ಮುಂಬೈ: ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ (ಜೂನ್ 23 ರಂದು) ಇಂದು ವಿವಾಹವಾಗಲಿದ್ದಾರೆ. ಅವರ ಮದುವೆಗೆ ಸಂಬಂಧಿಸಿದ ಪ್ರತಿಯೊಂದು ಅಪ್‌ಡೇಟ್‌ಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ತುಂಬಾ ಕುತೂಹಲ ಹೊಂದಿದ್ದಾರೆ. ಇಬ್ಬರ ಮದುವೆ ಕಾರ್ಯಕ್ರಮಗಳು ಶುರುವಾಗಿವೆ.
ಸೋನಾಕ್ಷಿ ಕೈಗೂ ಭಾವಿ ಪತಿ ಜಹೀರ್ ಹೆಸರಲ್ಲಿ ಮೆಹಂದಿ ಹಚ್ಚಲಾಗಿದೆ. ಇತ್ತೀಚೆಗಷ್ಟೇ ನಟಿಯ ಕುಟುಂಬಕ್ಕೆ ಅವರ ಮದುವೆಯಲ್ಲಿ ಸಂತೋಷವಿಲ್ಲ ಎಂಬ ವದಂತಿಗಳು ಹಬ್ಬಿದ್ದವು. ಈ ವರದಿಗಳಿಗೆ ಅಂತ್ಯ ಹಾಡುವ ಮೂಲಕ, ಶತ್ರುಘ್ನ ಸಿನ್ಹಾ ಇತ್ತೀಚೆಗೆ ಜಹೀರ್ ಮನೆಯಲ್ಲಿ ಕಾಣಿಸಿಕೊಂಡರು. ಮದುವೆ ಕಾರ್ಯಕ್ರಮದ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿ ಸೋನಾಕ್ಷಿ ಸಿನ್ಹಾ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರ ಜತೆ ಮದುವೆಗೆ ಸಜ್ಜಾಗಿದ್ದಾರೆ.
ಈಗಾಗಲೇ ವಿವಾಹದ ಕಾರ್ಯಕ್ರಮಗಳು ಆರಂಭವಾಗಿದ್ದು, ಸೋನಾಕ್ಷಿ ಸಿನ್ಹಾ ಮದುವೆಯ ಬಳಿಕ ಜಹೀರ್ ಇಕ್ಬಾಲ್ ಅವರ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂಬ ಮಾತುಗಳು ಹರಿದಾಡಿತ್ತು. ಇದೀಗ ಈ ಬಗ್ಗೆ ಜಹೀರ್ ಅವರ ತಂದೆ, ಉದ್ಯಮಿ ಇಟ್ಬಾಲ್ ರತ್ನಾಸಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಜಹೀರ್ ಮದುವೆ ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ನಡೆಯಲಿದೆ. ಮದುವೆ ಬಳಿಕ ಸೋನಾಕ್ಷಿ ಇಸ್ಲಾಂಗೆ ಮತಾಂತರಗೊಳ್ಳುವುದಿಲ್ಲ. ಈ ಮದುವೆ ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ ಎಂದಿದ್ದಾರೆ. ನಟಿ ಸೋನಾಕ್ಷಿ ಮತ್ತು ಇಕ್ಬಾಲ್ 2022ರಲ್ಲಿ ಬಿಡುಗಡೆಯಾದ ‘ಡಬಲ್ ಎಕ್ಸ್‌ಎಲ್’ ಚಿತ್ರದಲ್ಲಿ ನಟಿಸಿದ್ದರು. ಅಂದಿನಿಂದ ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಮುಂಬೈನ ಬಾಸ್ಟಿಯನ್‌ನಲ್ಲಿ ಸೋನಾಕ್ಷಿ ಮತ್ತು ಜಹೀರ್ ಮದುವೆಯ ಆರತಕ್ಷತೆಯನ್ನು ಆಯೋಜಿಸಲಾಗಿದೆ. ಸೋನಾಕ್ಷಿ ಅವರ ಮದುವೆಗೆ ನಟ ಸಲ್ಮಾನ್ ಖಾನ್, ಹುಮಾ ಖುರೇಷಿ, ಶಾರುಖ್ ಖಾನ್ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗುವ ಸಾಧ್ಯತೆಯಿದೆ.