಿದ್ದು, ಶ್ರೀಗಳಿಗೆ ಧೈರ್ಯದ ಜೊತೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ನಿಮ್ಮ ಪರವಾಗಿದ್ದೇವೆ ಎಂಬ ಸಂದೇಶ ರವಾನಿಸತೊಡಗಿದ್ದಾರೆ.