SUDDIKSHANA KANNADA NEWS/ DAVANAGERE/ DATE:15-08-2024
ದಾವಣಗೆರೆ: ಟೂರಿಂಗ್ ಟಾಕೀಸ್ ನಡೆಸುತ್ತಿರಲಿಲ್ವಾ? ಆಗ ಬೆಂಗಳೂರಿಗೆ ಹೋಗಿ ರೀಲ್ ತರುತ್ತಿದ್ದರು. ಈಗಿನ ರೀತಿ ಆಗ ಇಂಟರ್ ನೆಟ್ ಕನೆಕ್ಷನ್ ಇರಲಿಲ್ಲ. ಮಂಜಣ್ಣ ಮತ್ತು ಸಿದ್ದೇಶ್ವರ ಪಾಲುದಾರಿಕೆಯಲ್ಲಿ ಟೂರಿಂಗ್ ಟಾಕೀಸ್ ನಡೆಸುತ್ತಿದ್ದರು. ಖರ್ಚಿನ ಹಣ ಹೊಂದಿಸಲು ಚಿತ್ರದುರ್ಗಕ್ಕೆ ಹೋಗಿ ಪ್ಯಾಸೆಂಜರ್ ಅನ್ನು ಅಂಬಾಸಿಡರ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಪೆಟ್ರೋಲ್ ಇಲ್ಲವೇ ಡೀಸೆಲ್ ಖರ್ಚಿಗೆ. ಬಿಜೆಪಿಗೆ ಕೊಡುಗೆ ಏನು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ ವಿರುದ್ಧ ಮತ್ತೆ ಸಿಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯಲ್ಲಿ ಸಿದ್ದೇಶ್ವರ ಹೆಸರೇ ಕೇಳಿರಲಿಲ್ಲ. ಅಡಿಕೆಗೆ ಮಿಕ್ಸಿಂಗ್, ಚಾಕಿ, ಕಲರ್ ಹಾಕುವ ಕೆಲಸ ಮಾಡುತ್ತಿದ್ದರು. ಸಿದ್ದೇಶ್ವರರ ಅಪ್ಪ ಮಲ್ಲಿಕಾರ್ಜುನಪ್ಪ ಒಳ್ಳೆಯ ಮನುಷ್ಯ. ಸಮಾಜದ ಅಧ್ಯಕ್ಷರಾಗಿದ್ದರು. ಈ ಕಾರಣದಿಂದ ಬಿಜೆಪಿ ಅವರಿಗೆ ಟಿಕೆಟ್ ನೀಡಿತು. ಲೋಕಸಭೆ ಚುನಾವಣೆಯಲ್ಲಿ ಗೆದ್ದರು. ಇವನದ್ದು ಏನಿದೆ ಪರಿಶ್ರಮ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಕಳೆದ 20 ವರ್ಷಗಳಲ್ಲಿ ಒಂದಾದರೂ ಕೆಲಸ ಆಗಿದೆಯಾ? ಕುಂದುವಾಡ ಕೆರೆ ನಾನು ಮಾಡಿಸಿದ್ದು ಅಂತಾ ಹೇಳಿದ್ದಾನೆ. ಮಾಧ್ಯಮದವರು ನೀವೇ ಹೇಳಬೇಕು. ಇಬ್ಬರು ಬಾಡಿಗಾರ್ಡ್ ಇಟ್ಟುಕೊಂಡಿದ್ದಾರೆ. ಇವೆಲ್ಲಾ ನಡೆಯೋಲ್ಲ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಈಗ ಆಗಿ ಹೋಗಿದೆ, ಸೋತಿದ್ದೇವೆಂಬ ಕಾರಣಕ್ಕೆ ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೇಳಿದರು.