ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನೋಡ ಬನ್ನಿ….19 ವರ್ಷ ಬಳಿಕ ನಡೆಯುತ್ತಿರುವ ಹಳೇ ಕುಂದುವಾಡದ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಸೊಬಗು!

On: April 9, 2025 10:56 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:09-04-2025

ದಾವಣಗೆರೆ: ಬೇಸಿಗೆ ಬಂತೆಂದರೆ ಸಾಕು ಜಾತ್ರಾ ಮಹೋತ್ಸವಗಳ ಸಂಭ್ರಮ ಪ್ರಾರಂಭವಾಗುತ್ತದೆ. ಆಯಾ ಗ್ರಾಮದ, ಗ್ರಾಮದೇವತೆಗಳ ಆರಾಧನೆಯನ್ನು ಜಾತ್ರಾ ಮೂಲಕ ವೈಭವದಿಂದ ಆಚರಿಸುವ ಪರಿ ಎಲ್ಲೆಡೆ ನಡೆಯುತ್ತದೆ.

ಅದೇ ರೀತಿ ದಾವಣಗೆರೆಯ ಹಳೇಕುಂದುವಾಡದಲ್ಲಿ ಗ್ರಾಮದೇವತೆ ಆದಿಪರಾಶಕ್ತಿಯಾದ ಶ್ರೀ ಮಾರಿಕಾಂಬಾ ಜಾತ್ರೆಯು ಏಪ್ರಿಲ್ 1 ರಂದು ಘಟಸ್ಥಾಪನೆ ಮಾಡುವುದರೊಂದಿಗೆ ಆರಂಭವಾಗಿದೆ. ಕಳೆದ 2007 ರಲ್ಲಿ ನಡೆದ ದೇವಿಯ ಜಾತ್ರೆ, 19 ವರ್ಷಗಳ ನಂತರ ಈ ಬಾರಿ ನಡೆಸುತ್ತಿರುವುದು ವಿಶೇಷವಾಗಿದೆ. ಪ್ರತಿ ದಿನ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗುತ್ತಿದ್ದು, ಭಕ್ತರು ದೇವಿಯನ್ನು ಭಕ್ತಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಜಾತ್ರೆಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ 12 ರವರೆಗೂ ಜರುಗಲಿದೆ ಎಂದು ಮಾರಿಕಾಂಬ ಜಾತ್ರಾ ಸಮಿತಿ ತಿಳಿಸಿದೆ.

19 ವರ್ಷಗಳ ನಂತರ ನಡೆಯುತ್ತಿರುವ ಮಾರಿಕಾಂಬಾ ಜಾತ್ರೆಗೆ ಹಳೇ ಕುಂದುವಾಡ ಗ್ರಾಮವು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಗ್ರಾಮಸ್ಥರಲ್ಲಿ ಹುರುಪು ದುಪ್ಪಟ್ಟಾಗಿದೆ. ಊರಿನ ರಸ್ತೆಗಳು, ಮನೆ ಮನೆಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದು, ಮಾರಿಕಾಂಬಾ ದೇವಸ್ಥಾನದ ದ್ವಾರ ಬಾಗಿಲ ಅಲಂಕಾರಗೊಂಡು, ಎಲ್ಲರನ್ನು ಆಕರ್ಷಿಸುತ್ತಿದೆ. ಐದು ಮಂಟಪಗಳು ವೈಭವಯುತವಾಗಿ ಸಿಂಗಾರಗೊಂಡಿದೆ. ಪ್ರಮುಖ ರಸ್ತೆಗಳು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಊರಿನ ಮುಖ್ಯ ರಸ್ತೆಗಳು ಜಗಮಗಿಸುತ್ತಿವೆ, ರಸ್ತೆಯ ತುಂಬೆಲ್ಲಾ ಹಬ್ಬಕ್ಕೆ ಶುಭ ಕೋರುವ ಫ್ಲೆಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿವೆ.

ಜಾತ್ರೆಯ ಹಿನ್ನಲೆ ಕುರಿ ಕಾಳಗ ಆಯೋಜಿಸಲಾಗಿತ್ತು. ಊರ ತುಂಬೆಲ್ಲಾ ನೆಂಟರು-ಇಷ್ಟರು ಬಂದಿಳಿದಿದ್ದು, ಸಸ್ಯಹಾರಿಗಳಿಗೆ ಮೃಷ್ಟಾನ್ನ ಭೋಜನಕ್ಕೆ ತಯಾರಿ ನಡೆದಿದ್ದರೆ, ಬಾಡೂಟಕ್ಕೆ ಸಾವಿರಾರು ಕುರಿಗಳನ್ನು ಖರೀದಿ ಮಾಡಲಾಗಿದೆ. ಊರಿಗೆ ಊರೇ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದೆ.

ಮಂಗಳವಾರ ರಾತ್ರಿ ಚೌತಮನೆಯಿಂದ ಅಮ್ಮನ ದೇವಸ್ಥಾಕ್ಕೆ “ದೊಡ್ಡ ಎಡೆ” ಒಯ್ಯುವುದು ವಿಶೇಷ. ನಂತರ ಶ್ರೀ  ಮಾರಿಕಂಬ “ರಥೋತ್ಸವವು” ಬಹು ವೈಭವದಿಂದ ಸಾಗಿ ಆಮ್ಮನ ಕಟ್ಟೆಯಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ, ಬೆಳಗಿನಜಾವ ಶ್ರೀ ದೇವಿಯ ಘಟ ಪೂಜೆ, ಮಹಾ ಪೂಜೆ ಹಾಗೂ ಗ್ರಾಮ ಪ್ರದಕ್ಷಿಣೆ, ಕಾರ್ಯಕ್ರಮಗಳು ಮಹಾಮಂಗಳಾರತಿಯೊಂದಿಗೆ ನಡೆಯುವುದು ವಾಡಿಕೆ.

ಜಾತ್ರಾ ಪ್ರಯುಕ್ತ ಬುಧವಾರ ಶ್ರೀ ದೇವಿಗೆ ಗ್ರಾಮದ ಭಕ್ತರಿಂದ ಉಡಿ ತುಂಬಿಸುವುದು ಹಾಗೂ ಭಕ್ತರ ವಿವಿಧ ಸೇವಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 1 ರಿಂದ 6 ಘಂಟೆಯವರೆಗೆ ಪರಂಪರಾಗತ “ಹಾಸ್ಯಗಾರರಿಂದ” ಮನರಂಜನೆ ಕಾರ್ಯಕ್ರಮ ನಡೆಯಲಿದೆ.

ಏ. 10 ಗುರುವಾರ ಶ್ರೀದೇವಿಗೆ ಪೂಜೆ, ಮಹಾಮಂಗಳಾರತಿ, ಭಕ್ತರ ಸೇವಾ ಕಾರ್ಯಗಳು, ಮನೋರಂಜನೆ ಕಾರ್ಯಕ್ರಮ, ನಂತರ ಮಧ್ಯಾಹ್ನ 3 ರಿಂದ 6 ಘಂಟೆಯವರೆಗೆ “ಪೋತರಾಜ” ನಿಂದ ವಿವಿಧ ಕಾರ್ಯಕ್ರಮ ನಡೆಯಲಿದೆ. ನಂತರ “ರಸಮಂಜರಿ” ಕಾರ್ಯಕ್ರಮಗಳು ಜರುಗಲಿದೆ.

ಏ.11 ರಂದು ಶ್ರೀ ದೇವಿಗೆ ಪೂಜೆ, ಮಹಾಮಂಗಳಾರತಿ, ಮನೋರಂಜನೆ ಕಾರ್ಯಕ್ರಮ ನಡೆದು, ಸಾಯಂಕಾಲ `ಹುಲುಸು’ ಹೊಡೆಯಲಾಗುವುದು. ಏ.12 ರಂದು ಶ್ರೀ ದೇವಿಯ ‘ಮೋಚು” ವ ಕಾರ್ಯಕ್ರಮದೊಂದಿಗೆ (ಬಳೆ ತೆಗೆಯುವುದು) ಶ್ರೀ ಮಾರಿಕಾಂಬದೇವಿ ಜಾತ್ರೆಯ ಕಾರ್ಯಕ್ರಮ ಮುಕ್ತಾಯಗೊಳ್ಳುವುದು ಎಂದು ಶ್ರೀ ಮಾರಿಕಾಂಬದೇವಿ ಜಾತ್ರಾ ಉತ್ಸವ ಸಮಿತಿಯ ಸದಸ್ಯರು ಹಾಗೂ ಹಳೇಕುಂದುವಾಡ ಗ್ರಾಮಸ್ಥರು ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment